image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪ್ರಕೃತಿಯ ಮಡಿಲಲ್ಲಿ ಪತ್ರಕರ್ತರ ಮೌನ ಸಂವಾದ: ಮಂಜು ಮುಸುಕಿನ ಕಾನನದೊಳಗೊಂದು ದಿನ

ಪ್ರಕೃತಿಯ ಮಡಿಲಲ್ಲಿ ಪತ್ರಕರ್ತರ ಮೌನ ಸಂವಾದ: ಮಂಜು ಮುಸುಕಿನ ಕಾನನದೊಳಗೊಂದು ದಿನ

ಮಂಜಿನ ಕಂಬಳಿಯ ಹೊದ್ದು, ಭೂರಮೆಯ ಮಡಿಲಲಿ ಮುತ್ತಿಕ್ಕಿದ ಇಬ್ಬನಿಯ ಹನಿಗಳಾಚೆ ಮೈಮರೆತು ನಿಂತಿತ್ತು ನಮ್ಮ ಮನಸ್ಸು. ಹೌದು ಅದೊಂದು ಸುಂದರ ಬೆಳಗು, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘವು ಜಿಲ್ಲಾ ಪತ್ರಕರ್ತರಿಗಾಗಿ ಆಯೋಜಿಸಿದ್ದ ಅಧ್ಯಯನ ಪ್ರವಾಸಕ್ಕೆ ನಾವು ಮಂಗಳೂರಿನ ಗದ್ದಲದ ಬದುಕಿಗೆ ವಿರಾಮ ನೀಡಿ ಹೊರಟಿದ್ದೆವು. ಮಂಗಳೂರಿನ ಪತ್ರಿಕಾ ಭವನದಿಂದ ನಮ್ಮನ್ನು ಹೊತ್ತು ಹೊರಟ ಬಸ್‌ಗಳು ಪಡುಬಿದ್ರೆಯ ಕರಾವಳಿ ತೀರದ ಉಪ್ಪುನೀರಿನ ಬಿಸಿಗಾಳಿಯನ್ನು ಹಿಂದೆ ಬಿಟ್ಟು, ಕಾರ್ಕಳದ ಐತಿಹಾಸಿಕ ನೆಲದಲ್ಲಿ ಪತ್ರಕರ್ತರ ಹೊಟ್ಟೆಯ ಹಸಿವನ್ನು ನೀಗಿಸಿ, ಮಾಳದ ಘಾಟಿ ಏರುತ್ತಿದ್ದಂತೆ, ಪ್ರಕೃತಿಯೊಂದು ನಿಗೂಢ ಹಾಗೂ ಮೋಹಕ ಲೋಕದ ಬಾಗಿಲನ್ನು ತೆರೆದು ಸ್ವಾಗತಿಸಿದ್ದು ನಮ್ಮಲ್ಲಿ ಕುಣಿದು ಕುಪ್ಪಳಿಸುವಂತಹ ಆಸೆಯನ್ನು ಹುಟ್ಟಿಸಿಬಿಟ್ಟಿತು.

ಎಸ್.ಕೆ. ಬಾರ್ಡರ್ ದಾಟಿ ಪಶ್ಚಿಮ ಘಟ್ಟದ ದುರ್ಗಮ ಹಾಗೂ ರಮಣೀಯ ಒಡಲಿಗೆ ಕಾಲಿಟ್ಟ ಆ ಕ್ಷಣ, ಜಗತ್ತಿನ ಸಕಲ ಕೋಲಾಹಲಗಳಿಂದ ದೂರಾಗಿ ಯಾವುದೋ ಒಂದು ಪವಿತ್ರ ಧಾಮದ ದೇವಸ್ಥಳದ ಗರ್ಭಗುಡಿಗೆ ಪ್ರವೇಶಿಸಿದ ಅನುಭವವಾಯಿತು. ಮಂಜಿನ ದಪ್ಪನೆಯ ತೆರೆಯನ್ನು ಸೀಳುತ್ತಾ ಸಾಗಿದ ನಮ್ಮ ವಾಹನದ ಚಕ್ರಗಳ ಅಕ್ಕ ಪಕ್ಕ ಹಸಿರಿನ ಕಂಬಳಿ ಹೊದ್ದ ಮಣ್ಣು ತನ್ನ ಅನಾದಿಕಾಲದ ಇತಿಹಾಸದ ಪುಟಗಳನ್ನು ಮೌನವಾಗಿ ತೆರೆದಿಟ್ಟಿತ್ತು. ನಮ್ಮ ಈ ಪಯಣ ಕೇವಲ ಒಂದು ಭೌತಿಕ ಸಂಚಾರವಾಗಿರದೆ, ನಿಸರ್ಗದ ಅಂತರಾಳದೊಂದಿಗೆ ನಮ್ಮ ಆತ್ಮ ಮಾಡುತ್ತಿದ್ದ ಮೌನ ಸಂವಾದಂತಿತ್ತು.
ಪ್ರತಿದಿನ ರಾಜಕೀಯ ಏಳುಬೀಳುಗಳು, ಅಪರಾಧಗಳ ವರದಿಗಳು, ಬ್ರೇಕಿಂಗ್ ನ್ಯೂಸ್‌ಗಳು ಮತ್ತು ದಿನನಿತ್ಯದ ಸಂಘರ್ಷಗಳ ಕಾಗದದ ಸುದ್ದಿಗಳನ್ನೇ ಜಾಲಾಡುವುದು ನಮ್ಮ ಕಾಯಕ. ಆದರೆ, ಈ ಬಾರಿ ಬರೆಯುವ ಕೈಗಳು ಮತ್ತು ನೋಟ್‌ಪ್ಯಾಡ್‌ಗಳು ಹಸಿರಿನ ಮಸಿಯತ್ತ ಒಲಿದಿದ್ದವು. ಕರಾವಳಿಯ ಮೈಸುಡುವ ಬಿಸಿಲಿನಿಂದ ಹೊರಬಂದು, ಪಶ್ಚಿಮ ಘಟ್ಟದ ಚುಮುಚುಮು ಚಳಿಗೆ ಮೈಯೊಡ್ಡಿ ಹೊರಟ ಈ ಪತ್ರಕರ್ತರ ಅಧ್ಯಯನ ಪ್ರವಾಸ ಒಂದು ದಿನದ ಮಟ್ಟಿಗೆ ವೃತ್ತಿಯ ಆಯಾಮವನ್ನೇ ಬದಲಾಯಿಸುವಂತಿತ್ತು. ಮನುಷ್ಯನ ಅರಿವಿಗೆ ಸಿಗದ ಅದೆಷ್ಟೋ ಸ್ಪಂದನೆಗಳು ಈ ಕಾನನದ ಮರಮಟ್ಟುಗಳಲ್ಲಿ ಜೀವಂತವಾಗಿವೆ ಎಂಬ ಸತ್ಯ ಮರುಕಳಿಸಿತು. ಅಕ್ಷರಗಳ ಹಿಂದೆ ಓಡುವ ನನಗಂತೂ ಇಲ್ಲಿನ ಅರಣ್ಯದ ಪ್ರತಿ ಎಲೆಯೂ ಓದಲೇಬೇಕಾದ ಒಂದು ಮಹಾಕಾವ್ಯದಂತೆ ಗೋಚರಿಸಿತು. ಮುಂದೆ ಸಾಗಿದಂತೆ ಈ ಮಳೆಗಾಲದಲ್ಲಿಯೂ ಹನುಮಾನ್ ಗುಂಡಿ ಜಲಪಾತ ವೀಕ್ಷಸುವ ಸುವರ್ಣಾವಕಾಶವನ್ನು ಅರಣ್ಯಾಧಿಕಾರಿಗಳು ನಮಗೆ ಮಾಡಿಕೊಟ್ಟರು.

ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ದಟ್ಟ ಅರಣ್ಯ ಪ್ರದೇಶದಲ್ಲಿ ಇರುವಂತಹ ಹನುಮಾನ್ ಗುಂಡಿ ಜಲಪಾತನ್ನು ‘ಸೂತನಬ್ಬಿ ಜಲಪಾತ’  ಎಂದು ಕೂಡ ಕರೆಯಲಾಗುತ್ತದೆ. ಈ ಜಲಪಾತಕ್ಕೆ ಪೌರಾಣಿಕ ಸಂಬಂಧವಿದೆ. ಹನುಮಂತನು ಈ ಪ್ರದೇಶದಲ್ಲಿ ಸಂಚರಿಸುವಾಗ ತನ್ನ ಕಾಲನ್ನು ಊರಿದ್ದರಿಂದ ಇಲ್ಲಿ ಗುಂಡಿ ನಿರ್ಮಾಣವಾಗಿ, ಕಾಲಕ್ರಮೇಣ ಇದಕ್ಕೆ ಹನುಮಾನ್ ಗುಂಡಿ ಎಂಬ ಹೆಸರು ಪ್ರಚಲಿತಕ್ಕೆ ಬಂತು ಎನ್ನುತ್ತಾರೆ ಹಿರಿಯರು. ಸುಮಾರು 72 ಅಡಿ ಎತ್ತರದ ಕಲ್ಲಿನ ನಡುವೆ ಹಾಲಿನ ನೊರೆಯಂತೆ ಧುಮುಕುವ ಮನಮೋಹಕ ಹಾಗೂ ರಮಣೀಯ ದೃಶ್ಯ ಇಲ್ಲಿ ಕಣ್ತುಂಬಿಸಿಕೊಳ್ಳಬಹುದು. ಆದರೆ ಸುಮಾರು ಮುನ್ನೂರ ಎಂಬತ್ತು ಮೆಟ್ಟಿಲುಗಳನ್ನು ಇಳಿದು ಈ ಸೂತನಬ್ಬಿಯ ದರುಶನ ಪಡೆಯಬೇಕು. ಈ ಹಿಂದೆಯೇ ಇದರ ರಮಣೀಯ ದೃಶ್ಯವನ್ನು ಕಣ್ತುಂಬಿಕೊಂಡಿದ್ದ ನಾನು ಮತ್ತು ಪತ್ರಕರ್ತನೇ ಆಗಿರುವ ನನ್ನ ಪತಿ ಮತ್ತೆ 380 ಮೆಟ್ಟಿಲು ಇಳಿಯುವ ಸಾಹಸಕ್ಕೆ ಇಳಿಯಲಿಲ್ಲ. ಸ್ವಲ್ಪ ದೂರ ಹೋಗೋಣ ಎಂದು ಹೊರಟ ನಮಗೆ ಸುಮಾರು 100 ಮೆಟ್ಟಿಲು ತಲುಪುವಷ್ಟರಲ್ಲಿ ಜಿಗಣೆಯ ಪರಿಚಯವಾಯಿತು. ಅಲ್ಲಿಯೇ ಇದ್ದ ಅರಣ್ಯರಕ್ಷಕರು ನಮ್ಮ ಕಾಲಿಗೆ ಡೆಟಾಲ್ ಸಿಂಪಡಿಸಿ ಸದ್ಯಕ್ಕೆ ಜಿಗಣೆಯನ್ನು ಓಡಿಸಿದರು. ಮೆಟ್ಟಿಲುಗಳ ಇಳಿಜಾರಿನಲ್ಲಿ ಸಾಗುವಾಗ ಕೇಳಿಸುವ ಪಕ್ಷಿಗಳ ನಿನಾದ, ಮರಗಳ ನಡುವೆ ಅಲ್ಲೊಮ್ಮೆ ಇಲ್ಲೊಮ್ಮೆ ಇಣುಕುವ ಸೂರ್ಯನ ಬೆಳಕು, ದೂರದಿಂದ ಕೇಳುವ ನೀರಿನ ಭೋರ್ಗರೆತ ಮನಸ್ಸನ್ನು ಪುಳಕಿತಗೊಳಿಸಿದ್ದಂತೂ ನಿಜ. ಅಷ್ಟರಲ್ಲಾಗಲೇ 380 ಮೆಟ್ಟಿಲು ಇಳಿದು ಸೂತನಬ್ಬಿಯ ಸೌಂದರ್ಯ ಕಣ್ತುಂಬಿಕೊಂಡ ನಮ್ಮ ಪತ್ರಕರ್ತ ಮಿತ್ರರು ಏದುಸಿರು ಬಿಡುತ್ತಾ ಒಬ್ಬೊಬ್ಬರೇ ಬರುತ್ತಿದ್ದರೆ, ಅವರ ಹಿಂದೆಯೇ ನಾವೇನೋ ಅಷ್ಟೂ ಮೆಟ್ಟಿಲು ಇಳಿದು ಸೂತನಬ್ಬಿ ಜೊತೆ ಕಷ್ಟ ಸುಖ ಹಂಚಿಕೊಂಡು ಬಂದವರಂತೆ ಮೇಲೆ ತಲುಪಿದೆವು. ನೂರರ ಮೇಲಿದ್ದ ನಾವು ಒಬ್ಬೊಬ್ಬರೇ 380 ಮೆಟ್ಟಿಲು ಹತ್ತಿ ಮೇಲೆ ಬಂದು, ಕಾಲಿಗೆ ಅಂಟಿಕೊಂಡು ರಕ್ತಹೀರುವುದರಲ್ಲಿ ಮಗ್ನರಾಗಿದ್ದ ಜಿಗಣೆಗಳನ್ನು ಎಚ್ಚರಿಸಿ, ಅವರನ್ನು ಅಲ್ಲಿಯೇ ಬಿಟ್ಟು, (ಕೆಲವರ ಕಾಲಿನಲ್ಲಂತೂ ರಕ್ತಧಾರೆಯೇ ಹರಿಯುತ್ತಿತ್ತು ಬಿಡಿ) ನಾವು ಬಸ್ ಹತ್ತಿದರೆ ನಮ್ಮನ್ನು ಬಿಡಲೊಳ್ಳದ ಕೆಲವು ಜಿಗಣೆಗಳು ನಮ್ಮ ಬಸ್ ಹತ್ತಿದ್ದು, ಗೊತ್ತಿದ್ದು ಅದನ್ನು ಕರೆದುಕೊಂಡು ನಾವಿದ್ದ ಬಸ್ ಮುಂದೆ ಚಲಿಸಿತು. ಬಸ್ಸಿನಲ್ಲಿ ಜಿಗಣೆಗಲೇನು ಸುಮ್ಮನಿರಲಿಲ್ಲ. ಅದು ಆಗಾಗ ಒಬ್ಬೊಬ್ಬರ ಕಾಲನ್ನು ಗುರಿಯಾಗಿಸಿ   ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು.

ಈ ಜಿಗಣೆಯ ಕಾಟದೊಂದಿಗೆ, ಪತ್ರಕರ್ತರ ಅಂತ್ಯಾಕ್ಷರಿ, ತಮಾಷೆಗಳೊಂದಿಗೆ ನಮ್ಮ ಬಸ್ ಮುಂದೆ ಸಾಗುತ್ತಿದ್ದಂತೆ, ಹಾದಿಯ ತಿರುವಿನಲ್ಲಿ ಕಣ್ಣಿಗೆ ಅಡ್ಡಲಾಗಿ ನಿಂತಿದ್ದು “ಕಡಂಬಿ” ಜಲಪಾತದ ರಮಣೀಯ ದೃಶ್ಯ. ಭೋರ್ಗರೆದು ಧುಮುಕುವ ನೀರಿನ ನಿನಾದ,  ಕಾನನದ ಮೌನವನ್ನು ಮುರಿದು ಪ್ರಕೃತಿಯು ಎದೆಯಾಳದ ತಂಬೂರಿಯ ಮೀಟಿದಂತೆ ಭಾಸವಾಗುತ್ತಿತ್ತು. ಮಳೆಗಾಲದ ಮದವೇರಿದಂತೆ ಧುಮುಕುವ ಈ ಜಲಧಾರೆ ಕೇವಲ ನೀರಲ್ಲ, ಒಂದು ಔಷಧೀಯ ಕುಂಭದಂತಿತ್ತು. ಸಾವಿರಗಟ್ಟಲೆ ಮರದ ಬೇರುಗಳ ನಡುವೆ ಹರಿಯುವ ಈ ನೀರು ಎಂದೆದಂದಿಗೂ ಅಮೃತಕ್ಕೆ ಸರಿಸಮವಾದುದ್ದಲ್ಲದೆ ಇನ್ನೇನು.  ಯಾವುದೇ ಸಭೆ ಸಮಾರಂಭಕ್ಕೆ ಹೋದರೂ ಬಾಟಲಿ ನೀರನ್ನರಸುವ ನಮಗೆ ಈ ಜೀವ ಜಲದ ಬೆಲೆ ತಿಳಿದಿಲ್ಲ. ಜಲಪಾತದಿಂದ ಹಾರಿ ಬರುವ ತಂಪಾದ ತುಂತುರು ಹನಿಗಳು ನಮ್ಮ ಮುಖದ ಮೇಲೆ ಮುತ್ತಿಡುತ್ತಿದ್ದಂತೆ, ದಣಿದ ಮೈಮನಸ್ಸುಗಳಿಗೆ ನಿಸರ್ಗವೇ ಮದ್ದು ಅರೆದಂತಿತ್ತು. ಇಲ್ಲಿ ನಿಂತು ಸುತ್ತಲೂ ನೋಡಿದರೆ, ಹಸಿರೇ ಕಾವಲು ಕಾಯುತ್ತಿರುವಂತೆ ಕಣ್ಣಿಗೆ ಗೋಚರಿಸುತ್ತದೆ. ಈ ಜಲಪಾತದ ನಯನಮನೋಹರ ಸೌಂದರ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಾ, ಅಕ್ಷರಗಳ ಮೂಲಕ ಓದುಗರಿಗೆ ತಲುಪಿಸುವ ತವಕ ನಮ್ಮ ಪ್ರತಿಯೊಬ್ಬ ಪತ್ರಕರ್ತನ ಮನಸ್ಸಿನಲ್ಲಿಯೂ ಮೂಡಿತ್ತು. ಆದರೆ ಇಂದು ಓದಿಗಿಂತಲೂ ರೀಲ್ಸ್ ನ್ನೇ ಹೆಚ್ಚು ಇಷ್ಟಪಡುವ ಯುವಪೀಳಿಗೆಗೆ ಈ ರಮಣೀಯ ದೃಶ್ಯ ಕ್ಷಣಮಾತ್ರದಲ್ಲಿ ಮುಟ್ಟಿಸಲು ನಮ್ಮ ನೆಟ್‌ವರ್ಕ್ ಎನ್ನುವ ಮಹಾರಾಯ ನಮಗೆ ಕೈಕೊಟ್ಟಿದ್ದ.

ಅಷ್ಟರಲ್ಲಾಗಲೇ ನಮ್ಮ ಹಿಂದಿದ್ದ ಇನ್ನೆರಡು ಬಸ್‌ಗಳು ಇನ್ನೂ ಯಾಕೆ ಬಂದಿಲ್ಲ ಎನ್ನುವ ಸಂದೇಹ ಮೂಡಲು ಪ್ರಾರಂಭವಾಗಿತ್ತು. ಅವರೇನೋ ದಾರಿ ತಪ್ಪಿರಬಹುದು ಎನ್ನುವವರು ಕೆಲವರು. ಹೇಗೂ ಆಯಿತು ಇಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಅಲ್ಲಿ ಸ್ವಲ್ಪ ಸಮಯ ಕಳೆದರೂ ಬಾರದಿರುವ ನಮ್ಮ ಸಹಪಾಠಿಗಳ ಬಗ್ಗೆ ವ್ಯಥೆ ಪಡುತ್ತಾ ಮತ್ತೆ ಬಸ್ ಏರಿದ ನಮಗೆ ಫಾರೆಸ್ಟ್ ನವರ ಜೀಪು ನಮ್ಮನ್ನು ಹಿಂಬಾಲಿಸಿ ಬಂದಾಗಲೇ ತಿಳಿದಿದ್ದು “ದಾರಿ ತಪ್ಪಿದವರು ಅವರಲ್ಲ ನಾವು” ಎನ್ನುವುದು. ಆ ಕಿರಿದಾದ ರಸ್ತೆಯಲ್ಲಿ ಕರ್ನಾಟಕ ಸರಕಾರ ಇತ್ತೀಚೆಗಷ್ಟೇ ನಮಗಾಗಿ ನೀಡಿದ್ದ ಹೊಸದಾದ ಮತ್ತು ದೊಡ್ಡದಾದ ಬಸ್ಸನ್ನು ನಮ್ಮ ಬಸ್ಸಿನ ಚಾಲಕರು ಕಷ್ಟಪಟ್ಟು ತಿರುಗಿಸಿ, ಜೀಪಿನ ಹಿಂದೆ ಹೊರಟ ನಮ್ಮನ್ನು ಗಂಗಾಮೂಲದ ಹತ್ತಿರ ನಿಲ್ಲಿಸಿದರು. ಬಸ್ಸಿನಿಂದ ಇಳಿಯುತ್ತಿದ್ದಂತೆ ಗಂಗಾಮೂಲ ವೀಕ್ಷಿಸಿ ಹಿಂದುರಿಗಿದ್ದ ನಮ್ಮ ಸಹಪಾಠಿಗಳು ನಮ್ಮನ್ನು ಅಯ್ಯೋ ಪಾಪ ಎನ್ನುವಂತೆ ನೋಡುತ್ತಿದ್ದರು. ಕೆಲವರು ಬಳಿ ಬಂದು ದಾರಿ ತಪ್ಪಿತಾ ಎನ್ನುತ್ತಿದ್ದಂತೆ ನನ್ನ ಮನಸ್ಸು ಒಳಗೆ ಹೇಳುತ್ತಿತ್ತು “ದಾರಿ ತಪ್ಪಿದವರು ಯಾರು ತಿಳಿಯಿತಾ” ನನ್ನ ಮೊಗದಲ್ಲಿ ಕಿರುನಗೆಯೊಂದು ಮಿಂಚಿ ಮಾಯವಾಗಿತ್ತು. ಹೌದು ಹೌದು ಎನ್ನುತ್ತಾ ಮುಂದೆ ಗಂಗಾ ಮೂಲದ ಕಡೆ ಹೊರಟೆವು.

ಗಂಗಾಮೂಲವು ಪಶ್ಚಿಮ ಘಟ್ಟದ ಕಿರೀಟವಿದ್ದಂತೆ. ನದಿಗಳು ಹುಟ್ಟುವ ಈ ಪವಿತ್ರ ತಾಣವು ಅದೆಷ್ಟೋ ಜೀವಸಂಕುಲಗಳಿಗೆ ತಾಯಿಬೇರು. ದೃಷ್ಟಿ ಹಾಯಿಸಿದಷ್ಟು ದೂರ ಕಾಣುವ ಬೆಟ್ಟಗುಡ್ಡಗಳಿಗೆ ಅಂಟಿಕೊಂಡಿರುವ ಹಸಿರ ಹೊದಿಕೆಯನ್ನು ನೋಡಿದರೆ ಭೂಮಿತಾಯಿ ಹಸಿರು ಸೀರೆ ಉಟ್ಟಂತೆ ಭಾಸವಾಗುತ್ತಿತ್ತು. ಅದರ ಮೇಲೆ ಹಾಲ್ನೊರೆಯಂತೆ ಮಂಜಿನ ಸಿಂಚನ. ಈ ದಿವ್ಯ ದೃಶ್ಯವನ್ನು ಕಣ್ಣಾರೆ ಕಂಡಾಗ ಎಂತಹ ನಿರಸಗೊಂಡ ಜೀವನದಲ್ಲಿಯೂ ನವೋತ್ಸಾಹದ ಅಲೆಗಳು ಉಕ್ಕಿ ಹರಿಯುತ್ತದೆ. ಅದುವೇ ಶೋಲಾ ಫಾರೆಷ್ಟ್.  ಸೌಂದರ್ಯ ಸವಿಯಲು ನಮಗೆ ಆಗಾಗ ಅಡ್ಡಿ ಪಡಿಸುತ್ತಿದ್ದ ಮೇಘಗಳ ರಾಶಿ. ಇನ್ನೊಂದೆಡೆ ಮಂಜಿನ ಕಚಗುಳಿ. ಹಾಗೇ ಮಂಜಿನ ಮದ್ಯೆ ಹುಲ್ಲಿನ ನಡುವೆ ಸಾಗುತ್ತಿದ್ದಂತೆ ಅರಣ್ಯಾಧಿಕಾರಿ ಶ್ರೀಧರ್ ಅವರು ನಮಗೆ ಇಲ್ಲಿಯ ವಿಶಿಷ್ಟತೆಯ ಬಗ್ಗೆ ವಿವರಿಸುತ್ತಿದ್ದರು. ಈ ಹುಲ್ಲುಗಳು ಕಾಡುಪ್ರಾಣಿಗಳಿಗೆ ಉತ್ತಮ ಆಹಾರ ಎನ್ನುತ್ತಿದ್ದಂತೆ ನಮ್ಮ ಪತ್ರಕರ್ತರೊಬ್ಬರು “ಹಸುಗಳಿಗೆ ಇದು ಆಹಾರ ಆಗುವುದಿಲ್ಲವೇ’ ಎಂದು ಬಹಳ ಆಸಕ್ತಿಯಿಂದ ಕೇಳಿದರು.  ಇಲ್ಲ ಆದರೆ ಕಾಡೆಮ್ಮೆಗಳಿಗೆ ಇದು ನೆಚ್ಚಿನ ಆಹಾರ ಎಂದರು. ಎಲ್ಲಾ ಸಸ್ಯಹಾರಿ ಕಾಡು ಪ್ರಾಣಿಗಳು ಇದನ್ನು ಇಷ್ಟ ಪಟ್ಟು ತಿನ್ನುತ್ತವೆ. ಒಣ ಹುಲ್ಲನ್ನು ಕೂಡ ಅಷ್ಟೇ ಪ್ರೀತಿಯಿಂದ ತಿನ್ನುತ್ತವೆಯಂತೆ.  ಪಶ್ಚಿಮ ಘಟ್ಟಗಳ ತುತ್ತತುದಿಯಲ್ಲಿ, ಮಂಜಿನ ಪರದೆಯ ಹಿಂದೆ ಅಡಗಿರುವ ಪ್ರಕೃತಿಯ ವಿಸ್ಮಯ ಲೋಕವೇ ಶೋಲಾ ಅರಣ್ಯಗಳು. ಪಶ್ಚಿಮ ಘಟ್ಟಗಳ ಎತ್ತರದ ಬೆಟ್ಟಗಳ ಕಣಿವೆಗಳಲ್ಲಿ ಮಾತ್ರ ಕಂಡುಬರುವ ಈ ವಿಶಿಷ್ಟ ನಿತ್ಯಹರಿದ್ವರ್ಣ ಕಾಡುಗಳು ಭೂಮಿಯ ಮೇಲಿನ ಅತ್ಯಂತ ಅಪರೂಪದಗಳಲ್ಲಿ ಒಂದಾಗಿವೆ. ಸಾಮಾನ್ಯವಾಗಿ ಸಮುದ್ರ ಮಟ್ಟದಿಂದ ಒಂದೂವರೆ ಸಾವಿರ ಮೀಟರ್‌ಗಳಿಗಿಂತ ಹೆಚ್ಚು ಎತ್ತರದಲ್ಲಿ, ತಣ್ಣನೆಯ ಗಾಳಿ ಮತ್ತು ನಿರಂತರ ಮಂಜು ಕವಿದ ವಾತಾವರಣದಲ್ಲಿ ಇರುತ್ತದೆ. ಇಲ್ಲಿ ಅಲ್ಲೊಂದು ಇಲ್ಲೊಂದು ಮರಗಳು ಕಾಣಬಹುದು. ಈ ಶೋಲಾ ಕಾಡಿನಲ್ಲಿ ಮರಗಳು ಹೆಚ್ಚಾಗಿ ಬೆಳೆಯುವುದಿಲ್ಲ. ಅಲ್ಲೊಂದು ಇಲ್ಲೊಂದು ಕಾಣುವ ಮರಗಳು ಎತ್ತರವಾಗಿ ಬೆಳೆಯದೆ, ಕುಬ್ಜವಾಗಿ ಇರುವುದು ಈ ಕಾಡುಗಳ ವಿಶೇಷ ಆಕರ್ಷಣೆ. ಇನ್ನೊಂದು ವಿಶೇಷವೆಂದರೆ ಅಲ್ಲಲ್ಲಿ ಚದುರಿದಂತೆ ನಮಗೆ ಕಂಡ ಕೆಲವು ಗಿಡ ಮರಗಳು ಸೀಬೆ ಹಣ್ಣಿನವುಗಳಾಗಿದ್ದವು. ಅದಕ್ಕೆ ಕಾರಣವನ್ನು ಅರಣ್ಯಾಧಿಕಾರಿ ಶ್ರೀದರ್ ಹೇಳಿದಾಗ ಆಶ್ಚರ್ಯವಾಯಿತು. “ಎಲ್ಲೋ ದೂರದಲ್ಲಿ ಪಕ್ಷಿಗಳು ಪೇರಳೆ ಹಣ್ಣು ತಿಂದು ಅಥವಾ ತಂದು ಹಾಕಿದ ಬೀಜದಲ್ಲಿ ಹುಟ್ಟಿಕೊಂಡು ಮಂಜಿನ ಪರದೆಯ ಜೊತೆ ಆಟವಾಡುತ್ತಿತ್ತು”. ಬೇರೆ ಯಾವ ಗಿಡಗಳು ಅಷ್ಟು ಸರಾಗವಾಗಿ ಇಲ್ಲಿ ಬೆಳೆಯುವುದಿಲ್ಲವಂತೆ. ಈ ಪೇರಳೆಣ್ಣನಿಗೆ ಮಂಜಕ್ಕನ ಜೊತೆಯೋ ಅಥವಾ ಶೋಲಕ್ಕನ ಜೊತೆಯೋ ಅದೇನೋ ಅವಿನಾಭಾವ ಸಂಬಂಧ ಇರುವುದಂತೂ ಸತ್ಯ.  ಶೋಲಾ ಕಾಡುಗಳು ಕೇವಲ ದಟ್ಟ ಹಸಿರಿನ ತಾಣವಲ್ಲ, ಬದಲಿಗೆ ಜಗತ್ತಿನ ಬೇರೆಲ್ಲೂ ಕಾಣಸಿಗದ ಅಪೂರ್ವ ಜೀವವೈವಿಧ್ಯತೆಯ ಗಣಿ. ಈ ಕಾಡಿನಲ್ಲಿ ಬೆಳೆಯುವ ಪಾಚಿಗಳು, ಹತ್ತಾರು ಬಗೆಯ ಆರ್ಕಿಡ್‌ಗಳು ಇಲ್ಲಿನ ಆರ್ದ್ರ ವಾತಾವರಣವನ್ನು ಹೆಚ್ಚಿಸುತ್ತವೆ. ಇನ್ನು ಪ್ರಾಣಿ ಪ್ರಪಂಚದ ವಿಷಯಕ್ಕೆ ಬಂದರೆ, ಪಶ್ಚಿಮ ಘಟ್ಟಗಳಿಗೆ ಮಾತ್ರ ಸೀಮಿತವಾಗಿರುವ ಅಳಿವಿನಂಚಿನಲ್ಲಿರುವ ಹಲವು ಚಿಕ್ಕ ಚಿಕ್ಕ ಪ್ರಾಣಿಗಳು ಹಾಗೂ ವಿಶಿಷ್ಟ ಪಕ್ಷಿ ಸಂಕುಲಗಳು ಇಲ್ಲಿ ಆಶ್ರಯ ಪಡೆದಿವೆ. ಗುಡ್ಡಗಳ ನಡುವಿನ ಕಣಿವೆಗಳಿಗೆ ಸೀಮಿತವಾಗಿದ್ದರೆ, ಅವುಗಳ ಸುತ್ತಲೂ ಮೈಚಾಚಿರುವುದು ವಿಶಾಲವಾದ ಹುಲ್ಲುಗಾವಲುಗಳು. ಈ ಎರಡು ವಿಭಿನ್ನ ಪರಿಸರ ವ್ಯವಸ್ಥೆಗಳು ಒಂದಕ್ಕೊಂದು ಪೂರಕವಾಗಿ ಜೀವಿಸುತ್ತವೆ. ಮಳೆಗಾಲದಲ್ಲಿ ಸುರಿಯುವ ಅಪಾರ ನೀರನ್ನು ಈ ಕಾಡುಗಳು ಮತ್ತು ಹುಲ್ಲುಗಾವಲುಗಳು ಒಂದು ದೊಡ್ಡ ಸ್ಪಾಂಜಿನಂತೆ ಹೀರಿಕೊಂಡು, ಬೇಸಿಗೆಯಲ್ಲಿ ಹಳ್ಳ-ಕೊಳ್ಳಗಳ ಮೂಲಕ ನಿಧಾನವಾಗಿ ಹರಿಸಿ ಜೀವ ತುಂಬುತ್ತವೆ.  ಅದರಲ್ಲೂ ಗಂಗಾಮೂಲದಲ್ಲಿ ಹುಟ್ಟುವ ನೇತ್ರಾವತಿ, ತುಂಗ ಭದ್ರೆಯರ ಉಗಮಸ್ಥಾನವಾಗುವಲ್ಲಿ ಈ ಶೋಲಾ ಕಾಡುಗಳೇ ಪ್ರಮುಖ ಪಾತ್ರ ವಹಿಸಿವೆ. ಆದರೆ, ಇಂತಹ ಪರಿಸರ ಸಂಪತ್ತು ಇಂದು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಬ್ರಿಟಿಷರ ಕಾಲದಲ್ಲಿ ವಾಣಿಜ್ಯ ಬೆಳೆಗಳಿಗಾಗಿ ನಡೆದ ಮಾರಣಹೋಮ ಮತ್ತು ನೀಲಗಿರಿ, ಅಕೇಶಿಯಾದಂತಹ ವಿದೇಶಿ ಮರಗಳ ನುಗ್ಗಾಟದಿಂದ ಶೋಲಾ ಕಾಡುಗಳು ಬಹಳಷ್ಟು ಹಿನ್ನಡೆ ಅನುಭವಿಸಿವೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಜಾಗತಿಕ ತಾಪಮಾನ ಮತ್ತು ಹವಾಮಾನ ವೈಪರೀತ್ಯ ಕೂಡ ಈ ಸೂಕ್ಷ್ಮ ಪರಿಸರ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮೋಡಗಳೊಂದಿಗೆ ನಿತ್ಯವೂ ಆಡುವ ಶೋಲಾ ಕಾಡುಗಳನ್ನು ಸಂರಕ್ಷಿಸುವುದು ಎಂದರೆ ಕೇವಲ ಕೆಲವು ಮರಗಳನ್ನು ಉಳಿಸುವುದಲ್ಲ, ಬದಲಿಗೆ  ನೀರಿನ ಮೂಲವನ್ನು ಮತ್ತು ಪಶ್ಚಿಮ ಘಟ್ಟಗಳ ಅಳಿವಿನಂಚಿನಲ್ಲಿರುವ ಜೀವಸಂಕುಲವನ್ನು ಕಾಪಾಡುವುದಾಗಿದೆ. ಪ್ರಕೃತಿಯ ಈ ಮೌನ ನಿಧಿಯನ್ನು ರಕ್ಷಿಸುವ ಅವಶ್ಯಕತೆಯಿದೆ. ಮಂಜಿನ ಮುಸುಕಿನಲ್ಲಿ ಬೆಸೆದುಕೊಂಡಿರುವ ಈ ಹುಲ್ಲನ್ನು ಭೇಧಿಸಿ ಸಾಗುವಾಗ ಪ್ರಕೃತಿಯ ರಹಸ್ಯ ಲೋಕವೊಂದರೊಳಗೆ ಕಾಲಿಟ್ಟ ಅನುಭವವಾಗುತ್ತದೆ. ಈ ಅರಣ್ಯಗಳ ಅತ್ಯಂತ ಮಹತ್ವದ ವಿಶೇಷತೆಯೆಂದರೆ ಅವುಗಳ ಮತ್ತು ಸುತ್ತಲಿನ ಹುಲ್ಲುಗಾವಲುಗಳ ನಡುವಿನ ಅವಿನಾಭಾವ ಸಂಬಂಧ. ಹಾಗೆ ಶೋಲಾ ಫಾರೆಸ್ಟ್ ನಲ್ಲಿ ಮಂಜಿನ ಸಿಂಚನದ ಹಿತವನ್ನು ಸವಿಯುತ್ತಾ ಗಂಗಾ ಮೂಲವನ್ನು ನೋಡುವ ತವಕದಲ್ಲಿದ್ದ ನಮಗೆ “ಬಿಳಿ ಪರದೆಯನ್ನು ಯಾರೋ ಇಳಿ ಬಿಟ್ಟಿರಬಹುದು” ಎನ್ನುವ ಭಾವನೆ ಮೂಡಿದ್ದು ಮಾತ್ರ ಸತ್ಯ. ಇದರ ಮದ್ಯೆ ಆಗಾಗ ಮೇಘರಾಜ ದೊತ್ತೆಂದು ಸುರಿದು ಮಾಯವಾಗುತ್ತಿದ್ದ. ನಾವೇನೋ ಮೇಘರಾಜನಿಗೆ ಭಯಬೀಳುತ್ತಿರಲಿಲ್ಲ ಬಿಡಿ, ಕಾರಣ ಅರಣ್ಯಾಧಿಕಾರಿಗಳು ನಮಗೆ ನೀಡಿದ್ದ ರೈನ್ ಕೋಟ್ ನಮ್ಮನ್ನು ಬಿಗಿದಪ್ಪಿತ್ತು.  
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
ಶೋಲಾದ ನುಣುಪು, ಮಂಜಿನ ತಂಪು, ಮಣ್ಣಿನ ಕಂಪು, ಯಾರಿಗೂ ಕಾಣದ ಅತಿಥಿಯಂತೆ ನಮ್ಮ ಮೈಸೋಕಿ ಸಾಗುವ ಗಾಳಿಯ ಇಂಪು, ಎಲ್ಲವನ್ನೂ ಅಲ್ಲಿಯೇ ಬಿಟ್ಟು ಮನಸ್ಸಿಲ್ಲ ಮನಸ್ಸಿನಲ್ಲಿ ಹೊರಟ ನಮಗೆ ದೂರದಲ್ಲಿ ಮೇಘರಾಜ ಕೈಬೀಸಿದಂತಾಗುತ್ತಿತ್ತು. ಹೇಗೂ ಫಾರೆಸ್ಟ್ ಜೀಪಿನ ಹಿಂದೆ ಹೊರಟ ನಮ್ಮ ಬಸ್ ನಿಂತಿದ್ದು, ಭಗವತಿ ನೇಚರ್ ಕ್ಯಾಂಪ್‌ನ ಮುಖ್ಯದ್ವಾರನಲ್ಲಿ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗೆ ಭದ್ರಾನದಿಯ ಸಮೀಪವಿರುವ ಭಗವತಿ ನೇಚರ್ ಕ್ಯಾಂಪ್ ವಿಶಿಷ್ಟ ಅನುಭವವನ್ನೇ ನೀಡಿತು. ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ಹಾಗೂ ಜಂಗಲ್ ಲಾಡ್ಜಸ್ ಅಂಡ್ ರಿಸಾರ್ಟ್ಸ್ ಸಹಯೋಗದೊಂದಿಗೆ ನಿರ್ವಹಿಸಲ್ಪಡುವ  ಪಶ್ಚಿಮ ಘಟ್ಟಗಳ ಹಸಿರುಸಿರಿಯ ನಡುವೆ ಕಂಗೊಳಿಸುವ ಈ ಕ್ಯಾಂಪ್, ವಿಶಾಲ ಹುಲ್ಲುಗಾವಲುಗಳು ಮತ್ತು ದಟ್ಟ ನಿತ್ಯಹರಿದ್ವರ್ಣ ಕಾಡುಗಳಿಂದ ಸುತ್ತುವರೆದಿದ್ದು, ಪಟ್ಟಣದ ಕಾಂಕ್ರೀಟ್ ಕಾಡು, ಮೊಬೈಲ್ ಫೋನಿನ ಜಂಜಾಟ ಎಲ್ಲವನ್ನೂ ಮರೆತು ಒಂದಷ್ಟು ದಿನ ಶಾಂತಿಯಿಂದ ಇರಬೇಕು ಎನ್ನುವವರಿಗೆ ಇದು ಸೂಕ್ತ ಜಾಗ. ಆದರೆ ನಮ್ಮಂತಹ ವೃತ್ತಿಪರರಿಗೆ ಇದು ಸ್ವಲ್ಪ ಕಷ್ಟದ ವಿಷಯ. ಇಲ್ಲಿಗೆ ಹೋಗುತ್ತಿದ್ದಂತೆ ಈ ನೇಚರ್ ಕ್ಯಾಂಪ್ ಬಗ್ಗೆ ಒಂದಷ್ಟು ಮಾಹಿತಿ ನೀಡಿದರು ಅರಣ್ಯಾಧಿಕಾರಿಗಳು. ಟ್ರಕ್ಕಿಂಗ್‌ಗೆ ಬರಲಿಚ್ಚಿಸುವವರು ಆನ್‌ಲೈನ್‌ನಲ್ಲಿ ಮೊದಲೇ ನೊಂದಾಯಿಸಿಕೊಳ್ಳಬೇಕು. ದಿನವೊಂದಕ್ಕೆ 300 ಜನರಿಗೆ ಮಾತ್ರ ಪ್ರವೇಶ. ಇಲ್ಲಿ ಕುದುರೆಮುಖ ಟ್ರೆಕ್, ಬಂಡಾಜೆ ಫಾಲ್ಸ್, ನರಸಿಂಹ ಪರ್ವತ ಟ್ರೆಕ್, ಕುರಿಂಜಾಲ್ ಟ್ರೆಕ್, ಜಮಲಬಾದ್ ಕೋಟೆ, ಗಂಗಾಡಿಕಲ್ ಟ್ರೆಕ್ ಹೀಗೆ ಹಲವು ಸ್ಥಳಗಳಿವೆ. 10ಜನ ಚಾರಣಿಗರಿಗೆ ಒಬ್ಬರಂತೆ ಮಾರ್ಗದರ್ಶಕರನ್ನು ಕಳುಹಿಸಲಾಗುತ್ತದೆ. ಮಾರ್ಗದರ್ಶಕರು ಸ್ಥಳಿಯರಾಗಿರುವುದರಿಂದ ಇಲ್ಲಿನ ಒಳ ಹೊರಗು ಚೆನ್ನಾಗಿ ತಿಳಿದವರಾಗಿರುತ್ತಾರೆ. ಇಲ್ಲಿ ಸುಮಾರು 350 ರಷ್ಟು ಮಾರ್ಗದರ್ಶಿಗಳು ಇದ್ದಾರೆ.  ಟ್ರಕ್ಕಿಂಗ್ ಬರುವವರಿಗೆ ಒಬ್ಬರಿಗೆ 450 ರೂ ದರ ನಿಗದಿಪಡಿಸಲಾಗಿದ್ದು, ಮಾರ್ಗದರ್ಶಿಗೆ 100 ರೂ ಪಾವತಿಸಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಚಾರಣಕ್ಕೆ ಭಾರಿ ಬೇಡಿಕೆ ಹೆಚ್ಚಾಗುತ್ತಿದೆ. ವಿಶೇಷವೆಂದರೆ ಹಿಂದೆ ಬರೀ ಯುವ ಸಮೂಹ ಮಾತ್ರ ಚಾರಣದ ಬಗ್ಗೆ ಯೋಚಿಸುತ್ತಿದ್ದರು. ಇಂದು ಹಾಗಲ್ಲ. ಎಲ್ಲಾ ವಯೋಮಿತಿಯವರು ಆಸಕ್ತಿ ತೋರುತ್ತಿದ್ದಾರೆ. ಕಳೆದ ವರ್ಷ ಸುಮಾರು 55 ಸಾವಿರ ಚಾರಣಿಗರು ಇಲ್ಲಿಗೆ ಬೇಟಿ ನೀಡಿದ್ದಾರೆ. ಇದರಿಂದ ಸರಕಾರದ ಬೊಕ್ಕಸವೂ ತುಂಬುತ್ತಿದೆ. ಇಷ್ಟೆಲ್ಲಾ ಮಾಹಿತಿ ನೀಡಿದ ನಂತರ ಊಟದ ಸಮಯ. ಈಗ ಒಂದಷ್ಟು ದೂರ ನಡೆದು ಹೋಗೋಣ ಎಂದರು. ಬಸ್ ಅಲ್ಲಿ ಹೋಗುವುದಿಲ್ಲವೇನೋ ಎಂದುಕೊಂಡು ನಡೆಯಲು ರಸ್ತೆಯಲ್ಲಿಯೇ ಸಿದ್ದವಾದೆವು.  ಅಷ್ಟು ದೂರ ನಡೆದ ನಮಗೆ ಇಷ್ಟಗಲ ರಸ್ತೆಯಲ್ಲಿ ನಮ್ಮ ವಾಹನ ಬರಬಹುದಲ್ಲ ಎನ್ನುವ ಸಂದೇಹ. ಸಂದೇಹದ ನಡುವೆಯೇ ನಡೆದು ಕ್ಯಾಂಪ್‌ನ ಆವರಣ ತಲುಪಿದೆವು. ಅಲ್ಲಿಯೇ ಪಕ್ಕದಲ್ಲಿ ಭದ್ರೆ ಮೈದುಂಬಿ ಹರಿಯುತ್ತಿದ್ದಳು. ಸುಮಾರು 3 ಕಿ.ಮಿ ದೂರದಲ್ಲಿ ಹುಟ್ಟಿದ ಭದ್ರೆಯ ಪಾತ್ರ ಮಾತ್ರ ಬಹಳ ಎಣಿಸುವಷ್ಟು ಅಗಲವಾಗಿತ್ತು.  ಮೈದುಂಬಿ ಹರಿಯುವ ಅವಳ ಸೌಂದರ್ಯವನ್ನು ಕಣ್ತುಂಕೊಂಡೆವು. ಇಲ್ಲಿ ತಂಗುವವರಿಗೆ ಮರದ ಕಾಟೇಜುಗಳು ಮತ್ತು ಟೆಂಟುಗಳು ಲಭ್ಯ. ಬಹಳ ಐಷಾರಾಮಿ ಅಲ್ಲದಿದ್ದರೂ ಕಾಟೇಜ್‌ಗಳು ಚೆನ್ನಾಗಿತ್ತು. ಅಷ್ಟರಲ್ಲಾಗಲೇ ಹಲವಾರು ಜಿಗಣೆಗಳು ಒಂದು ವರ್ಷದವರೆಗೆ ಬದುಕಲು ಆಗುವಷ್ಟು ಊಟ ಅಲ್ಲಲ್ಲ ರಕ್ತ ಹೀರಿಕೊಂಡಿದ್ದವು. ಅದಕ್ಕೆ ಆರಾಮವಾಗಿ ಇಷ್ಟವಾದ ಊಟ ಸಿಕ್ಕಿತ್ತು. ಆದರೆ ನಮಗೆ ಊಟ ಸಿದ್ದವಾಗುತ್ತಿತ್ತು. ಊಟ ಸಿದ್ದ ಆಗುವಷ್ಟರಲ್ಲಿ ಕೆಲವರು ತಮ್ಮ ತಮ್ಮ ಕಾಲುಗಳಲ್ಲಿ, ಮೈಯಲ್ಲಿ ಜಿಗಣೆ ಹುಡುಕಾಟದಲ್ಲಿ ಮಗ್ನರಾಗಿದ್ದರು. ಕೆಲವರು ಅದರ ಬೇಟೆಗೆ ಸಿದ್ದವಾದಂತಿತ್ತು. ಇನ್ನೂ ಕೆಲವರು ಹರಟೆ ಹೀಗೆ ಸಾಗುತ್ತಿತ್ತು. ಊಟ ಸಿದ್ದ ಆಗುವಷ್ಟರಲ್ಲಿ ಜಿಗಣೆಯ ವಿಶೇಷತೆ ತಿಳಿದುಕೊಳ್ಳೋಣ .

ಜಲವಾಸಿ ಅಥವಾ ತೇವಾಂಶವಿರುವ ಪ್ರದೇಶಗಳಲ್ಲಿ ವಾಸಿಸುವ ಜಿಗಣೆ (leach) ಅನೆಲಿಡಾ ವಂಶಕ್ಕೆ ಮತ್ತು ಹಿರುಡಿನಿಯಾ ವರ್ಗಕ್ಕೆ ಸೇರಿದ ಒಂದು ವಿಶಿಷ್ಟ ಜೀವಿಯಾಗಿದೆ. ಇದರ ದೇಹವು ಉಂಗುರಗಳಂತಹ ಖಂಡಗಳಿಂದ ಕೂಡಿದ್ದು, ಮೃದುವಾಗಿ ಹಾಗೂ ಹಿಗ್ಗುವಂತಿರುತ್ತದೆ. ಇದರ ಎರಡು ತುದಿಗಳಲ್ಲಿ ಹೀರುವ ಅಂಗಗಳಿದ್ದು, ಮುಂಭಾಗದ ಅಂಗವು ಬಾಯಿಯ ಹತ್ತಿರವಿದ್ದರೆ ಹಿಂಭಾಗದ ಅಂಗವು ಆಧಾರಕ್ಕೆ ಅಂಟಿಕೊಳ್ಳಲು ಸಹಾಯ ಮಾಡುತ್ತದೆ. ಹೆಚ್ಚಿನ ಜಿಗಣೆಗಳು ಪರಾವಲಂಬಿಗಳಾಗಿದ್ದು, ಪ್ರಾಣಿಗಳು ಮತ್ತು ಮನುಷ್ಯರ ಮೈಗೆ ಅಂಟಿಕೊಂಡು ರಕ್ತವನ್ನು ಹೀರಿ ಬದುಕುತ್ತವೆ. ವಿಶೇಷ ಎಂದರೆ ಈ ಚಿಕ್ಕ ಜೀವಿಗೆ ತನ್ನ ಆಹಾರ ಎಲ್ಲಿ ಯಾವ ದಿಕ್ಕಿಗೆ, ಎಷ್ಟು ದೂರದಲ್ಲಿ ಇದೆ ಎಂದು ತಿಳಿದುಕೊಳ್ಳುವ ಶಕ್ತಿಯನ್ನು ದೇವರು ದಯಪಾಲಿಸಿದ್ದಾನೆ. ತೆವಳಿ ಉಂಗುರಾಕಾದಲ್ಲಿ ಹೋಗುವ ಇವು ಕೆಲವು ಸಲ ಜಂಪಿಂಗ್ ಸ್ಟಾರ್‌ಗಳಂತೆ ಕೆಲಸ ಮಾಡುತ್ತದೆ. ಇನ್ನು ಕೆಲವು ವಿಧದ ಜಿಗಣೆಗಳು ಸಣ್ಣ ಕೀಟಗಳನ್ನು ತಿನ್ನುವ ಮಾಂಸಭಕ್ಷಕಗಳಂತೆ. ಜಿಗಣೆಯು ರಕ್ತ ಹೀರಲು ಚರ್ಮವನ್ನು ಕಚ್ಚುವಾಗ ನೋವಾಗದಂತೆ ಒಂದು ರೀತಿಯ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ. ಅದುವೆ ನಮ್ಮ ವಿಜ್ಙಾನದ ಅನೆಸ್ತಿಷಿಯಾ. ಇದರಿಂದ ಕಚ್ಚಿದ ತಕ್ಷಣ ನಮಗೆ ಗೊತ್ತಾಗುವುದಿಲ್ಲ. ಅಲ್ಲದೆ, ಇದು ರಕ್ತ ಹೀರಿದಾಗ ರಕ್ತ ಹೆಪ್ಪುಗಟ್ಟದಂತೆ ತಡೆಯಲು ‘ಹಿರುಡಿನ್' ಎಂಬ ಕಿಣ್ವವನ್ನು ಗಾಯದ ಜಾಗಕ್ಕೆ ಬಿಡುಗಡೆ ಮಾಡುವುದರಿಂದ ರಕ್ತ ಸರಾಗವಾಗಿ ಹರಿಯುತ್ತದೆ. ಅದೇನೋ ಅದಕ್ಕೆ ಆರು ತಿಂಗಳಿಗೋ ವರರ್ಷಕ್ಕೋ ಆಗುವಷ್ಟು ಕುಡಿದು ಹೋಗಿಬಿಡುತ್ತದೆ. ಆದರೆ ಕಚ್ಚಿಸಿಕೊಂಡವನ ದೇಹದಿಂದ ಸುಮಾರು ಹೊತ್ತು ರಕ್ತ ಹರಿದುಹೋಗುತ್ತದಲ್ಲ. ಕೆಲವೊಮ್ಮೆ ಭಯವಾಗಿ ಬಿಡುತ್ತದೆ. ಆದರೆ ಜಿಗಣೆ ಕಚ್ಚಿದ ನಂತರ ಹಾಗೇ ರಕ್ತ ಸ್ವಲ್ಪ ಹರಿದು ಹೋದರೆ ಒಳ್ಳೆಯದಂತೆ. ಪ್ರಾಚೀನ ಕಾಲದಿಂದಲೂ ಆಯುರ್ವೇದದಲ್ಲಿ (ರಕ್ತಮೋಕ್ಷನ ಚಿಕಿತ್ಸೆ) ಮತ್ತು ಆಧುನಿಕ ವೈದ್ಯಕೀಯದಲ್ಲಿ ಕೆಲವು ನಿರ್ದಿಷ್ಟ ರೋಗಗಳನ್ನು ಗುಣಪಡಿಸಲು, ರಕ್ತದ ಪರಿಚಲನೆ ಸುಧಾರಿಸಲು ಮತ್ತು ಪ್ಲಾಸ್ಟಿಕ್ ಸರ್ಜರಿಗಳಲ್ಲಿ ಜಿಗಣೆಗಳನ್ನು ಬಳಸಲಾಗುತ್ತದೆ. ಜಿಗಣೆಗಳ ಸಾಮಾನ್ಯವಾಗಿ ಇವು 2 ರಿಂದ 10 ವರ್ಷಗಳವರೆಗೆ ಬದುಕುತ್ತವೆ. ಕೆರೆ, ನದಿ ಅಥವಾ ಕಾಡುಗಳಲ್ಲಿ ವಾಸಿಸುವ ಜಿಗಣೆಗಳು ಸಾಮಾನ್ಯವಾಗಿ 2 ರಿಂದ 8 ವರ್ಷಗಳ ಕಾಲ ಜೀವಿಸಿದರೆ, ಪ್ರಯೋಗಾಲಯಗಳಲ್ಲಿ ಅಥವಾ ವೈದ್ಯಕೀಯ ಉದ್ದೇಶಗಳಿಗಾಗಿ ಸೂಕ್ತ ಆರೈಕೆಯಲ್ಲಿರುವ ಜಿಗಣೆಗಳು 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಬದುಕಬಲ್ಲವು. ಜಿಗಣೆಗಳು ಒಮ್ಮೆ ತನ್ನ ದೇಹದ ತೂಕಕ್ಕಿಂತ ಹಲವು ಪಟ್ಟು ಹೆಚ್ಚು ರಕ್ತವನ್ನು ಹೀರಬಲ್ಲವು ಮತ್ತು ಅದನ್ನು ಅತ್ಯಂತ ನಿಧಾನವಾಗಿ ಜೀರ್ಣಿಸಿಕೊಳ್ಳುತ್ತವೆ. ಹೀಗಾಗಿ, ಒಂದು ಬಾರಿ ಹೊಟ್ಟೆತುಂಬಾ ರಕ್ತ ಹೀರಿದ ನಂತರ ಜಿಗಣೆಗಳು ಮುಂದಿನ  6 ತಿಂಗಳಿಂದ 1 ವರ್ಷದವರೆಗೂ ಯಾವುದೇ ಆಹಾರವಿಲ್ಲದೆ ಜೀವಿಸಬಲ್ಲ ಅದ್ಭುತ ಸಾಮರ್ಥ್ಯವನ್ನು ಹೊಂದಿವೆ. ಛೇ ಮನುಷ್ಯನಿಗೂ ಇಂತಹ ಸಾಮರ್ಥ್ಯ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಸ್ವಲ್ಪ ನುಂಗುಬಾಕರು ಕಡಿಮೆ ಆಗುತ್ತಿದ್ದರೋ... ಇದು ನನ್ನ ವೈಯಕ್ತಿಕ ಯೋಚನೆಯಷ್ಟೆ.  ನೀರಿನಲ್ಲಿ ಮತ್ತು ತೇವಾಂಶವಿರುವ ಪ್ರದೇಶಗಳಲ್ಲಿ ವಾಸಿಸುವ ಜಿಗಣೆಗಳನ್ನು ತಿಂದು ಬದುಕುವ ಅನೇಕ ಪ್ರಾಣಿಗಳಿವೆ. ಕೆರೆ ಮತ್ತು ನದಿಗಳಲ್ಲಿ ವಾಸಿಸುವ ದೊಡ್ಡ ಮೀನುಗಳು, ಕಪ್ಪೆಗಳು, ಹಲ್ಲಿಗಳು ಹಾಗೂ ನೀರಿನ ಅಂಚಿನಲ್ಲಿ ವಾಸಿಸುವ ಬಾತುಕೋಳಿಗಳು ಮತ್ತು ಇತರ ಜಲಪಕ್ಷಿಗಳು ಜಿಗಣೆಗಳನ್ನು ತಮ್ಮ ಆಹಾರವನ್ನಾಗಿ ಸೇವಿಸುತ್ತವೆ. ಇದರೊಂದಿಗೆ ಕೆಲವು ಜಾತಿಯ ನೀರಿನ ಹಾವುಗಳು, ಸಣ್ಣಪುಟ್ಟ ಸಸ್ತನಿಗಳು ಮತ್ತು ದೊಡ್ಡ ಗಾತ್ರದ ಜಲವಾಸಿ ಕೀಟಗಳು ಹಾಗೂ ಡ್ರ‍್ಯಾಗನ್‌ಫ್ಲೈ ಮರಿಗಳು ನೀರಿನಲ್ಲಿದ್ದಾಗ ಜಿಗಣೆಗಳ ಮೇಲೆ ದಾಳಿ ಮಾಡಿ ತಿನ್ನುತ್ತವೆ. ಹೀಗೆ ಪ್ರಕೃತಿಯ ಆಹಾರ ಸರಪಳಿಯಲ್ಲಿ ಜಿಗಣೆಯೂ ಒಂದು ಪ್ರಮುಖ ಜೀವಿಯಾಗಿದೆ.

ಇಷ್ಟರಲ್ಲಾಗಲೇ ನನ್ನ ಕಾಲಿನ ಮೇಲೆ ಜಿಗಣೆ ದಾಳಿ ಮಾಡಬಾರದೆಂದು ಡೆಟಾಲ್‌ನಿಂದಲೇ ಸ್ನಾನ ಮಾಡಿದ್ದೆ. ಜಿಗಣೆ ಊಟದ ಬಗ್ಗೆ ತಿಳಿದಿರಿ. ಅಷ್ಟರಲ್ಲಾಗಲೇ ನಮ್ಮ ಊಟದ ಸಿದ್ದವಾಗಿತ್ತು. ಸರತಿ ಸಾಲಿನಲ್ಲಿ ಬಟ್ಟಲು ಹಿಡಿದು ನಿಂತ ನಮ್ಮನ್ನು ನಮಗೂ ಊಟ ಕೊಡಿ ಎನ್ನುತ್ತಾ ಕಾಟ ಕೊಡುತ್ತಿತ್ತು ಜಿಗಣೆಗಳು. ಅದರಿಂದ ತಪ್ಪಿಸಿಕೊಂಡು ನಮ್ಮ ಊಟ ಹಿಡಿದು ಅತ್ತ ಇತ್ತ ಚಲಿಸುತ್ತಾ, ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತಾ ಊಟವೇನೋ ಮುಗಿಸಿದೆವು. ಅಷ್ಟರಲ್ಲಾಗಲೇ ಹಲವು ಜಿಗಣೆಗಳು ಕೂಡ ಊಟ ಮುಗಿಸಿತ್ತು.

ಅರಣ್ಯಾಧಿಕಾರಿಗಳಿಗೆ ಧನ್ಯವಾದ ಅರ್ಪಿಸುವ ಸಲುವಾಗಿ ನಮ್ಮ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರದ ಬಿ ಎನ್ ಪುಷ್ಪರಾಜ್ ಅವರು ಸಿದ್ದತೆ ನಡೆಸಿದ್ದರು. ಅವರೊಡನೆ ಸಂಘದ ಪದಾಧಿಕಾರಿಗಳು ಕೈ ಜೋಡಿಸಿದರು. ಇದೊಂದು ಆತ್ಮೀಯ ಭಾವನೆ ಮೂಡಿಸುವ ಕಾರ್ಯಕ್ರಮ ಎಂದರೆ ತಪ್ಪಾಗಲಾರದು. ಸುಮಾರು 150 ಕಿ.ಮಿ ದೂರದಿಂದ ಬಂದ ನಮ್ಮನ್ನು ತುಂಬಾ ಆತ್ಮೀಯವಾಗಿ ನಡೆಸಿಕೊಂಡಿದ್ದರು ಅರಣ್ಯಾಧಿಕಾರಿ ಶ್ರೀಧರ್ ಮತ್ತು ತಂಡ. ಅವರಿಗೆ ನಾವು ಕೈ ಜೋಡಿಸಿ ನಮಸ್ಕರಿಸಲೇ ಬೇಕು. ಈ ಕಾರ್ಯಕ್ರಮ ಮುಗಿಯುತ್ತಲೇ ನಮಗೆ ಚಹಾ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಅವರು ಚಹಾ ಮತ್ತು ಈರುಳ್ಳಿ ಬಜ್ಜಿ ತಯಾರಿಸುವಷ್ಟರಲ್ಲಿ ಮತ್ತೆ ಹರಟೆ ತಮಾಷೆಗೆ ಜಾರಿದೆವು. ಅಲ್ಲಿ ಒಂದು ಗ್ರೂಪ್ ಫೋಟೋ ತೆಗೆಯಬೇಕೆನ್ನುವ ಇರಾದೆ ನಮ್ಮ ಅಧ್ಯಕ್ಷರದು. ಆದರೆ ಅಲ್ಲಿ ಅದಕ್ಕೆ ಕಾಲ ಕೂಡಿ ಬರಲಿಲ್ಲ. ನಾವೆಲ್ಲ ಚಹಾ ಕುಡಿದು, ನಮ್ಮ ಗೆಳೆಯರಿಗೆ ರಕ್ತ ಕುಡಿಸಿ ಅಲ್ಲಿಂದ ಹೊರಡಲು ಬಸ್ ಸಿದ್ದವಾಗಿ ನಿಂತಿತ್ತು. ಆದರೂ ಕಟ್ಟಕಡೆಗೂ ಮನಸಿನಲ್ಲಿ ಉಳಿದಿದ್ದ ಒಂದೇ ಒಂದು ಪ್ರಶ್ನೆ “ಮುಖ್ಯದ್ವಾರದಿಂದ ಇಲ್ಲಿಯವರೆ ನಮ್ಮನ್ನು ಯಾಕೆ ನಡೆಸಿದರು”. ಅದಕ್ಕೆ ಉತ್ತರ ಸಿಗಲೇ ಇಲ್ಲ.

ಅಲ್ಲಿಂದ ಹೊರಟಿದ್ದೇ ಲಕ್ಯಾ ಡ್ಯಾಂ ಕಡೆ. ಡ್ಯಾಂ ಮೇಲೆ ನಿಂತು ಕಣ್ಣಾಯಿಸಿದರೆ ಸಿನಿಮಾಗಳಲ್ಲಿ ಕಾಣುವ ದೃಶ್ಯ ವೈಭವದಂತೆ ಭಾಸವಾಗುತ್ತದೆ. ವರನಟ ರಾಜ್‌ಕುಮಾರ್ ಅಭಿನಯದ ಹೆಚ್ಚಿನ ಸಿನಿಮಾಗಳಲ್ಲಿ ಕುದುರೆಮುಖದ ಸೌಂಧರ್ಯ ಕಾಣಸಿಗುತ್ತದೆ. ಇಂದು ನೂರಾರು ಕೋಟಿ ರೂಪಾಯಿ ಖರ್ಚು ಮಾಡುವ ನಿರ್ಮಾಪಕರಿಗಾಗಲಿ, ನಿರ್ದೇಶಕರಿಗಾಗಲಿ ಕುದುರೇಮುಖದ ಸೌಂದರ್ಯ ಕಾಣುವುದಿಲ್ಲವೋ ಅಥವಾ ನಮ್ಮ ಸರಕಾರದ ಷರತ್ತುಗಳಿಂದ ಬೇಸತ್ತಿರುತ್ತರೋ ಅಥವಾ ವಿದೇಶಿ ಮೋಹವೋ ಗೊತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಇಲ್ಲಿ ಚಿತ್ರಿಕರಣಕ್ಕೆ ಬರುವವರ ಸಂಖ್ಯೆ ಕಡಿಮೆ.ಈ ಲಕ್ಯಾ ಡ್ಯಾಂ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ವಿಶಿಷ್ಟ ಅಣೆಕಟ್ಟು. ಭದ್ರಾ ನದಿಯ ಉಪನದಿಯಾದ ಲಕ್ಯಾ ನದಿಯ ಅಡ್ಡವಾಗಿ ನಿರ್ಮಿಸಲಾಗಿರುವ ಈ ಅಣೆಕಟ್ಟು ಒಂದು ಮಣ್ಣಿನ ಅಣೆಕಟ್ಟು. ಕುದುರೆಮುಖ ಐರನ್ ಓರ್ ಕಂಪನಿ ವತಿಯಿಂದ ಗಣಿಗಾರಿಕೆ ತ್ಯಾಜ್ಯ ಹಾಗೂ ಮಣ್ಣು ನೇರವಾಗಿ ನದಿಗಳಿಗೆ ಹರಿಯುವುದನ್ನು ತಡೆಯುವ ಉದ್ದೇಶದಿಂದ 1994 ರಲ್ಲಿ ಇದನ್ನು ನಿರ್ಮಿಸಲಾಯಿತು. ಕುದುರೆಮುಖ ಪ್ರದೇಶದಲ್ಲಿನ ಗಣಿಗಾರಿಕೆಯಿಂದ ಬರುವ ತ್ಯಾಜ್ಯ ವಸ್ತುಗಳನ್ನು ಹಾಗೂ ಕೆಸರನ್ನು ಸಂಗ್ರಹಿಸಿ, ನೀರು ಕಲುಷಿತಗೊಳ್ಳದಂತೆ ಮತ್ತು ನದಿಗಳ ಮೂಲ ಸೇರದಂತೆ ತಡೆಯುವುದು ಇದರ ಮುಖ್ಯ ಕಾರ್ಯವಾಗಿತ್ತು. ಸುಮಾರು 1048 ಮೀಟರ್ ಉದ್ದ ಹಾಗೂ 108 ಮೀಟರ್ ಎತ್ತರವಿರುವ ಈ ಅಣೆಕಟ್ಟು ಸುಮಾರು 572 ಹೆಕ್ಟೇರ್ ಪ್ರದೇಶದಲ್ಲಿ ಹಬ್ಬಿದೆ. ಪ್ರಾಕೃತಿಕ ಸೌಂದರ್ಯದಿಂದ ಕೂಡಿರುವ ಈ ಪ್ರದೇಶವು ಇಂದು ಪ್ರವಾಸಿಗರನ್ನು ಆಕರ್ಷಿಸುವ ತಾಣವಾಗಿಯೂ ಗುರುತಿಸಿಕೊಂಡಿದೆ. ಸುತ್ತಲಿನ ಹಸಿರುಸಿರಿ ನಮ್ಮ ಕಣ್ಣನ್ನು ತಂಪುಗೊಳಿಸಿದ್ದಲ್ಲದೆ. ಆಗಾಗ ಮೇಘರಾಜನ ಜಲ ಸಿಂಚನ ಮನಸ್ಸನ್ನು ಮುದಗೊಳಿಸುತ್ತಿತ್ತು. ಇದರೊಂದಿಗೆ ಇನ್ನೊಂದು ಖುಷಿಯೆಂದರೆ ಇಲ್ಲಿ ಜಿಗಣೆಗಳ ಕಾಟವಿಲ್ಲ. ಎಲ್ಲರೂ ಜಿಗಣೆಯ ಭಯವಿಲ್ಲದೆ ಆರಾಮವಾಗಿ ಓಡಾಡಿಕೊಂಡಿದ್ದರು. ಇಲ್ಲಿ ಮತ್ತೆ ಅಧ್ಯಕ್ಷರಿಂದ ಗ್ರೂಫ್ ಫೋಟೋದ ಇಂಗಿತ. ಇಲ್ಲಿಯೂ ಗ್ರೂಪ್ ಫೋಟೋ ತೆಗೆದೆವು ಆದರೆ ಚಿಕ್ಕ ಗ್ರೂಪ್ ಮಾತ್ರ ಆಯಿತು. ಮತ್ತೆ ಮುಂದಿನ ತಾಣದಲ್ಲಿ ಗ್ರೂಫ್ ಪೋಟೋ ಎಂದಾಯಿತು. 

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಲ್ಲಿ ಕಣ್ಮನ ತುಂಬಿಕೊಂಡು ಹೊರಟ ನಾವು ಹೊಟಿದ್ದು ಕುದುರೇಮುಖ ಎನ್ನುವ ನಿಗೂಡ ಪಟ್ಟಣಕ್ಕೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಪ್ರಕೃತಿಯ ಅಚ್ಚರಿಯ ಸೌಂದರ್ಯಕ್ಕೆ ಸಾಕ್ಷಿಯಾಗಿರುವ ಕುದುರೆಮುಖ, ಕೇವಲ ತನ್ನ ಗಿರಿಧಾಮದ ಹಸಿರಿನಿಂದ ಮಾತ್ರವಲ್ಲದೆ, ಇತಿಹಾಸದ ಒಂದು ರೋಚಕ ಹಾಗೂ ವಿಶಿಷ್ಟ ಅಧ್ಯಾಯದಿಂದಲೂ ಹೆಸರುವಾಸಿಯಾಗಿದೆ. ಒಂದು ಕಾಲದಲ್ಲಿ ಸಾವಿರಾರು ಜನರ ನಗೆಯಿಂದ ಮೊಳಗುತ್ತಿದ್ದ ಸುಂದರ ಟೌನ್‌ಶಿಪ್ ಇಂದು ಮಾನವ ಸಂಚಾರವಿಲ್ಲದೆ, ಪ್ರಕೃತಿಯ ಮಡಿಲಲ್ಲಿ ಮರೆಯಾಗಿರುವ ಒಂದು ‘ಘೋಸ್ಟ್ ಟೌನ್' ಆಗಿ ಬದಲಾಗಿದೆ ಎಂದರೆ ತಪ್ಪಾಗಲಾರದು.  ಚಿಕ್ಕಮಗಳೂರು ಜಿಲ್ಲೆಗೆ ಒಳಪಡುವ ಕುದುರೆಮುಖ ಪರ್ವತ ಶ್ರೇಣಿಯಲ್ಲಿ ಅಪಾರ ಪ್ರಮಾಣದ ಮ್ಯಾಗ್ನೆಟೈಟ್ ಕಬ್ಬಿಣದ ಅದಿರು ಅಡಗಿದೆ ಎಂಬುದನ್ನು ಗುರುತಿಸಿದ ಸರ್ಕಾರ, ಇದರ ಸದ್ಬಳಕೆಗಾಗಿ 1970ರ ದಶಕದಲ್ಲಿ ಕೇಂದ್ರ ಸರ್ಕಾರದ ಸ್ವಾಮ್ಯದ ‘ಕುದುರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್' ಸಂಸ್ಥೆಯನ್ನು ಸ್ಥಾಪಿಸಿತು. ಇಲ್ಲಿಂದ ಹೊರತೆಗೆದ ಅದಿರನ್ನು ದ್ರವ ರೂಪಕ್ಕೆ ಪರಿವರ್ತಿಸಿ, ಕುದುರೆಮುಖದಿಂದ ಕರಾವಳಿಯ ಮಂಗಳೂರು ಬಂದರಿಗೆ ಸಾಗಿಸಲು ಸುಮಾರು 110 ಕಿ.ಮೀ ಉದ್ದದ ಸ್ಲರಿ ಪೈಪ್‌ಲೈನ್ ಅನ್ನು ನಿರ್ಮಿಸಲಾಯಿತು. ಇದು ಆ ಕಾಲದ ಅತ್ಯಂತ ದೊಡ್ಡ ತಾಂತ್ರಿಕ ಸಾಹಸಗಳಲ್ಲಿ ಒಂದಾಗಿತ್ತು. 1980ರಿಂದ 2000ದ ವರೆಗಿನ ದಶಕಗಳು ಕುದುರೆಮುಖದ ಸುವರ್ಣ ಯುಗವೆಂದೇ ಹೇಳಬಹುದು. ಗಣಿಗಾರಿಕೆ ಉತ್ತುಂಗದಲ್ಲಿದ್ದ ಆ ಸಮಯದಲ್ಲಿ ಇದು ಕೇವಲ ಒಂದು ಕೈಗಾರಿಕಾ ಪ್ರದೇಶವಾಗಿರದೆ, ಅತ್ಯಂತ ವ್ಯವಸ್ಥಿತವಾದ ಆಧುನಿಕ ಟೌನ್‌ಶಿಪ್ ಆಗಿ ರೂಪುಗೊಂಡಿತ್ತು. ಇಲ್ಲಿ ಸುಮಾರು 35000ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ನೌಕರರು ಮತ್ತು ಅವರ ಕುಟುಂಬಗಳಿಗಾಗಿ ಸುಸಜ್ಜಿತ ವಸತಿ ಗೃಹಗಳು ನಿರ್ಮಿಸಲ್ಪಟ್ಟಿದ್ದವು. ಮಕ್ಕಳಿಗಾಗಿ ಅತ್ಯುತ್ತಮ ಶಾಲೆಗಳು, ಕಾಲೇಜುಗಳು, ಅತ್ಯಾಧುನಿಕ ಆಸ್ಪತ್ರೆಗಳು, ಬ್ಯಾಂಕ್‌ಗಳು, ದೊಡ್ಡ ಸೂಪರ್ ಮಾರ್ಕೆಟ್‌ಗಳು, ಕ್ಲಬ್‌ಗಳು ಮತ್ತು ಮನರಂಜನಾ ಕೇಂದ್ರಗಳು ಇಲ್ಲಿ ಲಭ್ಯವಿದ್ದವು. ಎಲ್ಲಾ ಧರ್ಮದವರಿಗೂ ಪ್ರತ್ಯೇಕವಾಗಿ ಸುಂದರವಾದ ದೇವಸ್ಥಾನಗಳು, ಚರ್ಚ್ ಹಾಗೂ ಮಸೀದಿಗಳನ್ನು ನಿರ್ಮಿಸಲಾಗಿದ್ದು, ಇಲ್ಲಿನ ಜನಜೀವನ ಅತ್ಯಂತ ಸೌಹಾರ್ದಯುತವಾಗಿತ್ತು. ಆದರೆ, ಪಶ್ಚಿಮ ಘಟ್ಟಗಳ ಸೂಕ್ಷ್ಮ ಜೀವವೈವಿಧ್ಯತೆ ಮತ್ತು ಅಪರೂಪದ ಸಸ್ಯ-ಪ್ರಾಣಿ ಸಂಕುಲಕ್ಕೆ ಗಣಿಗಾರಿಕೆಯಿಂದ ತೀವ್ರ ಹಾನಿಯಾಗುತ್ತದೆ ಎಂಬ ಕಾರಣಕ್ಕಾಗಿ ಪರಿಸರವಾದಿಗಳು ಸುದೀರ್ಘ ಕಾನೂನು ಹೋರಾಟ ನಡೆಸಿದರು. ಪರಿಸರ ಸಂರಕ್ಷಣೆಯ ಹಿತಾಸಕ್ತಿಯನ್ನು ಪರಿಗಣಿಸಿದ ಭಾರತದ ಸುಪ್ರೀಂ ಕೋರ್ಟ್, ಕುದುರೆಮುಖದಲ್ಲಿ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಐತಿಹಾಸಿಕ ಆದೇಶ ಹೊರಡಿಸಿತು. ಅದರಂತೆ, 2005ರ ಡಿಸೆಂಬರ್ 31ರಂದು ಅಧಿಕೃತವಾಗಿ ಗಣಿಗಾರಿಕೆ ಚಟುವಟಿಕೆಗಳು ಸ್ಥಬ್ಧಗೊಂಡವು. ಗಣಿಗಾರಿಕೆ ನಿಂತ ಬಳಿಕ ಈ ಸಂಪೂರ್ಣ ಪ್ರದೇಶವನ್ನು 'ಕುದುರೆಮುಖ ರಾಷ್ಟ್ರೀಯ ಉದ್ಯಾನವನ' ಎಂದು ಘೋಷಿಸಿ, ವನ್ಯಜೀವಿ ಸಂರಕ್ಷಣೆಗೆ ಒತ್ತು ನೀಡಲಾಯಿತು. ಗಣಿಗಾರಿಕೆ ಸ್ಥಗಿತಗೊಂಡ ನಂತರ ಕೆಐಒಸಿಎಲ್ ಕಂಪನಿಯು ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿತು. ನೌಕರರು ಮತ್ತು ಅಧಿಕಾರಿಗಳು ಕೆಲಸವಿಲ್ಲದೆ ಕ್ರಮೇಣ ಆ ಪ್ರದೇಶವನ್ನು ತೊರೆದು ಬೇರೆಡೆಗೆ ವಲಸೆ ಹೋದರು. ಯಾವಗಲೂ ನಳನಳಿಸುತ್ತಿದ್ದ ಸುಂದರ ಮನೆಗಳು, ವಿಶಾಲವಾದ ರಸ್ತೆಗಳು, ಶಾಲಾ ಕಟ್ಟಡಗಳು ಮತ್ತು ಕಚೇರಿಗಳು ಇಂದು ಮಾನವರಿಲ್ಲದೆ ಪಾಳುಬಿದ್ದಿವೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾನವನ ನಿರ್ಗಮನದೊಂದಿಗೆ ಪ್ರಕೃತಿಯು ತನ್ನ ಒಡೆತನವನ್ನು ಮರಳಿ ಪಡೆಯಲಾರಂಭಿಸಿದೆ. ಈಗ ಪಾಳುಬಿದ್ದ ಕಟ್ಟಡಗಳ ಗೋಡೆಗಳ ಮೇಲೆ ಬೃಹತ್ ಮರಗಳು ಬೆಳೆದಿವೆ, ಕಾಡುಸಸ್ಯಗಳು ಆವರಿಸಿಕೊಂಡಿವೆ. ಜನಸಂಚಾರವಿಲ್ಲದ ಈ ನಿಶ್ಯಬ್ದ, ರಹಸ್ಯಮಯ ಹಾಗೂ ಅಚ್ಚರಿಯ ಪ್ರದೇಶವು ಈಗ ಸಾಹಸಿ ಪ್ರವಾಸಿಗರು ಮತ್ತು ಛಾಯಾಗ್ರಾಹಕರನ್ನು ವಿಶಿಷ್ಟ ರೀತಿಯಲ್ಲಿ ಆಕರ್ಷಿಸುತ್ತಿದೆ. ಕುದುರೆಮುಖದ ಈ ಪಾಳುಬಿದ್ದ ಟೌನ್‌ಶಿಪ್ ಕೇವಲ ಕಾಂಕ್ರೀಟ್ ಕಟ್ಟಡಗಳ ಅವಶೇಷವಲ್ಲ. ಇದು ಕೈಗಾರಿಕಾ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ನಡುವಿನ ಸಂಘರ್ಷದ ಜೀವಂತ ಸಾಕ್ಷಿಯಾಗಿದೆ. ಮಾನವನ ಅತಿಯಾದ ಆಸೆಗೆ ಬ್ರೇಕ್ ಹಾಕಿ, ಪ್ರಕೃತಿಯು ತಾನು ಕಳೆದುಕೊಂಡಿದ್ದನ್ನು ಹೇಗೆ ಮರಳಿ ಪಡೆಯುತ್ತದೆ ಎಂಬುದಕ್ಕೆ ಕುದುರೆಮುಖದ ಈ ಟೌನ್‌ಶಿಪ್ ಒಂದು ಜೀವಂತ ಉದಾಹರಣೆಯಾಗಿದೆ. ಅದರೊಂದಿಗೆ ಈ ಟೌನ್‌ಶಿಪ್‌ನಲ್ಲಿ ಅದೆಷ್ಟೋ ಜನರ ನೆನಪಿನ ಬುತ್ತಿಯಿದೆ. ಪ್ರಕೃತಿಯ ಮಡಲಿನಲಿ ನಳನಲಿಸಿದ್ದ ನನ್ನ ಮನಸ್ಸಿಗೆ ಇಲ್ಲಿ ಪ್ರವೇಶಿಸುತ್ತಿದ್ದಂತೆ ಕತ್ತಲಾವರಿಸಿದ ಭಾವನೆ ಮೂಡಿತು. ಇನ್ನೊಂದಷ್ಟು ವರ್ಷಗಳು ಉರುಳಿದರೆ ಈ ನಗರಿ ಪ್ರಕೃತಿಯಲ್ಲಿ ವಿಲೀನವಾಗಿಬಿಡಬಹುದು. ಈ ಕಾಣುವ ಅವಶೇಷಗಳು ಮಣ್ಣಿನಲ್ಲಿ ಮಣ್ಣಾಗಬಹುದು ಅಷ್ಟೇ.  ಈ ಪಳೆಯುಳಿಕೆಯ ನಗರಿಯಲ್ಲಿಯೇ ಒಂದು ಗ್ರೂಫ್ ಫೋಟೋ ಕ್ಲಿಕ್ಕಿಸಿಕೊಂಡೆವು.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಂಜೆಯಾಗುತ್ತಿದ್ದಂತೆ ಮಂಜು ಹಸಿರು ಕಾನನವನ್ನು ತನ್ನದಾಗಿಸಿಕೊಳ್ಳತೊಡಗಿತು. ದಟ್ಟ ಹಸಿರು, ತಂಪಾದ ಗಾಳಿ, ಜುಳುಜುಳು ಹರಿಯುವ ನೀರಿನ ಸದ್ದು- ಇವೆಲ್ಲವೂ ನಮ್ಮನ್ನು ಲೌಕಿಕ ಜಗತ್ತಿನಿಂದ ಬೇರೆಯೇ ಲೋಕಕ್ಕೆ ಕೊಂಡೊಯ್ದಿದ್ದವು. ನಮ್ಮ ಕಣ್ಣಾರೆ ಕಂಡ ಈ ಪಶ್ಚಿಮ ಘಟ್ಟದ ಒಡಲು ಕೇವಲ ಒಂದು ಭೌಗೋಳಿಕ ಪ್ರದೇಶವಲ್ಲ, ಅದು ನಮ್ಮ ಜೀವಜಾಲದ ಉಸಿರು. ಅಕ್ಷರಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತೇವೆ ಎಂದುಕೊಳ್ಳುವ ನಾವು, ಈ ನಿಸರ್ಗದ ಮೂಕ ರೋಧನೆಯನ್ನು ಮತ್ತು ಅದರ ಅತಿಮಾನುಷ ಸೌಂದರ್ಯವನ್ನು ಒಟ್ಟಿಗೆ ದಾಖಲಿಸುವ ಸುಸಂದರ್ಭವನ್ನು ಪಡೆದದ್ದು ನಮ್ಮ ಸೌಭಾಗ್ಯ. ಈ ಹಸಿರು ಸಿರಿಯನ್ನು ಮುಂದಿನ ಪೀಳಿಗೆಗೆ ಅಕ್ಷಯ ಪಾತ್ರೆಯಾಗಿ ಉಳಿಸಬೇಕೆಂಬ ಮೌನ ಸಂಕಲ್ಪವೊಂದು ಮನದಲ್ಲಿ ಮೂಡಿ, ನನ್ನ ಲೇಖನಿಯ ಮಸಿ ಪಶ್ಚಿಮ ಘಟ್ಟದ ಮಣ್ಣಿನ ಘಮವನ್ನು ಸಾರುತಿದೆ ಎಂದುಕೊಳ್ಳುತ್ತಾ, ನಮ್ಮ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಜೊತೆಯಲ್ಲಿ ಅರಣ್ಯಾಧಿಕಾರಿಗಳಿಗೆ ಈ ಮೂಲಕ ನಮಿಸುತ್ತಿದ್ದೇನೆ.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ