image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಹನೂರು ಎನ್‌ಕೌಂಟರ್ 'ಉದ್ದೇಶಪೂರ್ವಕ ಕೊಲೆ': ತಪ್ಪು ಮಾಡಿದ ಅಧಿಕಾರಿಗಳನ್ನು ಜೈಲಿಗಟ್ಟಲು ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಆಗ್ರಹ

ಹನೂರು ಎನ್‌ಕೌಂಟರ್ 'ಉದ್ದೇಶಪೂರ್ವಕ ಕೊಲೆ': ತಪ್ಪು ಮಾಡಿದ ಅಧಿಕಾರಿಗಳನ್ನು ಜೈಲಿಗಟ್ಟಲು ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಆಗ್ರಹ

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ ಬಡವರು ಬಲಿಯಾಗಿರುವುದು ಆಕಸ್ಮಿಕವಲ್ಲ, ಅದೊಂದು 'ಉದ್ದೇಶಪೂರ್ವಕ ಕೊಲೆ' ಎಂದು ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಶಾಸಕ (ಎಂಎಲ್ಸಿ) ಕಿಶೋರ್ ಕುಮಾರ್ ಪುತ್ತೂರು ವಿಧಾನ ಪರಿಷತ್ತಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಅವರು, ಅರಣ್ಯ ಹಾಗೂ ಗೃಹ ಇಲಾಖೆಯ ವೈಫಲ್ಯಗಳನ್ನು ಕಟುವಾಗಿ ವಿಮರ್ಶಿಸಿದರು. ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಿರುವುದಾಗಿ ಸಚಿವರು ನೀಡಿರುವ ಹೇಳಿಕೆಯನ್ನು ಖಂಡಿಸಿದ ಕಿಶೋರ್ ಕುಮಾರ್, 10 ಲಕ್ಷ ರೂಪಾಯಿ ಕೊಟ್ಟ ತಕ್ಷಣ ಹೋದ ಜೀವ ವಾಪಸ್ ಬರುವುದಿಲ್ಲ ಹಾಗೂ ಆ ಬಡ ಕುಟುಂಬಗಳ ಆಕ್ರಂದನಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದರು. ಮೃತರ ಕುಟುಂಬಕ್ಕೆ ಸರ್ಕಾರ ತಕ್ಷಣವೇ ಶಾಶ್ವತ ಪರಿಹಾರ ಹಾಗೂ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.

ಶಂಕಿತರು ಬೇಟೆಯಾಡಲು ಹೋಗಿದ್ದರೂ ಅವರನ್ನು ಬಂಧಿಸಿ ಕಾನೂನು ಪ್ರಕಾರ ಶಿಕ್ಷಿಸಬಹುದಾಗಿತ್ತು ಅಥವಾ ಅನಿವಾರ್ಯ ಪರಿಸ್ಥಿತಿಯಲ್ಲಿ ಸೊಂಟದ ಕೆಳಗೆ ಗುಂಡು ಹಾರಿಸಬಹುದಿತ್ತು. ಆದರೆ ನೇರವಾಗಿ ಎದೆಗೆ ಗುಂಡು ಹಾರಿಸಿರುವುದು ಅರಣ್ಯ ಸಿಬ್ಬಂದಿ ಮತ್ತು ಸ್ಥಳೀಯರ ನಡುವಿನ ವೈಷಮ್ಯದ ಹಿನ್ನೆಲೆಯಲ್ಲಿ ನಡೆದಿರುವ ಉದ್ದೇಶಪೂರ್ವಕ ಹತ್ಯೆಯಾಗಿದೆ ಎಂದು ಅವರು ಆರೋಪಿಸಿದರು. ಈ ಘಟನೆಗೆ ಕಾರಣರಾದ ಅಧಿಕಾರಿಗಳನ್ನು ಕೂಡಲೇ ಪತ್ತೆ ಹಚ್ಚಿ, ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕು ಎಂದು ಕಟ್ಟುನಿಟ್ಟಾಗಿ ಒತ್ತಾಯಿಸಿದರು.

ಮತ್ತೊಂದೆಡೆ, ಕಾಡುಪ್ರಾಣಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ರೈತರು ಇಟ್ಟುಕೊಂಡಿರುವ ಸುಮಾರು 15,000 ಬಂದೂಕುಗಳ ಲೈಸೆನ್ಸ್ ನವೀಕರಣ ಮಾಡದೆ ಸರ್ಕಾರ ಕಿರುಕುಳ ನೀಡುತ್ತಿದೆ ಎಂದರು. ಅರಣ್ಯ ಇಲಾಖೆ ಸಿಬ್ಬಂದಿಗೆ ಡ್ರೋನ್, ನೈಟ್ ವಿಜನ್ ಕ್ಯಾಮೆರಾದಂತಹ ಆಧುನಿಕ ತಂತ್ರಜ್ಞಾನ ಹಾಗೂ ಸೂಕ್ತ ತರಬೇತಿ ನೀಡದೆ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಎನ್‌ಕೌಂಟರ್ ನಂತರ ಆಕ್ರೋಶಗೊಂಡ ಸಾರ್ವಜನಿಕರು 9 ವಸತಿಗೃಹಗಳಿಗೆ ಬೆಂಕಿ ಹಚ್ಚಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿರುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Category
ಕರಾವಳಿ ತರಂಗಿಣಿ