ಅಯೋಧ್ಯಾ : ಭ್ರಷ್ಟಾಚಾರ ಮತ್ತು ದೇಣಿಗೆ ಅವ್ಯವಹಾರದ ಆರೋಪಗಳ ಬೆನ್ನಲ್ಲೇ, ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತನ್ನ ಆರ್ಥಿಕ ವ್ಯವಹಾರಗಳ ಸಂಪೂರ್ಣ ವಿವರಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಟ್ರಸ್ಟ್‌ಗೆ ಬಂದ ಒಟ್ಟು ₹3,264 ಕೋಟಿ ಹಣದಲ್ಲಿ ₹2,370 ಕೋಟಿಯನ್ನು ಮಂದಿರ ನಿರ್ಮಾಣ ಮತ್ತು ಇತರ ಬಂಡವಾಳ ವೆಚ್ಚಗಳಿಗಾಗಿ ಬಳಸಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ. ಉಳಿದ ಮೊತ್ತ ಬ್ಯಾಂಕ್ ಖಾತೆಗಳಲ್ಲೇ ಭದ್ರವಾಗಿದ್ದು, ಭಕ್ತರು ಕಾಣಿಕೆಯಾಗಿ ನೀಡಿದ್ದ ಬೆಳ್ಳಿ ವಸ್ತುಗಳನ್ನು ಕರಗಿಸಿ ಸರಕಾರಿ ಮಿಂಟ್ನಲ್ಲಿ ಬಿಲ್ಲೆಗಳಾಗಿ (Bars) ಪರಿವರ್ತಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ದೇಣಿಗೆ ಎಣಿಕೆಯಲ್ಲಿ ನಡೆದಿರುವ ಅವ್ಯವಹಾರದ ಹಿನ್ನೆಲೆಯಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಟ್ರಸ್ಟ್ ಅದನ್ನು ಅಂಗೀಕರಿಸಿದೆ. ಗೋಪಾಲ್ ನಾಗರಕಟ್ಟೆ ಅವರನ್ನು ವಿಶೇಷ ಆಹ್ವಾನಿತರ ಪಟ್ಟಿಯಿಂದ ಕೈಬಿಡಲಾಗಿದೆ. ಟ್ರಸ್ಟ್‌ನ ಆಡಳಿತವನ್ನು ಮತ್ತಷ್ಟು ಪಾರದರ್ಶಕಗೊಳಿಸಲು ಹೊಸ ಸಿಇಒ ನೇಮಕಕ್ಕಾಗಿ 3 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.
ಭಕ್ತರು ತಾವು ನೀಡಿದ ನಗದು ಅಥವಾ ಉಡುಗೊರೆಗಳು ಹೇಗೆ ಬಳಕೆಯಾಗಿವೆ ಎಂಬುದನ್ನು ಅಯೋಧ್ಯೆಗೆ ಭೇಟಿ ನೀಡಿ, ಅಧಿಕಾರಿಗಳ ಅನುಮತಿ ಪಡೆದು ಖುದ್ದಾಗಿ ದಾಖಲೆಗಳನ್ನು ಪರಿಶೀಲಿಸಲು ನೇರ ಅವಕಾಶ ಕಲ್ಪಿಸಲಾಗಿದೆ. ಇನ್ನು ಭಕ್ತರು ನೀಡಿದ ಬೆಳ್ಳಿ ಆಭರಣ ಹಾಗೂ ವಸ್ತುಗಳನ್ನು ಕರಗಿಸಿ ಬಿಲ್ಲೆಗಳನ್ನಾಗಿ ಮಾಡಲಾಗಿದ್ದು, ಅದರ ತೂಕ, ಶುದ್ಧತೆಯ ಪ್ರಮಾಣಪತ್ರ ಮತ್ತು ಫೋಟೋಗಳ ದಾಖಲೆಗಳು ಲಭ್ಯವಿವೆ ಎಂದು ಟ್ರಸ್ಟ್ ತಿಳಿಸಿದೆ. 2020ರಲ್ಲಿ ಟ್ರಸ್ಟ್ ಸ್ಥಾಪನೆಯಾದಾಗಿನಿಂದ ನಿಧಿ ಸಮರ್ಪಣಾ ಅಭಿಯಾನ ಹಾಗೂ ಕಾರ್ಪಸ್ ದೇಣಿಗೆ ಮೂಲಕ ಒಟ್ಟು ₹3,264 ಕೋಟಿ ಸಂಗ್ರಹವಾಗಿದೆ. ಇದರಲ್ಲಿ ₹2,370 ಕೋಟಿಯನ್ನು ಮಂದಿರ ನಿರ್ಮಾಣ ಮತ್ತು ಬಂಡವಾಳ ವೆಚ್ಚಕ್ಕೆ ಹಾಗೂ ₹391 ಕೋಟಿಯನ್ನು ಮಂದಿರದ ದೈನಂದಿನ ನಿರ್ವಹಣಾ ವೆಚ್ಚಗಳಿಗೆ ಬಳಸಲಾಗಿದೆ. ಉಳಿದ ₹582 ಕೋಟಿ ಭಕ್ತರ ಕಾಣಿಕೆ ಹಣ ಬ್ಯಾಂಕ್ ಖಾತೆಯಲ್ಲಿದೆ.
ದೇಣಿಗೆ ಎಣಿಕೆ ಪ್ರಕ್ರಿಯೆಯಲ್ಲಿ ಪ್ರತಿದಿನ ₹6 ಲಕ್ಷದಿಂದ ₹8 ಲಕ್ಷದವರೆಗೆ ಹಣ ದುರುಪಯೋಗವಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ದಳವನ್ನು (SIT) ರಚಿಸಿತ್ತು. ಈ ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಈಗಾಗಲೇ ಎಂಟು ಜನರನ್ನು ಬಂಧಿಸಲಾಗಿದ್ದು, ನಗದು, ವಿದೇಶಿ ಕರೆನ್ಸಿ ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಜುಲೈ 15ರ ಒಳಗಾಗಿ ಎಸ್‌ಐಟಿ ಅಂತಿಮ ವರದಿ ಸಲ್ಲಿಸಲಿದ್ದು, ಅಲ್ಲಿಯವರೆಗೆ ಯಾವುದೇ ತಪ್ಪು ತೀರ್ಮಾನಗಳಿಗೆ ಬರಬಾರದು ಎಂದು ಟ್ರಸ್ಟ್ ವಿನಂತಿಸಿದೆ. ಕೆಲವರು ಮಂದಿರದ ಹೆಸರಿಗೆ ಮಸಿ ಬಳಿಯಲು ಈ ವಿವಾದವನ್ನು ಬಳಸಿಕೊಳ್ಳುತ್ತಿದ್ದಾರೆ, ಆದರೆ ಮಂದಿರಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ ಎಂದು ಟ್ರಸ್ಟ್ ಸ್ಪಷ್ಟಪಡಿಸಿದೆ.