ರಾತ್ರಿಯ ಕತ್ತಲೆಯಲ್ಲಿ ವಾಹನ ಚಲಾಯಿಸುವಾಗ ದಾರಿ ಸ್ಪಷ್ಟವಾಗಿ ಕಾಣಲೆಂದು ಅನೇಕರು ಹೈ-ಬೀಮ್ ಲೈಟ್‌ಗಳನ್ನು ಬಳಸುತ್ತಾರೆ. ಆದರೆ, ಈ ಅಭ್ಯಾಸವು ಎದುರಿನಿಂದ ಬರುವ ಚಾಲಕರಿಗೆ ಎಷ್ಟು ಮಾರಕವಾಗಬಲ್ಲದು ಎಂಬ ಅರಿವು ನಮ್ಮಲ್ಲಿರಬೇಕಾದದ್ದು ಅತ್ಯಗತ್ಯ. ಅತೀವ ಪ್ರಖರತೆಯ ಬೆಳಕು ಎದುರಿನ ಚಾಲಕನ ಕಣ್ಣಿಗೆ ನೇರವಾಗಿ ಬಿದ್ದಾಗ, ಆ ಕ್ಷಣದಲ್ಲಿ ಅವರು ತಾತ್ಕಾಲಿಕವಾಗಿ 'ಬ್ಲೈಂಡ್‌ನೆಸ್' ಅಥವಾ ದೃಷ್ಟಿಹೀನತೆಗೆ ಒಳಗಾಗುತ್ತಾರೆ. ಈ ಕೆಲವೇ ಸೆಕೆಂಡುಗಳ ಅಂಧತ್ವವು ಭೀಕರ ಅಪಘಾತಗಳಿಗೆ ನೇರ ಕಾರಣವಾಗುತ್ತದೆ.
ನಮ್ಮ ಹೈ-ಬೀಮ್ ಲೈಟ್ ಎದುರಿನ ಚಾಲಕನಿಗೆ ಕೇವಲ ಕಿರಿಕಿರಿಯನ್ನು ಉಂಟುಮಾಡುವುದಲ್ಲ, ಆತನ ವಾಹನ ನಿಯಂತ್ರಣವನ್ನು ತಪ್ಪಿಸಿ ಪ್ರಾಣಾಪಾಯವನ್ನೂ ತಂದೊಡ್ಡಬಹುದು. ವಿಶೇಷವಾಗಿ ವಯಸ್ಸಾದ ಚಾಲಕರು ಅಥವಾ ಮಹಿಳಾ ಚಾಲಕರು ರಸ್ತೆಯಲ್ಲಿ ಸಂಚರಿಸುವಾಗ ಹೈ-ಬೀಮ್ ಲೈಟ್‌ಗಳ ಅಬ್ಬರ ಅವರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಉದಾಹರಣೆಗೆ, ವಯಸ್ಸಾದವರ ಕಣ್ಣುಗಳು ಅತಿಯಾದ ಬೆಳಕಿಗೆ ಹೊಂದಿಕೊಳ್ಳಲು ಯುವಕರಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಎದುರಿನ ವಾಹನದಿಂದ ಬರುವ ಹಠಾತ್ ಬೆಳಕು ಅವರನ್ನು ಗಲಿಬಿಲಿಗೊಳಿಸಿ, ಬ್ರೇಕ್ ತುಳಿಯಬೇಕಾದ ಜಾಗದಲ್ಲಿ ಆಕ್ಸಿಲರೇಟರ್ ಒತ್ತಿಸುವ ಅಥವಾ ಸ್ಟೀರಿಂಗ್ ತಪ್ಪಿಸುವಂತಹ ತಪ್ಪುಗಳನ್ನು ಮಾಡಿಸಬಹುದು. ಹಾಗೆಯೇ, ರಾತ್ರಿಯ ವೇಳೆ ದ್ವಿಚಕ್ರ ವಾಹನ ಚಲಾಯಿಸುವ ಮಹಿಳೆಯರು ಇಂತಹ ಬೆಳಕಿನಿಂದ ಗಾಬರಿಗೊಂಡು ಸಮತೋಲನ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚು.
ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಬರುವ ಗುಂಡಿಗಳು ಅಥವಾ ಪ್ರಾಣಿಗಳು ಹೈ-ಬೀಮ್ ಬೆಳಕಿನಲ್ಲಿ ಎದುರಿನ ಚಾಲಕನಿಗೆ ಕಾಣಿಸದಿರಬಹುದು. ನಿಮ್ಮ ಹೈ-ಬೀಮ್ ಲೈಟ್ ಆತನಿಗೆ ಆ ಗುಂಡಿಗಳನ್ನು ನೋಡದಂತೆ ಅಡ್ಡಿಪಡಿಸಿ, ಆತ ಅಪಘಾತಕ್ಕೆ ಸಿಲುಕುವಂತೆ ಮಾಡಬಹುದು.
ನೀವು ದೂರದಲ್ಲಿರುವಿರಿ ಎಂದುಕೊಂಡು ಹೈ-ಬೀಮ್‌ನಲ್ಲಿಯೇ ಇರುತ್ತೀರಿ, ಆದರೆ ಆ ಕ್ಷಣಕ್ಕೆ ಎದುರಿನ ಚಾಲಕನು ರಸ್ತೆಯ ಅಂಚಿನಲ್ಲಿದ್ದ ಪಾದಚಾರಿಯನ್ನು ಗಮನಿಸದೆ ಆ ಬೆಳಕಿನ ಪ್ರಖರತೆಯಲ್ಲಿ ಮುಂದುವರಿಯುತ್ತಾನೆ. ಆತನ ಈ ನಿರ್ಲಕ್ಷ್ಯಕ್ಕೆ ನಿಮ್ಮ ಹೈ-ಬೀಮ್ ಬೆಳಕಿನ ಅಡ್ಡಿಯೇ ಕಾರಣವಾಗಿರುತ್ತದೆ.
ರಸ್ತೆಯು ಸಾರ್ವಜನಿಕ ಆಸ್ತಿ. ನಮ್ಮ ಬೆಳಕಿನಿಂದ ಬೇರೆಯವರಿಗೆ ತೊಂದರೆಯಾಗದಿರಲಿ ಎಂಬ ಸಣ್ಣ ಚಿಂತನೆ ದೊಡ್ಡ ಅಪಘಾತಗಳನ್ನು ತಡೆಯಬಲ್ಲದು.
ಇಂದಿನಿಂದಲೇ ರಸ್ತೆಯಲ್ಲಿ ಜವಾಬ್ದಾರಿಯುತವಾಗಿ ವರ್ತಿಸೋಣ, ಎಲ್ಲರಿಗೂ ಸುರಕ್ಷಿತ ಪ್ರಯಾಣದ ವಾತಾವರಣವನ್ನು ನಿರ್ಮಿಸೋಣ. ನಮ್ಮ ಸುರಕ್ಷಿತ ಚಾಲನೆಯೇ ನಮಗೂ ಇತರರಿಗೂ ದಾರಿದೀಪವಾಗಲಿ.
✍ ಲಲಿತಶ್ರೀ ಪ್ರೀತಂ ರೈ