image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕರಾಚಿ ದಾಳಿ : ಪಾಕಿಸ್ತಾನದ ಆಧಾರರಹಿತ ಆರೋಪವನ್ನು ತಳ್ಳಿಹಾಕಿದ ಭಾರತ

ಕರಾಚಿ ದಾಳಿ : ಪಾಕಿಸ್ತಾನದ ಆಧಾರರಹಿತ ಆರೋಪವನ್ನು ತಳ್ಳಿಹಾಕಿದ ಭಾರತ

ನವದೆಹಲಿ : ಇತ್ತೀಚೆಗೆ ಕರಾಚಿಯ ಸಿಂಧ್ ರೇಂಜರ್ಸ್ ಕಾಂಪೌಂಡ್ ಮೇಲೆ ನಡೆದ ಉಗ್ರರ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಪಾಕಿಸ್ತಾನದ ಆರೋಪವನ್ನು ಕೇಂದ್ರ ಸರ್ಕಾರ ತೀವ್ರವಾಗಿ ಖಂಡಿಸಿದೆ. ಈ ಆರೋಪಗಳನ್ನು ಸಂಪೂರ್ಣ ಆಧಾರರಹಿತ ಎಂದು ಕರೆದಿರುವ ಭಾರತ, ಇತರರತ್ತ ಬೊಟ್ಟು ಮಾಡುವ ಬದಲು ತನ್ನದೇ ದೇಶದಲ್ಲಿರುವ ಭಯೋತ್ಪಾದನಾ ನೆಲೆಗಳನ್ನು ಮಟ್ಟಹಾಕುವತ್ತ ಪಾಕಿಸ್ತಾನ ಗಮನಹರಿಸಬೇಕು ಎಂದು ತಿರುಗೇಟು ನೀಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, "ಕರಾಚಿ ದಾಳಿಗೆ ಸಂಬಂಧಿಸಿದಂತೆ ಭಾರತದ ವಿರುದ್ಧ ಪಾಕಿಸ್ತಾನದ ಮಾಧ್ಯಮಗಳಲ್ಲಿ ಬಂದಿರುವ ಆರೋಪಗಳನ್ನು ನಾವು ಸಾರಾಸಗಟಾಗಿ ತಿರಸ್ಕರಿಸುತ್ತೇವೆ. ಪಾಕಿಸ್ತಾನ ಇತರರತ್ತ ಬೆರಳು ಮಾಡುವುದನ್ನು ಬಿಟ್ಟು, ತನ್ನ ಗಡಿಯೊಳಗೆ ಕಾರ್ಯಾಚರಿಸುತ್ತಿರುವ ಭಯೋತ್ಪಾದನಾ ಜಾಲಗಳ ವಿರುದ್ಧ ವಿಶ್ವಾಸಾರ್ಹ ಕ್ರಮ ಕೈಗೊಳ್ಳಬೇಕು ಮತ್ತು ಭಯೋತ್ಪಾದನೆಯನ್ನು ತನ್ನ ಆಡಳಿತದ ಅಸ್ತ್ರವಾಗಿ ಬಳಸಿಕೊಳ್ಳುವ ಚಟದಿಂದ ಮುಕ್ತವಾಗಬೇಕು" ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.

ಶನಿವಾರ ಸಂಜೆ ಕರಾಚಿಯ ಗುಲಿಸ್ತಾನ್-ಎ-ಜೋಹರ್ ಪ್ರದೇಶದಲ್ಲಿರುವ ಸಿಂಧ್ ರೇಂಜರ್ಸ್‌ನ ಭಿಟ್ಟೈ ವಿಂಗ್ ಪ್ರಧಾನ ಕಚೇರಿಯ ಮೇಲೆ ಭಾರಿ ಶಸ್ತ್ರಸಜ್ಜಿತ ಉಗ್ರರು ದಾಳಿ ನಡೆಸಿದ್ದರು. ಮುಖ್ಯ ದ್ವಾರಕ್ಕೆ ಸ್ಪೋಟಕ ತುಂಬಿದ ವಾಹನವನ್ನು ಗುದ್ದಿಸಿ ಒಳನುಗ್ಗಿದ ಉಗ್ರರು, ಗ್ರೆನೇಡ್‌ಗಳನ್ನು ಎಸೆದು ಸರಣಿ ಸ್ಫೋಟಗಳನ್ನು ಉಂಟುಮಾಡಿದ್ದರು. ಸುಮಾರು 90 ನಿಮಿಷಗಳ ಕಾಲ ನಡೆದ ಈ ಭೀಕರ ಗುಂಡಿನ ಚಕಮಕಿಯಲ್ಲಿ ನಾಲ್ವರು ಅರೆಸೇನಾ ಪಡೆಯ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ರೇಂಜರ್ಸ್ ಜೊತೆಗೆ ವಿಶೇಷ ಭದ್ರತಾ ಘಟಕ (SSU) ಮತ್ತು ಭಯೋತ್ಪಾದನಾ ನಿಗ್ರಹ ಪಡೆಯ ಕಮಾಂಡೋಗಳು ಜಂಟಿ ಕಾರ್ಯಾಚರಣೆ ನಡೆಸಿ ಆರು ಮಂದಿ ಉಗ್ರರನ್ನು ಹತ್ಯೆಗೈದಿದ್ದು, ಗಾಯಗೊಂಡಿದ್ದ ಮತ್ತೊಬ್ಬ ಉಗ್ರನನ್ನು ಜೀವಂತವಾಗಿ ಸೆರೆಹಿಡಿದಿದ್ದಾರೆ.

ಈ ಭೀಕರ ದಾಳಿಯ ಹೊಣೆಯನ್ನು ನಿಷೇಧಿತ 'ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್' (TTP) ಸಂಘಟನೆಗೆ ಸಂಯೋಜಿತವಾಗಿರುವ 'ಜಮಾತ್-ಉಲ್-ಅಹ್ರಾರ್' ಎಂಬ ಉಗ್ರಗಾಮಿ ಗುಂಪು ಹೊತ್ತುಕೊಂಡಿದೆ. ಅಕ್ಟೋಬರ್ 2024ರಲ್ಲಿ ಇಬ್ಬರು ಚೀನಿ ಎಂಜಿನಿಯರ್‌ಗಳನ್ನು ಬಲಿಪಡೆದ ಕರಾಚಿ ವಿಮಾನ ನಿಲ್ದಾಣದ ಬಳಿಯ ಆತ್ಮಾಹುತಿ ದಾಳಿ ಹಾಗೂ 2023ರ ಕರಾಚಿ ಪೊಲೀಸ್ ಕಚೇರಿ ಮೇಲಿನ ದಾಳಿಯ ಬಳಿಕ ಟಿಟಿಪಿ ಬೆಂಬಲಿತ ಉಗ್ರರು ಕರಾಚಿಯಲ್ಲಿ ನಡೆಸಿದ ಅತಿದೊಡ್ಡ ಭಯೋತ್ಪಾದಕ ಕೃತ್ಯ ಇದಾಗಿದೆ. ದಾಳಿಯ ಬೆನ್ನಲ್ಲೇ ಇಡೀ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರೆದಿದ್ದು, ಸಿಂಧ್ ಮುಖ್ಯಮಂತ್ರಿ ಮುರಾದ್ ಅಲಿ ಶಾ ಅವರು ಘಟನೆಯ ಬಗ್ಗೆ ವಿವರವಾದ ತನಿಖಾ ವರದಿ ನೀಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Category
ಕರಾವಳಿ ತರಂಗಿಣಿ