ಬೆಂಗಳೂರು : ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜುಲೈ 11ರಂದು ರಾಜ್ಯಾದ್ಯಂತ ನಡೆಸಲಾದ ಎರಡನೇ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಟ್ಟು 78.79 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 3 ಸಾವಿರ ಕೋಟಿ ರೂ.ಗಳ ಬೃಹತ್ ಪರಿಹಾರ ಮೊತ್ತವನ್ನು ವಿತರಿಸಲಾಗಿದೆ. ಈ ಕುರಿತು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷೆ, ನ್ಯಾಯಮೂರ್ತಿ ಅನು ಸಿವರಾಮನ್ ಅವರು ಸವಿಸ್ತಾರವಾದ ಮಾಹಿತಿ ನೀಡಿದರು. ಹೈಕೋರ್ಟ್‌ನ ಬೆಂಗಳೂರು ಪ್ರಧಾನಪೀಠ ಸೇರಿದಂತೆ ಧಾರವಾಡ, ಕಲಬುರಗಿ ಪೀಠಗಳು ಹಾಗೂ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳ ಒಟ್ಟು 977 ಪೀಠಗಳಲ್ಲಿ ಏಕಕಾಲಕ್ಕೆ ಕಲಾಪ ನಡೆಸಿ, ನ್ಯಾಯಾಲಯದಲ್ಲಿ ಬಾಕಿ ಇದ್ದ 2.54 ಲಕ್ಷ ಹಾಗೂ 76.25 ಲಕ್ಷ ವ್ಯಾಜ್ಯಪೂರ್ವ ಪ್ರಕರಣಗಳು ಸೇರಿದಂತೆ ಒಟ್ಟು 78.79 ಲಕ್ಷ ಕೇಸ್‌ಗಳನ್ನು ಇತ್ಯರ್ಥಗೊಳಿಸಲಾಗಿದೆ.
ವಿಶೇಷವಾಗಿ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 2019ರಿಂದ 2026ರವರೆಗೆ ಬಾಕಿ ಇದ್ದ ಪ್ರಕರಣಗಳಲ್ಲಿ 19.13 ಲಕ್ಷ ಕೇಸ್‌ಗಳನ್ನು ವಿಲೇವಾರಿ ಮಾಡಲಾಗಿದ್ದು, 55 ಕೋಟಿ ರೂ.ಗೂ ಅಧಿಕ ದಂಡದ ಮೊತ್ತ ಸಂಗ್ರಹವಾಗಿದೆ. ರಾಜ್ಯ ಸರ್ಕಾರವು ಜೂನ್ 21ರಿಂದ ಜುಲೈ 10ರವರೆಗೆ ನೀಡಿದ್ದ ಶೇ. 50ರಷ್ಟು ರಿಯಾಯಿತಿಯ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಂಡಿದ್ದಾರೆ. ಇದೇ ವೇಳೆ ಸಾರಿಗೆ ಇಲಾಖೆಗೆ ಸಂಬಂಧಿಸಿದ 1,212 ಪ್ರಕರಣಗಳನ್ನು ವಿಲೇವಾರಿ ಮಾಡಿ 61.99 ಲಕ್ಷ ರೂ. ದಂಡ ವಿಧಿಸಲಾಗಿದೆ. ಈ ಅದಾಲತ್‌ನಲ್ಲಿ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಹಲವು ಪ್ರಕರಣಗಳಿಗೆ ಮುಕ್ತಿ ಸಿಕ್ಕಿದ್ದು, 5 ವರ್ಷಕ್ಕಿಂತ ಹಳೆಯ 1,544, 10 ವರ್ಷಕ್ಕಿಂತ ಹಳೆಯ 330 ಹಾಗೂ 15 ವರ್ಷಕ್ಕಿಂತಲೂ ಹಳೆಯದಾದ 24 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ. ಅಲ್ಲದೆ, 1,948 ಹಿರಿಯ ನಾಗರಿಕರು ತಮ್ಮ ದೀರ್ಘಕಾಲದ ವಿವಾದಗಳಿಂದ ಸೌಹಾರ್ದಯುತವಾಗಿ ಮುಕ್ತಿ ಪಡೆದಿದ್ದಾರೆ.
ಅದಾಲತ್‌ನಲ್ಲಿ ಕೆಲವು ಗಮನಾರ್ಹ ರಾಜಿ ಪ್ರಕರಣಗಳು ನಡೆದಿದ್ದು, ಚಿಕ್ಕಮಗಳೂರಿನ ವಾಣಿಜ್ಯ ಜಾರಿ ಪ್ರಕರಣವೊಂದರಲ್ಲಿ ಕೆನರಾ ಬ್ಯಾಂಕ್‌ನ 8 ಲಕ್ಷ ರೂ. ಸಾಲದ ವಿವಾದವನ್ನು ಒನ್-ಟೈಮ್ ಸೆಟಲ್‌ಮೆಂಟ್ ಅಡಿಯಲ್ಲಿ ಕೇವಲ 15,000 ರೂ.ಗಳಿಗೆ ಇತ್ಯರ್ಥಪಡಿಸಲಾಗಿದೆ. ಹಾಗೆಯೇ ಧಾರವಾಡ ಜಿಲ್ಲೆಯ ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣವೊಂದರಲ್ಲಿ ಗರಿಷ್ಠ 2.45 ಕೋಟಿ ರೂ. ಪರಿಹಾರ ಮಂಜೂರು ಮಾಡಲಾಗಿದೆ. ಕೌಟುಂಬಿಕ ಕಲಹಗಳಿಂದ ದೂರಾಗಿದ್ದ 315 ದಂಪತಿಗಳು ಲೋಕ್ ಅದಾಲತ್‌ನ ಸಮಾಲೋಚನೆಯ ಫಲವಾಗಿ ಮತ್ತೆ ಒಂದಾಗಿ ಬಾಳಲು ನಿರ್ಧರಿಸಿರುವುದು ವಿಶೇಷವಾಗಿದೆ.
ಮುಂದಿನ ದಿನಗಳಲ್ಲೂ ಈ ಜನಪರ ಪ್ರಕ್ರಿಯೆ ಮುಂದುವರಿಯಲಿದ್ದು, ಜುಲೈ 18ರಂದು ಚೆಕ್ ಬೌನ್ಸ್ ಪ್ರಕರಣಗಳಿಗಾಗಿಯೇ ವಿಶೇಷ ಲೋಕ ಅದಾಲತ್ ನಡೆಯಲಿದೆ. ಇದಕ್ಕಾಗಿ ಈಗಾಗಲೇ 64,191 ಪ್ರಕರಣಗಳನ್ನು ಪಟ್ಟಿ ಮಾಡಲಾಗಿದೆ. ಇದಲ್ಲದೆ, 2026ರ ಆಗಸ್ಟ್ 21 ರಿಂದ ಮೂರು ದಿನಗಳ ಕಾಲ ಸುಪ್ರೀಂಕೋರ್ಟ್ ವಿಶೇಷ ಲೋಕ ಅದಾಲತ್ 'ಸಮಾಧಾನ ಸಮಾರೋಹ'ವನ್ನು ಹಮ್ಮಿಕೊಂಡಿದೆ. ಇನ್ನು ಮುಂದಿನ (ಮೂರನೇ) ರಾಷ್ಟ್ರೀಯ ಲೋಕ್ ಅದಾಲತ್ 2026ರ ಸೆಪ್ಟೆಂಬರ್ ತಿಂಗಳಲ್ಲಿ ಜರುಗಲಿದ್ದು, ಸಾರ್ವಜನಿಕರು ತಮ್ಮ ಬಾಕಿ ಇರುವ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ನ್ಯಾಯಮೂರ್ತಿ ಅನು ಸಿವರಾಮನ್ ತಿಳಿಸಿದ್ದಾರೆ.