ನವದೆಹಲಿ : ಲಂಡನ್ ಬರ್ಕ್‌ಬೆಕ್ ಕಾಲೇಜಿನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರು ಭಾಗವಹಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವೊಂದರಲ್ಲಿ ಕೆಲವರು ಗದ್ದಲ ಸೃಷ್ಟಿಸಿ, ಅಡ್ಡಿಪಡಿಸಿರುವ ಘಟನೆ ನಡೆದಿದೆ. ಜೂನ್ 4 ರಂದು ನಡೆದ ಈ ಘಟನೆಯನ್ನು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ (ರಾಯಭಾರ ಕಚೇರಿ) ತೀವ್ರವಾಗಿ ಖಂಡಿಸಿದೆ. ಗೌರವಾನ್ವಿತ ಕಾರ್ಯಕ್ರಮಗಳಲ್ಲಿ ಇಂತಹ ವರ್ತನೆಗಳನ್ನು ಒಪ್ಪಲು ಸಾಧ್ಯವಿಲ್ಲ ಮತ್ತು ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಶಾಂತಿಯುತ ಹಾಗೂ ಗೌರವಾನ್ವಿತ ರೀತಿಯಲ್ಲಿ ವ್ಯಕ್ತಪಡಿಸಬೇಕು ಎಂದು ಹೈಕಮಿಷನ್ ತನ್ನ 'X' ಖಾತೆಯಲ್ಲಿ ಸ್ಪಷ್ಟಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು 'ಕೃತಕ ಬುದ್ಧಿಮತ್ತೆ (AI) ಮತ್ತು ಅಂತರರಾಷ್ಟ್ರಿಯ ಕಾನೂನು' ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಿದ್ದರು. ಭಾಷಣದ ನಂತರ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ಸಾರ್ವಜನಿಕರಲ್ಲಿದ್ದ ಮಹಿಳೆಯೊಬ್ಬರು, ಭಾರತದಲ್ಲಿ ವಿರೋಧದ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ದೇಶದ ಮತ್ತು ಜಾಗತಿಕ ಕಾನೂನು ತಜ್ಞರು ಕಳವಳ ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರಶ್ನೆ ಕೇಳಲು ಆರಂಭಿಸಿದರು. ಅಲ್ಲದೆ, ನ್ಯಾಯಮೂರ್ತಿಗಳು ಇತ್ತೀಚೆಗೆ ಭಾರತದಲ್ಲಿ ನೀಡಿದ್ದ 'ಕಾಕ್ರೋಚ್' (ಜಿರಳೆ) ಹೇಳಿಕೆಯ ಕುರಿತೂ ಪ್ರಶ್ನಿಸಲು ಯತ್ನಿಸಿದರು.
ಈ ವೇಳೆ ತಕ್ಷಣವೇ ಮಧ್ಯಪ್ರವೇಶಿಸಿದ ಕಾರ್ಯಕ್ರಮದ ಸಂಘಟಕರು ಮತ್ತು ನಿರೂಪಕರು, ಕೇಳಲಾಗುತ್ತಿರುವ ಪ್ರಶ್ನೆಗಳು ಅಂದಿನ ವಿಷಯಕ್ಕೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದರು. "ಇಂದಿನ ವಿಷಯ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ್ದಾಗಿದೆ, ಹಾಗಾಗಿ ಈ ಪ್ರಶ್ನೆಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ" ಎಂದು ಹೇಳಿ ಮೈಕ್ ಕಟ್ ಮಾಡಿದರು. ಈ ಸಂದರ್ಭದಲ್ಲಿ ಸಭೆಯಲ್ಲಿದ್ದ ಕೆಲವರು ಸಂಘಟಕರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ಗದ್ದಲ ಸೃಷ್ಟಿಸಿದರು. ಸದ್ಯ ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ವೈರಲ್ ಆಗಿವೆ.
ಇದಕ್ಕೂ ಮುನ್ನ ತಮ್ಮ ಭಾಷಣದಲ್ಲಿ ಕೃತಕ ಬುದ್ಧಿಮತ್ತೆ (AI) ಕುರಿತು ಮಾತನಾಡಿದ್ದ ಮುಖ್ಯ ನ್ಯಾಯಮೂರ್ತಿಗಳು, ಎಐ ತಂತ್ರಜ್ಞಾನವು ಆಡಳಿತ, ನ್ಯಾಯಾಂಗ ಮತ್ತು ಸಂವಹನ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸುತ್ತಿದೆ ಎಂದು ತಿಳಿಸಿದರು. ತಂತ್ರಜ್ಞಾನವು ಎಷ್ಟೇ ಮುಂದುವರಿದರೂ ಅದು ಸಂವಿಧಾನದ ಮೌಲ್ಯಗಳು, ಪ್ರಜಾಪ್ರಭುತ್ವದ ತತ್ವಗಳು ಮತ್ತು ಮಾನವನ ಘನತೆಗೆ ಬದ್ಧವಾಗಿರಬೇಕು ಎಂದು ಅವರು ಒತ್ತಿ ಹೇಳಿದ್ದರು. ತಂತ್ರಜ್ಞಾನ ಮತ್ತು ಮಾನವ ಸ್ವಾತಂತ್ರ್ಯದ ನಡುವಿನ ಸಮತೋಲನವೇ ಮುಂಬರುವ ದಿನಗಳ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.
ಇತ್ತೀಚೆಗೆ ಭಾರತದಲ್ಲಿ ನಡೆದ ನ್ಯಾಯಾಲಯದ ಕಲಾಪವೊಂದರಲ್ಲಿ ಸಿಜೆಐ ಸೂರ್ಯ ಕಾಂತ್ ಅವರು, ನಿರುದ್ಯೋಗಿ ಯುವಕರು ನಕಲಿ ಪದವಿಗಳನ್ನು ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಆರ್ಟಿಐ ಕಾರ್ಯಕರ್ತರ ಹೆಸರಿನಲ್ಲಿ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಿದ್ದಾರೆ, ಇವರು ಸಮಾಜಕ್ಕೆ ಜಿರಳೆಗಳಂತೆ (ಕಾಕ್ರೋಚ್) ಪರಾವಲಂಬಿಗಳಾಗುತ್ತಿದ್ದಾರೆ ಎಂದು ಆಡಿದ್ದ ಮೌಖಿಕ ಮಾತುಗಳು ಭಾರಿ ಚರ್ಚೆಗೆ ಗ್ರಾಸವಾಗಿದ್ದವು. ಇದೇ ವಿಷಯವನ್ನು ಮುಂದಿಟ್ಟುಕೊಂಡು ಲಂಡನ್ ಕಾರ್ಯಕ್ರಮದಲ್ಲಿ ಪ್ರಶ್ನೆ ಎತ್ತಲು ಪ್ರಯತ್ನಿಸಲಾಗಿತ್ತು.