ಬೆಂಗಳೂರು : ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಧ್ವಾಜಾರೋಹಣದ ವೇಳೆ 'ವಂದೇ ಮಾತರಂ' ಗೀತೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅಪಮಾನ ಮಾಡಿದ್ದಾರೆ ಎಂಬ ಆರೋಪ ಹಾಗೂ ವಿವಾದಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ 'ವಂದೇ ಮಾತರಂ' ಗೀತೆಯನ್ನು ಪೂರ್ಣವಾಗಿ ಹಾಡುವುದಿಲ್ಲ, ಕೇವಲ ಎರಡು ಪ್ಯಾರಾಗಳನ್ನಷ್ಟೇ ಹಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಬಂಕಿಮಚಂದ್ರ ಚಟರ್ಜಿ ಅವರು ರಚಿಸಿರುವ ಈ ಗೀತೆಯ ವಿರುದ್ಧ ಕಾಂಗ್ರೆಸ್‌ಗೆ ಯಾವುದೇ ವಿರೋಧವಿಲ್ಲ. ಆದರೆ ಪಕ್ಷದ ವೇದಿಕೆಗಳಲ್ಲಿ ಮೊದಲ ಎರಡು ಪ್ಯಾರಾ ಮಾತ್ರ ಹಾಡಲಾಗುವುದು, ನೇಣಿಗೆ ಹಾಕಿದರೂ ಅಥವಾ ಜೈಲಿಗೆ ತಳ್ಳಿದರೂ ಈ ನಿಲುವಿಗೆ ಬದ್ಧ ಎಂದಿದ್ದಾರೆ. ಆದರೆ, ರಾಜ್ಯದ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪೂರ್ಣ ಗೀತೆ ಹಾಡುವುದು ಕಾನೂನು ಪಾಲನೆ ಮಾಡುವ ಚುನಾಯಿತ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದರು.
ಇದೇ ವೇಳೆ ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ ಹರಿಪ್ರಸಾದ್, ವಂದೇ ಮಾತರಂ ಅನ್ನು ಕಡ್ಡಾಯಗೊಳಿಸುವ ಮೂಲಕ ರಾಷ್ಟ್ರಗೀತೆ 'ಜನಗಣಮನ'ವನ್ನು ಎರಡನೇ ದರ್ಜೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಸೋನಿಯಾ ಗಾಂಧಿ ಅವರ ಮೇಲಿನ ಆರೋಪವು ಆರ್‌ಎಸ್‌ಎಸ್‌ನ ಕುತಂತ್ರವಾಗಿದ್ದು, ಈ ವಿಚಾರವನ್ನು ಮುಂದಿಟ್ಟುಕೊಂಡು ದೇಶದಲ್ಲಿ ಸೌಹಾರ್ದತೆಯನ್ನು ಹಾಳು ಮಾಡಲು ಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.