ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪ್ರವೇಶಾತಿ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಕಳೆದ ಸಾಲಿನಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಸಂಖ್ಯಾಶಾಸ್ತ್ರ, ಮೆಟೀರಿಯಲ್ ಸೈನ್ಸ್, ಇಲೆಕ್ಟ್ರಾನಿಕ್ಸ್, ಮೆರೈನ್ ಜಿಯಾಲಜಿ, ಬಯೋ ಕೆಮಿಸ್ಟ್ರಿ ಮತ್ತು ಎನ್ವಿರಾನ್ಮೆಂಟಲ್ ಸೈನ್ಸ್ ಸೇರಿದಂತೆ ಎಲ್ಲಾ 46 ಕೋರ್ಸ್‌ಗಳಿಗೆ ಈ ಬಾರಿ ಅರ್ಜಿ ಆಹ್ವಾನಿಸಲಾಗಿದೆ. ಸೂಕ್ತ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶಾತಿಗೆ ಮುಂದೆ ಬಂದರೆ, ಸರ್ಕಾರದ ವಿಶೇಷ ಅನುಮತಿ ಪಡೆದು ಈ ಕೋರ್ಸ್‌ಗಳನ್ನು ಪುನರಾರಂಭಿಸಲಾಗುವುದು ಎಂದು ಕುಲಪತಿ ಡಾ. ಪಿ. ಎಲ್. ಧರ್ಮ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರುಪದವಿ ಪರೀಕ್ಷೆಯ 6ನೇ ಸೆಮಿಸ್ಟರ್ ಫಲಿತಾಂಶವನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಯುಯುಸಿಎಮ್‌ಎಸ್ ಸಮಸ್ಯೆಗಳನ್ನು ಬಗೆಹರಿಸಲು ಪ್ರತ್ಯೇಕ ವಿಭಾಗವನ್ನು ರಚಿಸಲಾಗಿದೆ. ಅಲ್ಲದೆ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕನ್ಸಾಲಿಡೇಟೆಡ್ ಮಾರ್ಕ್ಸ್ ಕಾರ್ಡ್ ವಿತರಿಸಲಾಗುತ್ತಿದೆ. ಕ್ಯಾಂಪಸ್‌ನಲ್ಲಿ ಶೌಚಾಲಯ ನವೀಕರಣ, ಲ್ಯಾಬ್ ಹಾಗೂ ಸಾಫ್ಟ್‌ವೇರ್ ಅಪ್‌ಗ್ರೇಡ್ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಅತಿಥಿ ಉಪನ್ಯಾಸಕರಿಗೆ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ವೇತನ ಪಾವತಿಸುವ ವ್ಯವಸ್ಥೆ ಮಾಡಲಾಗಿದೆ. ವಿಶ್ವವಿದ್ಯಾನಿಲಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ 'ಪೆನ್ಷನ್ ಟ್ರಸ್ಟ್' ರಚಿಸಿ ನಿವೃತ್ತ ನೌಕರರಿಗೆ ತಿಂಗಳ ಆರಂಭದಲ್ಲೇ ಪಿಂಚಣಿ ತಲುಪುವಂತೆ ಮಾಡಲಾಗಿದೆ. ಉಡುಪಿಯ ಬೆಳಪು ಕೇಂದ್ರವನ್ನು 'ಸರ್ಕಾರಿ ಪ್ರಾಯೋಜಿತ ಸ್ಪೋರ್ಟ್ಸ್ ಅಕಾಡೆಮಿ'ಯಾಗಿ ಪರಿವರ್ತಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಎ ಪ್ಲಸ್ ಪ್ಲಸ್ ಗ್ರೇಡ್‌ಗಾಗಿ ನ್ಯಾಕ್ ದಾಖಲೆಗಳನ್ನು ಅಪ್‌ಲೋಡ್ ಮಾಡಲಾಗಿದ್ದು, ಹಿಂದಿನ 33 ಕೋಟಿ ರೂ.ಗಳ ಆಡಿಟ್ ಆಕ್ಷೇಪಣೆಗಳನ್ನು ಯಶಸ್ವಿಯಾಗಿ ಶಮನಗೊಳಿಸಲಾಗಿದೆ ಎಂದು ಕುಲಪತಿಗಳು ವಿವರಿಸಿದ್ದಾರೆ. ಮುಂದಿನ ದಿನಗಳಲ್ಲಿ ನೂತನ ಕೌಶಲ್ಯ ಕೋರ್ಸ್‌ಗಳು ಮತ್ತು ಇವೆಂಟ್ ಮ್ಯಾನೇಜ್‌ಮೆಂಟ್ ಪ್ರೋಗ್ರಾಮ್‌ಗಳನ್ನು ಪರಿಚಯಿಸಲು ಸಿದ್ಧತೆ ನಡೆಸಲಾಗಿದೆ ಎಂದರು.