image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬ್ಯಾಂಕರ್ಸ್ ಬುಕ್ಸ್ ಎವಿಡೆನ್ಸ್ ಮಸೂದೆ 2026 ಲೋಕಸಭೆಯಲ್ಲಿ ಅಂಗೀಕಾರ: ಡಿಜಿಟಲ್ ಬ್ಯಾಂಕಿಂಗ್ ದಾಖಲೆಗಳಿಗೆ ಕಾನೂನು ಮಾನ್ಯತೆ

ಬ್ಯಾಂಕರ್ಸ್ ಬುಕ್ಸ್ ಎವಿಡೆನ್ಸ್ ಮಸೂದೆ 2026 ಲೋಕಸಭೆಯಲ್ಲಿ ಅಂಗೀಕಾರ: ಡಿಜಿಟಲ್ ಬ್ಯಾಂಕಿಂಗ್ ದಾಖಲೆಗಳಿಗೆ ಕಾನೂನು ಮಾನ್ಯತೆ

ನವದೆಹಲಿ : ದೇಶೀಯ ಹಣಕಾಸು ಮತ್ತು ಬ್ಯಾಂಕಿಂಗ್ ವಲಯವನ್ನು ಆಧುನಿಕ ಡಿಜಿಟಲ್ ಯುಗಕ್ಕೆ ತಕ್ಕಂತೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಶಾಸಕಾಂಗ ಸುಧಾರಣೆ ತಂದಿದ್ದು, ಲೋಕಸಭೆಯು 'ಬ್ಯಾಂಕರ್ಸ್ ಬುಕ್ಸ್ ಎವಿಡೆನ್ಸ್ ಬಿಲ್ 2026' ಅನ್ನು ಅಂಗೀಕರಿಸಿದೆ. ಬ್ರಿಟಿಷ್ ಆಳ್ವಿಕೆಯ 135 ವರ್ಷಗಳಷ್ಟು ಹಳೆಯದಾದ 'ಬ್ಯಾಂಕರ್ಸ್ ಬುಕ್ಸ್ ಎವಿಡೆನ್ಸ್ ಆಕ್ಟ್ - 1891' ಅನ್ನು ರದ್ದುಗೊಳಿಸಿ, ಆಧುನಿಕ ತಾಂತ್ರಿಕ ಬೆಳವಣಿಗೆಗಳನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಈ ನೂತನ ಮಸೂದೆಯನ್ನು ಜಾರಿಗೆ ತರಲಾಗುತ್ತಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಈ ಹೊಸ ಕಾನೂನು, ಪ್ರಸ್ತುತ ಡಿಜಿಟಲ್ ಯುಗದಲ್ಲಿ ನಡೆಯುತ್ತಿರುವ ಹಣಕಾಸಿನ ವಹಿವಾಟುಗಳಿಗೆ ಸೂಕ್ತ ಕಾನೂನುಬದ್ಧತೆಯನ್ನು ಒದಗಿಸುತ್ತದೆ ಹಾಗೂ ನ್ಯಾಯಾಲಯಗಳಲ್ಲಿ ಸಾಕ್ಷ್ಯಗಳನ್ನು ಪ್ರಸ್ತುತಪಡಿಸುವ ಪ್ರಕ್ರಿಯೆಯನ್ನು ಅತ್ಯಂತ ಸರಳೀಕರಿಸುತ್ತದೆ. ಹಳೆಯ ಕಾನೂನು ಭೌತಿಕ ಲೆಡ್ಜರ್‌ಗಳು ಮತ್ತು ಕೈಬರಹದ ದಾಖಲೆಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈ ಹೊಸ ಶಾಸನವು ಯುಪಿಐ, ನೆಟ್ ಬ್ಯಾಂಕಿಂಗ್, ಡಿಜಿಟಲ್ ಡೇಟಾ, ಕ್ಲೌಡ್ ಸ್ಟೋರೇಜ್ ಮತ್ತು ವಿಪತ್ತು ಚೇತರಿಕೆ (ಡಿಸಾಸ್ಟರ್ ರಿಕವರಿ) ಸರ್ವರ್‌ಗಳಲ್ಲಿನ ಎಲ್ಲಾ ದಾಖಲೆಗಳನ್ನು ನ್ಯಾಯಾಲಯಗಳಲ್ಲಿ ಪ್ರಾಥಮಿಕ ಪುರಾವೆಯಾಗಿ ಗುರುತಿಸಲು ಹಾದಿ ಸುಗಮಗೊಳಿಸಿದೆ.

ಇದರೊಂದಿಗೆ, 'ಐಟಿ ಕಾಯಿದೆ-2000' ಅಡಿಯಲ್ಲಿ ಪ್ರಮಾಣೀಕರಿಸಲಾದ ಡಿಜಿಟಲ್ ಮತ್ತು ಎಲೆಕ್ಟ್ರಾನಿಕ್ ಸಹಿಗಳಿಗೆ ಸಂಪೂರ್ಣ ಕಾನೂನು ಮಾನ್ಯತೆ ನೀಡಲಾಗಿದೆ. ಇದು ಆರ್ಥಿಕ ಅಪರಾಧಗಳು, ಚೆಕ್ ಬೌನ್ಸ್ ಹಾಗೂ ಸಾಲ ವಸೂಲಾತಿಯಂತಹ ಪ್ರಕರಣಗಳ ತನಿಖೆಯನ್ನು ಮತ್ತಷ್ಟು ವೇಗಗೊಳಿಸಲಿದೆ. ಈ ನೂತನ ಕಾನೂನು ಬ್ಯಾಂಕಿಂಗ್ ಅಧಿಕಾರಿಗಳಿಗೂ ಸಹ ದೊಡ್ಡ ರಿಲೀಫ್ ನೀಡಲಿದೆ. ಬ್ಯಾಂಕುಗಳು ನೇರವಾಗಿ ಭಾಗಿಯಾಗದ ಪ್ರಕರಣಗಳಲ್ಲಿ, ನ್ಯಾಯಾಲಯವು ವಿಶೇಷ ಆದೇಶ ನೀಡದ ಹೊರತು ಅಧಿಕಾರಿಗಳು ಭೌತಿಕ ದಾಖಲೆಗಳೊಂದಿಗೆ ಖುದ್ದಾಗಿ ಹಾಜರಾಗುವ ಅಗತ್ಯವಿರುವುದಿಲ್ಲ. ಇದು ಬ್ಯಾಂಕ್ ನೌಕರರ ಮೇಲಿನ ಅನಗತ್ಯ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ಪ್ರಮಾಣೀಕೃತ ಡಿಜಿಟಲ್ ಪುರಾವೆಗಳ ಮೂಲಕ ಕಾನೂನು ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ನೆರವಾಗಲಿದೆ ಎಂದು ವಿಶ್ಲೇಷಸಲಾಗುತ್ತಿದೆ.

Category
ಕರಾವಳಿ ತರಂಗಿಣಿ