ಹಾವೇರಿ: ಚುನಾವಣಾ ಪ್ರಚಾರಕ್ಕೆ ಬರುವ ಸ್ಟಾರ್ ಪ್ರಚಾರಕರ ಜೊತೆ ಮಾತುಕತೆ ನಡೆಯುತ್ತಿದೆ. ಸ್ಟಾರ್ ಪ್ರಚಾರಕರ ಕುರಿತು ಪಕ್ಷ ತೀರ್ಮಾನ ಮಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಸಂದರ್ಭದಲ್ಲಿ ಹಾನಗಲ್ ತಾಲೂಕು ಮಾಸಣಕಟ್ಟಿ ಗ್ರಾಮದಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ನಮಗೆ ಜನರಿಂದ ಅದ್ಭುತವಾದ ಪ್ರತಿಕ್ರಿಯೆ ಸಿಗುತ್ತಿದೆ. ಜನ ಬೆಂಬಲ ಕೊಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಗಾಳಿ ಕರ್ನಾಟಕದ ಉದ್ದಗಲಕ್ಕೂ ಇದೆ ಎಂದರು. ನಟ ಸುದೀಪ್ ಸೇರಿದಂತೆ ಸ್ಟಾರ್ ಪ್ರಚಾರಕರಿಂದ ಬಿಜೆಪಿ ಪರ ಪ್ರಚಾರ ಮಾಡುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಾತುಕತೆ ನಡೆಯುತ್ತಿದೆ. ಯಾರೂ ಬರುವುದು ಇನ್ನೂ ಖಚಿತವಾಗಿಲ್ಲ. ಎಲ್ಲವೂ ಪಕ್ಷದಿಂದ ತೀರ್ಮಾನ ಆಗುತ್ತದೆ ಎಂದರು. ಹಲವು ಕ್ಷೇತ್ರಗಳಿಗೆ ಹಾಲಿ ಬಿಜೆಪಿ ಅಭ್ಯರ್ಥಿಗಳ ಬದಲಾವಣೆಗೆ ಒತ್ತಡ ಹೇರುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕರಡಿ ಸಂಗಣ್ಣ ಅವರಿಗೆ ಮಾತಾಡಿದ್ದೇನೆ, ಅವರೂ ಪಕ್ಷದ ತೀರ್ಮಾನವನ್ನು ಒಪ್ಪಿಕೊಂಡಿದ್ದಾರೆ. ಇಂದು ಯಡಿಯೂರಪ್ಪನವರು ದಾವಣಗೆರೆಗೆ ಹೋಗುತ್ತಾರೆ, ದಾವಣಗೆರೆಯದ್ದೂ ಸರಿಯಾಗಲಿದೆ. ನಾಳೆ ಯಡಿಯೂರಪ್ಪ ಬೆಳಗಾವಿಗೆ ಹೋಗುತ್ತಾರೆ, ಅಲ್ಲಿಯೂ ಕೂಡಾ ಸರಿಯಾಗುತ್ತದೆ ಎಂದರು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆಗೆ ಬೆಂಬಲ ನೀಡುವುದಿಲ್ಲ ಎಂಬ ಶಾಸಕ ಎಸ್ ಟಿ ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಉಹಾಪೋಹಗಳಿಗೆ ನಾನು ಉತ್ತರ ಕೊಡುವುದಿಲ್ಲ. ಅವರವರ ನಿರ್ಣಯಕ್ಕೆ ಅವರೇ ಉತ್ತರ ಕೊಡುತ್ತಾರೆ ಎಂದರು. ಯಡಿಯೂರಪ್ಪ ಆಪ್ತರಿಗೆ ಸಿಎಂ ಸಿದ್ದರಾಮಯ್ಯ ಗಾಳ ಹಾಕಿರುವ ಕುರಿತು ಕೇಳಿದ ಪ್ರಶ್ನೆಗೆ ಚುನಾವಣೆ ಯುದ್ದ ಭೂಮಿಯಲ್ಲಿ ಅವರವರ ರಣತಂತ್ರ ಅವರು ಮಾಡುತ್ತಾರೆ. ನಮ್ಮ ರಣತಂತ್ರ ನಾವು ಮಾಡುತ್ತೇವೆ. ಜನ ಮಾಲೀಕರು, ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.