ಬೆಂಗಳೂರು: ಸರ್ಕಾರ ಹಾಗೂ ವಿವಿಧ ಸೊಸೈಟಿಗಳಿಂದ ಪಡೆದ ನಿವೇಶನಗಳಲ್ಲಿ ಐದು ವರ್ಷದೊಳಗೆ ಮನೆ ನಿರ್ಮಿಸಿಕೊಳ್ಳಬೇಕು, ಇಲ್ಲದಿದ್ದರೆ ಕಟ್ಟಿರುವ ಹಣವನ್ನು ಬಡ್ಡಿ ಸಮೇತ ಹಿಂತಿರುಗಿಸಿ ನಿವೇಶನವನ್ನು ವಾಪಸ್ ಪಡೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಹೆಬ್ಬಾಳ ಜಂಕ್ಷನ್ ಬಳಿ 'ತ್ಯಾಜ್ಯದಿಂದ ಸ್ವಾತಂತ್ರ್ಯ' ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರು ನಗರದ ಸ್ವಚ್ಛತೆ ಮತ್ತು ನಾಗರಿಕ ಜವಾಬ್ದಾರಿಯ ಕುರಿತು ಕಟ್ಟುನಿಟ್ಟಿನ ಕ್ರಮಗಳ ನಿರ್ದೇಶನಗಳನ್ನು ಪ್ರಕಟಿಸಿದರು.
ಖಾಲಿ ನಿವೇಶನಗಳನ್ನು ಹಾಗೇ ಬಿಡುವುದರಿಂದ ಕಸದ ಸಮಸ್ಯೆ ಹೆಚ್ಚಾಗುತ್ತಿದೆ ಎಂದ ಮುಖ್ಯಮಂತ್ರಿಗಳು, ಬಿಡಿಎ ಅಥವಾ ಕಾರ್ಪೊರೇಷನ್ ವತಿಯಿಂದ ಹಂಚಿಕೆಯಾದ ಜಾಗಗಳಲ್ಲಿ ನಿಗದಿತ ಅವಧಿಯೊಳಗೆ ಮನೆ ಕಟ್ಟುವುದು ಮಾಲೀಕರ ಕರ್ತವ್ಯ ಎಂದು ತಿಳಿಸಿದರು. ಎಲ್ಲೆಂದರಲ್ಲಿ ಕಸ ಹಾಗೂ ನಿರ್ಮಾಣ ತ್ಯಾಜ್ಯವನ್ನು ಸುರಿಯುವ ವಾಹನಗಳನ್ನು ಯಾವುದೇ ಮುಲಾಜಿಲ್ಲದೆ ಮುಟ್ಟುಗೋಲು ಹಾಕಿಕೊಳ್ಳುವಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ ಎಂದರು.
ನಗರದ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಎನ್‌ಜಿಒಗಳು ಹಾಗೂ ಸಂಘ-ಸಂಸ್ಥೆಗಳು ನಾಲ್ಕೈದು ರಸ್ತೆಗಳ ಜವಾಬ್ದಾರಿಯನ್ನು ವಹಿಸಿಕೊಂಡು ಸ್ವಚ್ಛತೆ ಕಾಪಾಡಲು ಮುಂದಾಗಬಹುದು ಎಂದು ಅವರು ಆಹ್ವಾನಿಸಿದರು. ಇದೇ ವೇಳೆ ಕಾವೇರಿ ನೀರಿನ ಪರಿಸ್ಥಿತಿ ಕುರಿತು ಮಾತನಾಡಿ, ಅಣೆಕಟ್ಟುಗಳು ಭರ್ತಿಯಾಗುತ್ತಿದ್ದು, ಒಳಹರಿವು ಹಾಗೂ ಕಾನೂನು ತಜ್ಞರ ಸಲಹೆಯಂತೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.