image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕನ್ನಡ ಪತ್ರಿಕೋದ್ಯಮವೆಂಬ ಅಶ್ವಮೇಧದ ಹರಿಕಾರ ರೆವರೆಂಡ್ ಡಾ. ಹರ್ಮನ್ ಮೋಗ್ಲಿಂಗ್

ಕನ್ನಡ ಪತ್ರಿಕೋದ್ಯಮವೆಂಬ ಅಶ್ವಮೇಧದ ಹರಿಕಾರ ರೆವರೆಂಡ್ ಡಾ. ಹರ್ಮನ್ ಮೋಗ್ಲಿಂಗ್

ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಇತಿಹಾಸವನ್ನು ಅವಲೋಕಿಸುವಾಗ, ಒಬ್ಬ ವಿದೇಶಿ ಮಿಷನರಿ ಕನ್ನಡಿಗರ ಹೃದಯದಲ್ಲಿ ಅಚ್ಚಳಿಯದ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದರೆ ಅದು ರೆವರೆಂಡ್ ಡಾ. ಹರ್ಮನ್ ಮೋಗ್ಲಿಂಗ್ ಅವರು. 19ನೇ ಶತಮಾನದ ಕರ್ನಾಟಕದಲ್ಲಿ ಕ್ರೈಸ್ತ ಮಿಷನರಿಯಾಗಿ ಬಂದ ಇವರು, ಕೇವಲ ಧರ್ಮ ಪ್ರಚಾರಕ್ಕೆ ಸೀಮಿತವಾಗದೆ, ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯದ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು.

ಇವರ ಅತ್ಯಂತ ದೊಡ್ಡ ಸಾಧನೆ ಎಂದರೆ 1843ರ ಜುಲೈ 1ರಂದು ಮಂಗಳೂರಿನಿಂದ ಹೊರತಂದ 'ಮಂಗಳೂರು ಸಮಾಚಾರ' ಎಂಬ ಪತ್ರಿಕೆ, ಇದು ಕನ್ನಡದ ಮೊಟ್ಟಮೊದಲ ಪತ್ರಿಕೆಯಾಗಿದೆ. ಅಂದು ಅಜ್ಞಾನದ ಕತ್ತಲಲ್ಲಿದ್ದ ಜನಸಾಮಾನ್ಯರಿಗೆ ಜಗತ್ತಿನ ವಿದ್ಯಮಾನಗಳನ್ನು ಮತ್ತು ಜ್ಞಾನವನ್ನು ತಲುಪಿಸುವ ಮಹಾನ್ ಉದ್ದೇಶವನ್ನು ಈ ಪತ್ರಿಕೆ ಹೊಂದಿತ್ತು. ಇಂದು ನಾವು ಪ್ರತಿವರ್ಷ ಜುಲೈ 1ರಂದು 'ಕನ್ನಡ ಪತ್ರಿಕಾ ದಿನ'ವನ್ನು ಆಚರಿಸುತ್ತೇವೆಯೆಂದರೆ, ಅದಕ್ಕೆ ಅಂದು ಮೋಗ್ಲಿಂಗ್ ಹಾಕಿಕೊಟ್ಟ ಭದ್ರ ಬುನಾದಿಯೇ ಕಾರಣ. ಮೋಗ್ಲಿಂಗ್ ಅವರು ಕೇವಲ ಪತ್ರಿಕೋದ್ಯಮಕ್ಕೆ ಮಾತ್ರವಲ್ಲದೆ, ಕನ್ನಡ ಸಾಹಿತ್ಯ ಲೋಕಕ್ಕೂ ಅಸಾಧಾರಣ ಸೇವೆ ಸಲ್ಲಿಸಿದ್ದಾರೆ. ಜೆ.ಎಲ್. ರೈಸ್ ಅವರಿಗಿಂತ ಮೊದಲೇ 'ಬಿಬ್ಲಿಯೋಥಿಕ ಕರ್ಣಾಟಿಕ' ಮಾಲೆಯನ್ನು ಆರಂಭಿಸಿ, ಲಕ್ಮೀಶ ಕವಿಯ ಜೈಮಿನಿ ಭಾರತ, ತೊರವೆ ರಾಮಾಯಣ, ಮತ್ತು ಬಸವ ಪುರಾಣಗಳಂತಹ ಹಳಗನ್ನಡ ಕೃತಿಗಳನ್ನು ಒಟ್ಟುಗೂಡಿಸಿ ಪ್ರಕಟಿಸಿದರು.

ಕನ್ನಡದ ಜಾನಪದ ಸಂಸ್ಕೃತಿಯನ್ನು ಆಳವಾಗಿ ಅಧ್ಯಯನ ಮಾಡಿದ ಅವರು, ಸುಮಾರು 3,500ಕ್ಕೂ ಹೆಚ್ಚು ಗಾದೆಗಳನ್ನು ಸಂಗ್ರಹಿಸಿ 'ಲೋಕೋಕ್ತಿ ನಿದಾನ' ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಇವರ 'ಜಾತಿ ವಿಚಾರಣೆ' ಮತ್ತು 'ದೇವ ವಿಚಾರಣೆ' ಎಂಬ ಬರಹಗಳು ಹೊಸಗನ್ನಡದ ಆದ್ಯ ಪ್ರಬಂಧಗಳೆಂದು ಗುರುತಿಸಲ್ಪಟ್ಟಿವೆ. ಕನ್ನಡದ ದಾಸರ ಪದಗಳನ್ನು ಜರ್ಮನ್ ಭಾಷೆಗೆ ಅನುವಾದಿಸುವ ಮೂಲಕ ಕನ್ನಡದ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದರು. ಅಲ್ಲದೆ, ಬಾಸೆಲ್ ಮಿಷನ್ ಶಾಲೆಯನ್ನು ಸ್ಥಾಪಿಸುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದರು ಹಾಗೂ ಕೊಡಗಿನ ಇತಿಹಾಸದ ಕುರಿತು 'ರಾಜೇಂದ್ರನಾಮೆ' ಮತ್ತು 'ಕೂರ್ಗ್ ಮೆಮೊರೀಸ್' ಎಂಬ ಕೃತಿಗಳನ್ನು ಪ್ರಕಟಿಸಿ, ಆ ಭಾಗದ ಇತಿಹಾಸವನ್ನು ದಾಖಲಿಸಿದರು.

ಹರ್ಮನ್ ಮೋಗ್ಲಿಂಗ್ ಅವರು ಜರ್ಮನಿಯವರಾಗಿದ್ದರೂ, ಅವರ ಮನಸ್ಸು ಸಂಪೂರ್ಣವಾಗಿ ಕನ್ನಡ ಮತ್ತು ಕರ್ನಾಟಕದ ಮಣ್ಣಿನೊಂದಿಗೆ ಬೆರೆತಿತ್ತು. ಅವರು ಕೇವಲ ಧರ್ಮಬೋಧಕರಾಗಿರಲಿಲ್ಲ, ಬದಲಾಗಿ ಒಬ್ಬ ವಿದ್ವಾಂಸರಾಗಿ, ಪತ್ರಿಕೋದ್ಯಮಿಯಾಗಿ ಮತ್ತು ಸಾಹಿತ್ಯ ಪ್ರೇಮಿಯಾಗಿ ಕನ್ನಡದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಮಹತ್ತರ ಪಾತ್ರ ವಹಿಸಿದರು. ಇಂದಿನ ಪತ್ರಿಕೋದ್ಯಮದ ವಿದ್ಯಾರ್ಥಿಗಳು ಮತ್ತು ಸಾಹಿತ್ಯಾಸಕ್ತರು ಮೋಗ್ಲಿಂಗ್ ಅವರ ಈ ಬದ್ಧತೆಯನ್ನು ಸ್ಮರಿಸುವುದು ಅತ್ಯಗತ್ಯ. ಜುಲೈ 1ರಂದು ನಾವು ಆಚರಿಸುವ 'ಕನ್ನಡ ಪತ್ರಿಕಾ ದಿನ'ವು ಕೇವಲ ಒಂದು ದಿನದ ಆಚರಣೆಯಲ್ಲ, ಅದು ಹರ್ಮನ್ ಮೋಗ್ಲಿಂಗ್ ಅವರು ಕನ್ನಡಕ್ಕೆ ನೀಡಿದ ಭವ್ಯ ಪರಂಪರೆಯ ಸಂಕೇತವಾಗಿದೆ.

✍ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ