ಬೆಂಗಳೂರು: ರಾಜ್ಯದಲ್ಲಿ 0ರಿಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ನೀಡುವ ಉದ್ದೇಶದಿಂದ 2026ರ ಜೂನ್ 28ರ ಭಾನುವಾರದಂದು ‘ರಾಷ್ಟ್ರೀಯ ಲಸಿಕಾ ದಿನ (ಪಲ್ಸ್ ಪೋಲಿಯೋ)’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಿತ್ವಿಕ್ ಪಾಂಡೆ ತಿಳಿಸಿದ್ದಾರೆ.
ಭಾರತವು ಕಳೆದ 14 ವರ್ಷಗಳಿಂದ ಪೋಲಿಯೋ ಮುಕ್ತ ರಾಷ್ಟ್ರವಾಗಿದ್ದರೂ, ಜಗತ್ತಿನ ಕೆಲವು ಭಾಗಗಳಲ್ಲಿ ಹಾಗೂ ಭಾರತದ ನೆರೆ ರಾಷ್ಟ್ರಗಳಲ್ಲಿ ವೈಲ್ಡ್ ಪೋಲಿಯೋ ವೈರಸ್ ಹರಡುವಿಕೆ ಇನ್ನೂ ಮುಂದುವರಿದಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ತಜ್ಞ ಸಲಹಾ ಸಮಿತಿಯ ಶಿಫಾರಸ್ಸಿನ ಮೇರೆಗೆ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ.
ಜೂನ್ 28ರಂದು ಮೊದಲ ದಿನ ರಾಜ್ಯದಾದ್ಯಂತ ಸ್ಥಾಪಿಸಲಾದ ಪೋಲಿಯೋ ಬೂತ್‌ಗಳಲ್ಲಿ ಮಕ್ಕಳಿಗೆ ಲಸಿಕೆ ನೀಡಲಾಗುವುದು. ನಂತರದ 2ರಿಂದ 3 ದಿನಗಳವರೆಗೆ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಲಸಿಕೆ ಪಡೆಯದೆ ಉಳಿದ ಮಕ್ಕಳಿಗೆ ಲಸಿಕೆ ಹಾಕಲಿದ್ದಾರೆ.
ವಲಸಿಗ ಸಮುದಾಯದ ಮಕ್ಕಳು, ಹೆಚ್ಚಿನ ಅಪಾಯದಂಚಿನಲ್ಲಿರುವ ಪ್ರದೇಶಗಳು ಹಾಗೂ ನಗರ ಪ್ರದೇಶದ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.
ಈ ಬೃಹತ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳ ಸಹಕಾರ ಅಗತ್ಯವಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳನ್ನು ಬಲಪಡಿಸಲಾಗುತ್ತಿದೆ. ಮಾಧ್ಯಮಗಳು, ಆಕಾಶವಾಣಿ ಮತ್ತು ಎಫ್.ಎಂ ವಾಹಿನಿಗಳ ಮೂಲಕ ಜಿಂಗಲ್ಸ್ ಪ್ರಸಾರ ಮಾಡಿ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಸೂಚಿಸಲಾಗಿದೆ.
ಸಾರ್ವಜನಿಕರು ಹಾಗೂ ಪೋಷಕರು ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಹನಿಗಳನ್ನು ಹಾಕಿಸಿ ಈ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮನವಿ ಮಾಡಿದೆ.