ಮಂಗಳೂರು: ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ 11 ದಿನಗಳ ಕಾಲ ಜರಗಿದ ಮಂಗಳೂರು ದಸರಾ ಉತ್ಸವ ಶೋಭಾಯಾತ್ರೆಗೆ ರವಿವಾರ ಸಂಜೆ ಚಾಲನೆ ದೊರಕಿತು. ಸಂಜೆ 4ಗಂಟೆ ವೇಳೆಗೆ ವಿಸರ್ಜನಾ ಪೂಜೆಯೊಂದಿಗೆ, ಮೊದಲಿಗೆ ಶ್ರೀಮಹಾಗಣಪತಿ, ಶ್ರೀ ನವದುರ್ಗೆಯರ ಶ್ರೀಶಾರದಾ ಮಾತೆಗೆ ವಿಶೇಷ ಪೂಜೆ ನಡೆದು, ವೈಭವದ ಶೋಭಾಯಾತ್ರೆ ಆರಂಭಗೊಂಡಿತು.
ಶ್ರೀಕ್ಷೇತ್ರ ಕುದ್ರೋಳಿಯಿಂದ ಹೊರಟ ದಸರಾ ಶೋಭಾಯಾತ್ರೆಯು ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್ ನಾರಾಯಣ ಗುರು ಸರ್ಕಲ್, ಲಾಲ್ ಬಾಗ್, ಬಲ್ಲಾಳ್‌ಬಾಗ್, ಪಿವಿಎಸ್ ವೃತ್ತ, ಕೆ.ಎಸ್. ರಾವ್ ರಸ್ತೆ, ಹಂಪನಕಟ್ಟೆ, ವಿ.ವಿ. ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಕಾರ್‌ಸ್ಟ್ರೀಟ್, ಅಳಕೆಯ ಮೂಲಕ ಬೆಳಗ್ಗೆ ಮತ್ತೆ ಶ್ರೀ ಕ್ಷೇತ್ರ ಕುದ್ರೋಳಿಗೆ ಆಗಮಿಸುವ ಮೂಲಕ 9ಕಿ.ಮೀ. ವ್ಯಾಪ್ತಿಯಲ್ಲಿ ಸಾಗಿತು.
ಅನೇಕ ಕಲಾತಂಡಗಳ ವಿವಿಧ ಸಾಂಸ್ಕೃತಿಕ ವೈಭವಗಳು, ಸ್ತಬ್ಧಚಿತ್ರ, ಹುಲಿವೇಷ ಕುಣಿತ ಸೇರಿದಂತೆ 50ಕ್ಕೂ ಅಧಿಕ ಟ್ಯಾಬ್ಲೋ ಮತ್ತು ವೇಷಗಳು ಶೋಭಾಯಾತ್ರೆಗೆ ಮೆರುಗು ನೀಡಿದ್ದು, ಆರಂಭದಿಂದ ಕೊನೆತನಕವೂ ಅಪಾರ ಸಂಖ್ಯೆಯ ಭಕ್ತರು ಶೋಭಾಯಾತ್ರೆಯನ್ನು ವೀಕ್ಷಿಸಿದರು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ರಾತ್ರಿಯಿಡೀ ಮೆರವಣಿಗೆಗೆ ಭದ್ರತೆ ನೀಡಿದ್ದಾರೆ.