ನವದೆಹಲಿ: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗದ ಸಾವಿರಾರು ಅಡಿಕೆ ಬೆಳೆಗಾರರನ್ನು ಕಂಗೆಡಿಸಿರುವ ‘ಹಳದಿ ಎಲೆ ರೋಗ’ ಮತ್ತು ‘ಎಲೆ ಚುಕ್ಕಿ ರೋಗ’ ಸಮಸ್ಯೆಗೆ ತುರ್ತು ಪರಿಹಾರ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ರಾಜ್ಯದ ಪ್ರಮುಖ ಅಡಿಕೆ ಬೆಳೆ ಪ್ರದೇಶಗಳಲ್ಲಿ ಈ ರೋಗಗಳ ವೇಗವಾದ ಹರಡುವಿಕೆಯಿಂದ ರೈತರು ಗಂಭೀರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಸಂಸದರು ತಮ್ಮ ಮನವಿಯಲ್ಲಿ ವಿವರಿಸಿದ್ದಾರೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲೇ ಸುಮಾರು 16,000 ಹೆಕ್ಟೇರ್ ಪ್ರದೇಶದಲ್ಲಿ ಹಳದಿ ಎಲೆ ರೋಗ ವ್ಯಾಪಿಸಿದ್ದು, ಲಕ್ಷಾಂತರ ರೈತರ ಬದುಕಿಗೆ ಧಕ್ಕೆಯಾಗಿದೆ.
ಈ ರೋಗಕ್ಕೆ ಕಾರಣವಾಗಿರುವ ‘ಫೈಟೋಪ್ಲಾಸ್ಮಾ’ ಸೋಂಕಿಗೆ ಇನ್ನೂ ಪರಿಣಾಮಕಾರಿ ನಿರ್ಮೂಲನಾ ವಿಧಾನ ಲಭ್ಯವಿಲ್ಲ. ಐಸಿಎಆರ್‌ನ ಸೆಂಟ್ರಲ್ ಪ್ಲಾಂಟೇಷನ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ (CPCRI) ಸಂಸ್ಥೆ ರೂಪಿಸಿರುವ ನಿರ್ವಹಣಾ ವಿಧಾನಗಳೇ ರೈತರಿಗೆ ಆಶಾಕಿರಣವಾಗಿದೆ. ವಿಟ್ಲದಲ್ಲಿ ಅತ್ಯಾಧುನಿಕ ರೋಗನಿರ್ಣಯ ಪ್ರಯೋಗಾಲಯ ಸ್ಥಾಪನೆಯಾಗಿದ್ದು, ರೋಗ ತಾಳುವ ಗಿಡಗಳ ಅಂಗಾಂಶ ಕೃಷಿ ತಂತ್ರಜ್ಞಾನದ ಮೂಲಕ ಮರುಸೃಷ್ಟಿಯಲ್ಲೂ ಯಶಸ್ಸು ಕಂಡಿದೆ.
ಈ ಹಿನ್ನೆಲೆ ರೈತರು ಸುಧಾರಿತ ತಂತ್ರಜ್ಞಾನ, ಹೈಟೆಕ್ ನೀರಾವರಿ ವ್ಯವಸ್ಥೆ ಮತ್ತು ಸಮತೋಲಿತ ಪೋಷಕಾಂಶ ನಿರ್ವಹಣೆಯನ್ನು ಅಳವಡಿಸಿಕೊಳ್ಳಲು ದೊಡ್ಡ ಪ್ರಮಾಣದ ಆರ್ಥಿಕ ನೆರವು ಅಗತ್ಯವಿದೆ. ಆದ್ದರಿಂದ ಬಾಧಿತರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸಂಸದರು ಆಗ್ರಹಿಸಿದ್ದಾರೆ.
ಇದರ ಜೊತೆಗೆ ‘ಎಲೆ ಚುಕ್ಕಿ ರೋಗ’ ನಿಯಂತ್ರಣದ ವಿಷಯವನ್ನೂ ಸಂಸದರು ಪ್ರಸ್ತಾಪಿಸಿದ್ದಾರೆ. 2023ರಲ್ಲಿ ಕೇಂದ್ರ ಸರ್ಕಾರವು ಸಿಪಿಸಿಆರ್‌ಐ ತಜ್ಞರ ವರದಿ ಆಧರಿಸಿ ಮಾರ್ಗಸೂಚಿ ರೂಪಿಸಿ ₹225 ಕೋಟಿ ಅನುದಾನ ಮಂಜೂರು ಮಾಡಿತ್ತು. ಆದರೆ ಈ ಅನುದಾನವನ್ನು ‘ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಆಫ್ ಹಾರ್ಟಿಕಲ್ಚರ್’ (MIDH) ನಿಯಮಗಳಿಗೆ ಬಿಗಿಯಾಗಿ ಕೊಂಡಿಹಾಕಿದ್ದರಿಂದ, ಪ್ರತಿ ಹೆಕ್ಟೇರ್‌ಗೆ ₹1,500 ಮಿತಿ ಕಾರಣದಿಂದ ನೈಜ ವೆಚ್ಚ ಭರಿಸಲು ಸಾಧ್ಯವಾಗಲಿಲ್ಲ. ಇದರ ಪರಿಣಾಮ ಅನುದಾನ ಬಳಕೆಯಾಗದೆ ಸರ್ಕಾರಕ್ಕೆ ವಾಪಸ್ ಹೋಗಿದೆ.
ಈ ಪರಿಸ್ಥಿತಿಯಲ್ಲಿ ಎಲೆ ಚುಕ್ಕಿ ರೋಗಕ್ಕೆ ಮಾತ್ರ ಅನ್ವಯಿಸುವಂತೆ MIDH ಮಿತಿಗೆ ವಿನಾಯಿತಿ ನೀಡಬೇಕು ಹಾಗೂ ಹಿಂದಿನ ಅನುದಾನವನ್ನು ಮರುಬಿಡುಗಡೆ ಮಾಡಬೇಕು ಎಂದು ಸಂಸದರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸಿಪಿಸಿಆರ್‌ಐ ಶಿಫಾರಸು ಮಾಡಿದ ನೈಜ ವೆಚ್ಚಕ್ಕೆ ಅನುಗುಣವಾಗಿ ನೆರವು ನೀಡಿದರೆ ಮಾತ್ರ ರೋಗ ನಿಯಂತ್ರಣ ಸಾಧ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಕರಾವಳಿ ಕರ್ನಾಟಕದ ಆರ್ಥಿಕತೆಯಲ್ಲಿ ಅಡಿಕೆ ಬೆಳೆ ಮಹತ್ವವನ್ನು ಮನಗಂಡು, ಕೇಂದ್ರ ಕೃಷಿ ಸಚಿವರು ಮಂಗಳೂರಿಗೆ ಭೇಟಿ ನೀಡಿ ನೆಲಮಟ್ಟದ ಪರಿಸ್ಥಿತಿಯನ್ನು ಪರಿಶೀಲಿಸಬೇಕು ಎಂದು ಸಂಸದರು ಆಹ್ವಾನಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳ ಸಮನ್ವಯದೊಂದಿಗೆ ವಿಜ್ಞಾನಿಗಳು ಹಾಗೂ ರೈತರೊಂದಿಗೆ ಸಂವಾದ ನಡೆಸುವುದರಿಂದ ಸಮಸ್ಯೆಗೆ ಸಮಗ್ರ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.