ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಗಂಭೀರ ಲೋಪಗಳ ಕುರಿತು ಚರ್ಚಿಸಲು ಬಹುಭಾಷಾ ನಟ ಪ್ರಕಾಶ್ ರಾಜ್ ನೇತೃತ್ವದ 'ಎದ್ದೇಳು ಕರ್ನಾಟಕ' ಸಂಘಟನೆಯ ನಿಯೋಗವು ವಿಧಾನಸೌಧದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಆರ್ಥಿಕ ಸಲಹೆಗಾರ ಎಲ್.ಕೆ. ಅಥೀಕ್ ಉಪಸ್ಥಿತರಿದ್ದರು.
ರಾಜ್ಯದಲ್ಲಿ ನಡೆಯುತ್ತಿರುವ 1.9 ಕೋಟಿಗೂ ಹೆಚ್ಚು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಸಹಜ ಪ್ರಮಾಣದಲ್ಲಿ ಹೆಸರುಗಳನ್ನು ಕೈಬಿಡಲಾಗುತ್ತಿದೆ ಎಂದು ನಿಯೋಗವು ಆತಂಕ ವ್ಯಕ್ತಪಡಿಸಿದೆ. ಸುಮಾರು 3 ಸಾವಿರಕ್ಕೂ ಹೆಚ್ಚು ಬೂತ್‌ಗಳಲ್ಲಿ ಶೇ. 60ಕ್ಕೂ ಅಧಿಕ ಹೆಸರುಗಳನ್ನು ಡಿಲೀಟ್ ಮಾಡಲಾಗುತ್ತಿದ್ದು, ಜೀವಂತವಾಗಿರುವವರನ್ನೂ 'ಮೃತರು' (Dead) ಎಂದು ಮತ್ತು ಮನೆ ಬದಲಾಯಿಸಿದವರನ್ನು 'ಗೈರುಹಾಜರು' (Absent) ಎಂದು ತೋರಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ತರಬೇತಿ ಇಲ್ಲದ ಬಿಎಲ್‌ಒಗಳಿಂದ ತರಾತುರಿಯಲ್ಲಿ ಈ ಪ್ರಕ್ರಿಯೆ ನಡೆಯುತ್ತಿರುವುದರಿಂದ, SIR ಪ್ರಕ್ರಿಯೆಯನ್ನು ಕನಿಷ್ಠ ಮೂರು ತಿಂಗಳು ವಿಸ್ತರಿಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಬೇಕು, ಮತ್ತೊಮ್ಮೆ ಮನೆಮನೆಗೆ ತೆರಳಿ ಫಾರ್ಮ್ 6 ಮತ್ತು 8 ನೀಡಿ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಅವಕಾಶ ನೀಡಬೇಕು ಮತ್ತು ಸರ್ಕಾರದಿಂದ ವ್ಯಾಪಕ ಜಾಗೃತಿ ಅಭಿಯಾನ ನಡೆಸಬೇಕು ಎಂದು ನಿಯೋಗವು ಆಗ್ರಹಿಸಿದೆ.