image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭೂಮಿಗೆ ಇಂದು ಅತ್ಯಂತ ಪ್ರಬಲ ಸೌರ ಬಿರುಗಾಳಿ ಅಪ್ಪಳಿಸುವ ಸಾಧ್ಯತೆ: ವಿಶ್ವದಾದ್ಯಂತ ಹೈ ಅಲರ್ಟ್

ಭೂಮಿಗೆ ಇಂದು ಅತ್ಯಂತ ಪ್ರಬಲ ಸೌರ ಬಿರುಗಾಳಿ ಅಪ್ಪಳಿಸುವ ಸಾಧ್ಯತೆ: ವಿಶ್ವದಾದ್ಯಂತ ಹೈ ಅಲರ್ಟ್

ವಾಷಿಂಗ್ಟನ್ : ಕಳೆದ ಒಂದು ವಾರದಿಂದ ಸೂರ್ಯನಲ್ಲಿ ಉಂಟಾಗುತ್ತಿರುವ ಸರಣಿ ಸ್ಫೋಟಗಳು ಮತ್ತು ಪ್ರಕ್ಷುಬ್ಧ ವಾತಾವರಣದ ಬೆನ್ನಲ್ಲೇ, ಇಂದು ಭೂಮಿಗೆ ಅತ್ಯಂತ ಪ್ರಬಲವಾದ ಸೌರ ಬಿರುಗಾಳಿ ಅಪ್ಪಳಿಸಲಿದೆ ಎಂದು ಬಾಹ್ಯಾಕಾಶ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ 'ನಾಸಾ' (NASA) ಸೇರಿದಂತೆ ವಿಶ್ವದ ಪ್ರಮುಖ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಹೈ ಅಲರ್ಟ್ ಆಗಿವೆ. ಕಳೆದ ಕೆಲವು ದಿನಗಳಿಂದ ಸೂರ್ಯನ ಮೇಲ್ಮೈನಲ್ಲಿ ಸರಣಿ ಸ್ಫೋಟಗಳು ಸಂಭವಿಸುತ್ತಿದ್ದರೂ, ಅವುಗಳಲ್ಲಿ ಹೆಚ್ಚಿನವು ಭೂಮಿಗೆ ತಾಗದೆ ಹಾದುಹೋಗಿದ್ದವು. ಆದರೆ, ಜೂನ್ 6 ರಂದು ಸೂರ್ಯನ 'ಆಕ್ಟಿವ್ ರೀಜನ್ 4461' (Active Region 4461) ಎಂಬ ಭಾಗದಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ವಿಜ್ಞಾನಿಗಳು ಇದನ್ನು ಮಧ್ಯಮ ಸರಣಿಯ 'M1.8' ಮಾದರಿಯ ಸೋಲಾರ್ ಫ್ಲೇರ್ (Solar Flare) ಎಂದು ವರ್ಗೀಕರಿಸಿದ್ದಾರೆ. ಸೂರ್ಯನ ಮೇಲ್ಮೈನಲ್ಲಿ ಕಾಂತೀಯ ಶಕ್ತಿಯು ದಿಢೀರನೆ ಸ್ಫೋಟಗೊಂಡು, ಬಿಡುಗಡೆಯಾಗುವ ತೀವ್ರ ಗಾಮಾ ಮತ್ತು ಎಕ್ಸ್-ರೇ ವಿಕಿರಣಗಳ ವಿದ್ಯಮಾನವೇ ಈ ಸೌರ ಜ್ವಾಲೆಯಾಗಿದೆ.

ಈ ಸ್ಫೋಟದಿಂದ ಹೊರಹೊಮ್ಮಿದ ದಟ್ಟವಾದ ಮತ್ತು ಅತ್ಯಂತ ಶಕ್ತಿಶಾಲಿ ಕಾಂತೀಯ ಅನಿಲದ ಮೋಡವು (Core Filament) ಸದ್ಯ ಬಾಹ್ಯಾಕಾಶದಲ್ಲಿ ಪ್ರತಿ ಸೆಕೆಂಡಿಗೆ ಬರೋಬ್ಬರಿ 1,400 ಕಿಲೋಮೀಟರ್ ವೇಗದಲ್ಲಿ ಭೂಮಿಯ ಕಡೆಗೆ ಧಾವಿಸುತ್ತಿದೆ. ಇದು ಇಂದು ಭೂಮಿಯ ಕಾಂತಕ್ಷೇತ್ರವನ್ನು ನೇರವಾಗಿ ತಾಕುವ ಸಾಧ್ಯತೆಯಿದೆ. ಅಮೆರಿಕದ ಬಾಹ್ಯಾಕಾಶ ಹವಾಮಾನ ಮುನ್ಸೂಚನಾ ಕೇಂದ್ರ (SWPC) ಈ ಸೌರ ಬಿರುಗಾಳಿಯನ್ನು 'G3' (Strong) ಅಂದರೆ ಅತ್ಯಂತ ಪ್ರಬಲವಾದ ಜಿಯೋಮ್ಯಾಗ್ನೆಟಿಕ್ ಸ್ಟಾರ್ಮ್ ಎಂದು ಗುರುತಿಸಿದೆ. ಇದರಿಂದಾಗಿ ಉಪಗ್ರಹ ಆಧಾರಿತ ಸಂಪರ್ಕ ವ್ಯವಸ್ಥೆ (GPS), ರೇಡಿಯೋ ಸಿಗ್ನಲ್‌ಗಳು ಮತ್ತು ಮೊಬೈಲ್ ನೆಟ್‌ವರ್ಕ್‌ಗಳಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಬಹುದು. ಜೊತೆಗೆ ವಿದ್ಯುತ್ ಗ್ರಿಡ್‌ಗಳಲ್ಲಿ ಹಠಾತ್ ವೋಲ್ಟೇಜ್ ಏರಿಳಿತ ಉಂಟಾಗುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಧ್ರುವ ಪ್ರದೇಶಗಳಲ್ಲಿ ಮಾತ್ರ ಕಂಡುಬರುವ ಆಕಾಶದ ಅದ್ಭುತ ರಂಗುರಂಗಿನ ಬೆಳಕಿನ ಹಬ್ಬ 'ಅರೋರಾ' (Auroras), ಈ ಬಾರಿ ತೀವ್ರತೆ ಹೆಚ್ಚಿರುವುದರಿಂದ ಭಾರತದ ಲಡಾಖ್‌ನಂತಹ ಎತ್ತರದ ಪ್ರದೇಶಗಳಲ್ಲೂ ಗೋಚರಿಸುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ವಿಜ್ಞಾನಿಗಳು ಭೂಮಿಯ ಮೇಲಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

Category
ಕರಾವಳಿ ತರಂಗಿಣಿ