ಹೈದರಬಾದ್ : ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲು ಸಮೀಪಿಸಿದೆ. ಹೈದರಾಬಾದ್ ಮೂಲದ ಖಾಸಗಿ ಬಾಹ್ಯಾಕಾಶ ನವೋದ್ಯಮ ‘ಸ್ಕೈರೂಟ್ ಏರೋಸ್ಪೇಸ್’ ಅಭಿವೃದ್ಧಿಪಡಿಸಿರುವ ‘ವಿಕ್ರಮ್-1’ ರಾಕೆಟ್‌ನ ಮೊದಲ ಪ್ರಾಯೋಗಿಕ ಉಡಾವಣೆ ಜುಲೈ 18ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಡೆಯಲಿದೆ. ಈ ಐತಿಹಾಸಿಕ ಪ್ರಯೋಗದಲ್ಲಿ ಹಲವು ಪೇಲೋಡ್‌ಗಳನ್ನು ಹೊತ್ತೊಯ್ಯಲಿರುವ ರಾಕೆಟ್, ಭಾರತದ ಖಾಸಗಿ ಬಾಹ್ಯಾಕಾಶ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಲಿದೆ.
‘ಮಿಷನ್ ಆಗಮನ್’ ಎಂದು ಹೆಸರಿಸಲಾದ ಈ ಯೋಜನೆಯ ವಿಶೇಷತೆಯೆಂದರೆ, ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತಾಕ್ಷರದ ‘ವಂದೇ ಮಾತರಂ’ ಸಂದೇಶವನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯಲಾಗುತ್ತಿದೆ. ಇದಲ್ಲದೆ, ಸ್ಕೈರೂಟ್ ತಂಡದ ಸದಸ್ಯರು, ಹೂಡಿಕೆದಾರರು, ನೀತಿ ನಿರೂಪಕರು ಹಾಗೂ ಜಾಗತಿಕ ಹಿತೈಷಿಗಳಿಂದ ಕೈಯಾರೆ ಬರೆದ ಪತ್ರಗಳೂ ಈ ರಾಕೆಟ್ ಮೂಲಕ ಸಾಗಲಿವೆ. ಈ ಉಪಕ್ರಮವು ಭಾರತದ ಬೆಳೆಯುತ್ತಿರುವ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ರಾಷ್ಟ್ರವ್ಯಾಪಿ ಬೆಂಬಲವನ್ನು ಬಿಂಬಿಸುವ ಉದ್ದೇಶ ಹೊಂದಿದೆ.
ವಿಕ್ರಮ್-1 ರಾಕೆಟ್ ಭಾರತೀಯ ನೆಲದಿಂದ ಉಡಾವಣೆಯಾಗಲಿರುವ ಮೊದಲ ಖಾಸಗಿ ಆರ್ಬಿಟಲ್ ದರ್ಜೆಯ ರಾಕೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ. ಈ ಪ್ರಯೋಗವು ವಾಣಿಜ್ಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುವ ನಿರೀಕ್ಷೆ ಇದೆ. ಈ ಉಡಾವಣೆಯಲ್ಲಿ ಕೇವಲ ಸ್ಮರಣಿಕೆಗಳಷ್ಟೇ ಅಲ್ಲದೆ, ದೇಶ-ವಿದೇಶಗಳ ಹಲವು ಸ್ಟಾರ್ಟ್‌ಅಪ್‌ಗಳ ಉಪಗ್ರಹಗಳು ಮತ್ತು ತಾಂತ್ರಿಕ ಪ್ರದರ್ಶನ ಪೇಲೋಡ್‌ಗಳೂ ಸೇರಿವೆ. ಗ್ರಾಹಾ ಸ್ಪೇಸ್, ಕಾಸ್ಮೋಸರ್ವ್, ಡಿಕ್ಯೂಬ್ಡ್ ಸೇರಿದಂತೆ ವಿವಿಧ ಸಂಸ್ಥೆಗಳ ತಂತ್ರಜ್ಞಾನಗಳ ಜೊತೆಗೆ ಸ್ಕೈರೂಟ್‌ನ ಸ್ವಂತ ‘ಸ್ಕೋಪ್’ ವ್ಯವಸ್ಥೆಯೂ ಇದರಲ್ಲಿ ಭಾಗವಾಗಲಿದೆ. ಜೊತೆಗೆ, ‘ಕಾಸ್ಮಿಕ್ ಬ್ಲೂಮ್’ ಹೆಸರಿನ ಡೈಮಂಡ್ ಕಲಾಕೃತಿ ಹಾಗೂ ಸೂಕ್ಷ್ಮ ಕಲೆಯ ಪೇಲೋಡ್ ಕೂಡ ಬಾಹ್ಯಾಕಾಶ ಸೇರಲಿದೆ.
ಉಡಾವಣೆಗೆ ಅಗತ್ಯವಿರುವ ವಾಯುಪ್ರದೇಶ ಮತ್ತು ಸಾಗರ ಸುರಕ್ಷತಾ ಅನುಮತಿಗಳನ್ನು ಈಗಾಗಲೇ ಪಡೆಯಲಾಗಿದ್ದು, ನಿರ್ಬಂಧಿತ ವಲಯಗಳ ಬಗ್ಗೆ ಅಧಿಕೃತ ಪ್ರಕಟಣೆಗಳೂ ಹೊರಬಿದ್ದಿವೆ. ಜುಲೈ 18ರಂದು ನಡೆಯಲಿರುವ ಈ ಉಡಾವಣೆ, ಭಾರತದ ಬಾಹ್ಯಾಕಾಶ ಯಾನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸುವ ಮಹತ್ವದ ಕ್ಷಣವೆಂದು ಪರಿಗಣಿಸಲಾಗಿದೆ.