ನವದೆಹಲಿ : ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಭಾರತದ ನಿರ್ಧಾರವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ನವದೆಹಲಿಯ ಇಂಧನ ಆಯ್ಕೆಗಳು ಕೇವಲ ರಾಷ್ಟ್ರೀಯ ಹಿತಾಸಕ್ತಿ, ಕೈಗೆಟುಕುವ ದರ ಮತ್ತು ಪೂರೈಕೆಯ ಸುಸ್ಥಿರತೆಯನ್ನು ಆಧರಿಸಿವೆಯೇ ಹೊರತು ಯಾವುದೇ ಭೌಗೋಳಿಕ ರಾಜಕೀಯ ಧ್ರುವೀಕರಣಕ್ಕೆ ಸಂಬಂಧಿಸಿದ್ದಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಫಿನ್‌ಲ್ಯಾಂಡ್‌ನಲ್ಲಿ ನಡೆದ ಕುಲ್ತಾರಾಂತದ ಸಂವಾದದಲ್ಲಿ ಮಾತನಾಡಿದ ಜೈಶಂಕರ್ ಅವರು, ನಾವು ತೈಲವನ್ನು ಅದರ ಬೆಲೆ ಮತ್ತು ಲಭ್ಯತೆಯ ಆಧಾರದ ಮೇಲೆ ಖರೀದಿಸುತ್ತೇವೆ. ಆ ಸಮಯದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದ್ದ ಹೆಚ್ಚಿನ ತೈಲ ರಷ್ಯಾದ್ದಾಗಿತ್ತು. ಏಕೆಂದರೆ, ನಮ್ಮ ಸಾಂಪ್ರದಾಯಿಕ ತೈಲ ಪೂರೈಕೆದಾರರಾಗಿದ್ದ ಮಧ್ಯಪ್ರಾಚ್ಯದ ರಾಷ್ಟ್ರಗಳಿಂದ ಯುರೋಪಿಯನ್ನರು ತೈಲ ಖರೀದಿಸಲು ಆರಂಭಿಸಿದ್ದರು. ಹೀಗಾಗಿ ಅನಿವಾರ್ಯ ಪರಿಸ್ಥಿತಿಗಳು ನಮ್ಮನ್ನು ಈ ದಿಕ್ಕಿನತ್ತ ಕೊಂಡೊಯ್ದವು ಎಂದು ವಿವರಿಸಿದರು.
ಇದೇ ವೇಳೆ ಪಾಶ್ಚಿಮಾತ್ಯ ದೇಶಗಳ ಇಬ್ಬಂದಿ ನಿಲುವನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಯುರೋಪ್ ದೇಶಗಳು ಇತರರಿಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತವೆ ಮತ್ತು ಆ ಶಸ್ತ್ರಾಸ್ತ್ರಗಳನ್ನು ಭಾರತದ ಮೇಲಿನ ದಾಳಿಗೆ ಬಳಸಲಾಗುತ್ತದೆ. ಇದು ಕೇವಲ ಇವತ್ತಿನ ಕಥೆಯಲ್ಲ, ಹಲವು ವರ್ಷಗಳಿಂದಲೂ ನಡೆಯುತ್ತಾ ಬಂದಿದೆ. ನಾವು ಭಾರತೀಯರು ಯುರೋಪ್‌ನ ಭದ್ರತೆಗೆ ಎಂದಿಗೂ ಧಕ್ಕೆ ತಂದಿಲ್ಲ. ನನ್ನ ಈ ವಾದ ಅತ್ಯಂತ ತಾರ್ಕಿಕವಾಗಿದೆ ಎಂದು ಭಾವಿಸುತ್ತೇನೆ ಎಂದರು.
ಇನ್ನು, 2022ರ ಬೆಳವಣಿಗೆಗಳನ್ನು ಸ್ಮರಿಸಿದ ವಿದೇಶಾಂಗ ಸಚಿವರು, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣಗಳನ್ನು ತಪ್ಪಿಸಲು ಮತ್ತು ಹಣದುಬ್ಬರವನ್ನು ನಿಯಂತ್ರಿಸಲು ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವುದನ್ನು ಮುಂದುವರಿಸುವಂತೆ ಅಮೆರಿಕವೇ ಭಾರತವನ್ನು ಪ್ರೋತ್ಸಾಹಿಸಿತ್ತು ಎಂಬ ಸತ್ಯವನ್ನು ಬಹಿರಂಗಪಡಿಸಿದರು. ಆ ಸಮಯದಲ್ಲಿ ಜಾಗತಿಕ ಮಾರುಕಟ್ಟೆಯನ್ನು ಸ್ಥಿರಗೊಳಿಸಲು ರಷ್ಯಾ ತೈಲವನ್ನು ಖರೀದಿಸುವಂತೆ ಅಮೆರಿಕವೇ ಭಾರತಕ್ಕೆ ನಿರ್ದಿಷ್ಟವಾಗಿ ಹೇಳಿತ್ತು. ಆದರೆ ಕಳೆದ ವರ್ಷ ರಷ್ಯಾ ತೈಲ ಖರೀದಿಸಿದ್ದಕ್ಕಾಗಿ ನಮ್ಮ ಮೇಲೆ ಸುಂಕ ಹೇರಿದ ಅದೇ ಅಮೆರಿಕ, ಈಗ ಮತ್ತೆ ನಿರ್ಬಂಧಗಳನ್ನು ಸಡಿಲಗೊಳಿಸಿದೆ. ಹಾಗಾಗಿ, ಇಲ್ಲಿ ಯಾವುದೋ ದೊಡ್ಡ ತತ್ವ ಅಡಗಿದೆ ಎಂಬಂತೆ ನಾಟಕವಾಡುವುದನ್ನು ನಿಲ್ಲಿಸಲಿ ಎಂದು ಜೈಶಂಕರ್ ಕಿಡಿಕಾರಿದ್ದಾರೆ. ಭೌಗೋಳಿಕ ರಾಜಕೀಯದ ಒತ್ತಡಗಳಿಗೆ ಮಣಿಯದೆ ಭಾರತವು ತನ್ನ ಇಂಧನ ಭದ್ರತೆ ಮತ್ತು ದೇಶದ ಜನರ ಹಿತಾಸಕ್ತಿಗೇ ಮೊದಲ ಆದ್ಯತೆ ನೀಡಲಿದೆ ಎಂಬುದನ್ನು ವಿದೇಶಾಂಗ ಸಚಿವರು ಮತ್ತೊಮ್ಮೆ ಜಾಗತಿಕ ವೇದಿಕೆಯಲ್ಲಿ ಖಡಾಖಡಿಯಾಗಿ ಸಾರಿದ್ದಾರೆ.