ಬಂಟ್ವಾಳ: ಸಿದ್ದರಾಮಯ್ಯ ನವರು ಈಗ ಕುಂಕುಮ ಹಾಕ್ತಿದ್ದಾರೆ. ಅವರ ಹಣೆಯಲ್ಲಿ ಕುಂಕುಮ ಕಾಣ್ತಿದೆ. ಮುಂಚೆ ಆರತಿ ಕೊಟ್ಟರೆ ಬೇಡ ಎನ್ನುತ್ತಿದ್ದರು. ಈಗ ಅವರಿಗೆ ಹೆಂಡ್ತಿ ಹೆಸರಲ್ಲಿ ಅರ್ಚನೆ ಮಾಡುವ ಪರಿಸ್ಥಿತಿ ಬಂದಿದೆ. ಅರ್ಚಕ ಕುಂಕುಮ ಕೊಡದಿದ್ರು ಇವರೇ ತಗೋತಾರೆ ಎಂದು ವಿರೋದ ಪಕ್ಷ ನಾಯಕ ಆರ್ ಅಶೋಕ್ ಲೇವಡಿ ಮಾಡಿದ್ದಾರೆ. ಅವರು ಬಂಟ್ವಾಳದ ಬಂಟರ ಭವನದಲ್ಲಿ ನಡೆದ ಬಿಜೆಪಿ ಜನಪ್ರತಿನಿಧಿಗಳ ಸಮಾವೇಶದಲ್ಲಿ ಮಾತನಾಡಿ,
ಕಾಂಗ್ರೆಸ್ ನವರಿಗೆ ಈ ಸಭೆ ಸಮಾರಂಭಗಳಲ್ಲಿ ನಂಬಿಕೆಯಿಲ್ಲ. ಅವರಿಗೆ ದುಡ್ಡು ಹೊಡಿಯೋದರಲ್ಲಿ ಮಾತ್ರ ನಂಬಿಕೆ ಎಂದರು. ಕಾಂಗ್ರೆಸ್ ನವರು ನಮ್ಮ ದುಡ್ಡನ್ನು ನಮಗೆ ಉಚಿತ ಅಂತಾ ಕೊಡ್ತಿದ್ದಾರೆ. ಈ ಉಚಿತ ಕೊಡ್ತಿರೋದು ಏನು ಅವರ ಅಪ್ಪನ ಮನೆಯಿಂದ ಕೊಡೋದಾ? ಸರ್ಕಾರ ಒಂದು ರೀತಿ ಪಾಪರ್ ಆಗಿ ಹೋಗಿದೆ. ಅನುದಾನ ಎಂಬುದು ಇವತ್ತು ಮರೀಚಿಕೆ ಆಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದಾಗಿಂದ ಇರುವವರೆಗೆ ಯಾವ ಅನುದಾನವು ಬಂದಿಲ್ಲ. ಈ ಸರ್ಕಾರ ತೊಲಗಿದ್ರೆ ಮಾತ್ರ ಅನುದಾನ ಬರೋದು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ 14 ಸೈಟ್ ಮಾತ್ರ ನುಂಗಿರೋದಲ್ಲ. ಸಾವಿರ ಸೈಟ್ ನ್ನು ಸಿದ್ದರಾಮಯ್ಯ ನುಂಗಿದ್ದಾರೆ. ಅವರ ಬೆಂಬಲಿಗರೂ ಸೇರಿ ನುಂಗಿದ್ದಾರೆ. ಮುಂದೆ 100% ಸಿದ್ದರಾಮಯ್ಯ ನವರು ಇರಲ್ಲ. ರಾಜೀನಾಮೆ ಕೊಡುವ ಪರಿಸ್ಥಿತಿ ಬಂದಿದೆ.ಈಗ ಈ ಸರ್ಕಾರಕ್ಕೆ ಗ್ಯಾರಂಟಿ ಇಲ್ಲ. ಯಾವುದೇ ಕ್ಷಣದಲ್ಲೂ ಬಿದ್ದು ಹೋಗಬಹುದು ಎಂದರು.
ಪರಿಷತ್ ಉಪಚುನಾವಣೆ ಕ್ಷೇತ್ರವನ್ನು ಹಾಲಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಪ್ರತಿನಿಧಿಸುತ್ತಿದ್ದರು. ಈಗ ಹಿಂದುತ್ವದ ಕಟ್ಟಾಳು ಕಿಶೋರ್ ಕುಮಾರ್ ಅವರನ್ನು ಕಣಕ್ಕಿಳಿಸಿದ್ದೇವೆ. ಹಾಗಾಗಿ ಈ ಕ್ಷೇತ್ರದಲ್ಲಿ ದೊಡ್ಡ ಅಂತರದಲ್ಲಿ ಮತ್ತೊಮೆ ಗೆಲ್ಲುತ್ತೇವೆ ಎಂದರು. ಈಗಾಗಲೇ ಕಾಂಗ್ರೆಸ್ಸಿನವರು ನಿಮ್ಮ ಬಾಗಿಲಿಗೆ ಬಂದಿರಬಹುದು. ಅವರು ಬಂದರೆ ಬಾಗಿಲು ಹಾಕಿ ಎಂದು ಜನ ಪ್ರತಿನಿಧಿಗಳಿಗೆ ಕಿವಿಮಾತು ಹೇಳಿದರು.
ಸಮಾವೇಶದಲ್ಲಿ ಬಿಜೆಪಿ ರಾಜ್ಯಧ್ಯಕ್ಷ ಬಿ ವೈ ವಿಜಯೇಂದ್ರ, ಚುನಾವಣಾ ಉಸ್ತುವಾರಿ ಸುಧಾಕರ್ ರೆಡ್ಡಿ, ಚಲವಾದಿ ನಾರಾಯಣಸ್ವಾಮಿ, ಮಾಜಿ ಸಂಸದ ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್, ಹಾಲಿ ಸಂಸದರಾದ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ್ ಪೂಜಾರಿ, ಶಾಸಕರಾದ ಸುನಿಲ್ ಕುಮಾರ್, ಡಾ. ವೈ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಭಾಗೀರಥಿ ಮರುಳ್ಯ, ಉಮಾನಾಥ್ ಕೋಟ್ಯಾನ್, ರಾಜೇಶ್ ಕಾವೇರಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು, ಬಿಜೆಪಿ ಮುಖಂಡ ಗಣೇಶ್ ಕಾರ್ಮಿಕ ಮುಂತಾದವರು ಉಪಸ್ಥಿತರಿದ್ದರು.