ನವದೆಹಲಿ : ಇರಾನ್ ಯುದ್ಧದ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಯ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಯಲು ಮತ್ತು ವಿದೇಶಿ ಬಂಡವಾಳದ ಹರಿವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಅತ್ಯಂತ ಮಹತ್ವದ ಕ್ರಮ ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರುವ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ. ಈ ಹೊಸ ಸುಗ್ರೀವಾಜ್ಞೆಯ ಪ್ರಕಾರ, ಭಾರತೀಯ ಸರ್ಕಾರಿ ಸೆಕ್ಯೂರಿಟಿಗಳಲ್ಲಿ (G-secs) ವಿದೇಶಿ ಪೋರ್ಟ್‌ಫೋಲಿಯೋ ಹೂಡಿಕೆದಾರರು (FPI) ಮಾಡುವ ಹೂಡಿಕೆಯ ಮೇಲಿನ ಬಂಡವಾಳ ಲಾಭದ ತೆರಿಗೆಯನ್ನು (Capital Gains Tax) ಸಂಪೂರ್ಣವಾಗಿ ರದ್ದುಗೊಳಿಸಲಾಗುವುದು. ರಾಷ್ಟ್ರಪತಿಗಳ ಅಂತಿಮ ಒಪ್ಪಿಗೆಯ ನಂತರ ಈ ನಿಯಮವು ಅಧಿಕೃತವಾಗಿ ಜಾರಿಗೆ ಬರಲಿದೆ. ಸದ್ಯದ ನಿಯಮಗಳ ಪ್ರಕಾರ, ವಿದೇಶಿ ಹೂಡಿಕೆದಾರರು 12 ತಿಂಗಳಿಗಿಂತ ಹೆಚ್ಚು ಕಾಲ ಹೊಂದಿರುವ ಬಾಂಡ್‌ಗಳು ಮತ್ತು ಪಟ್ಟಿ ಮಾಡಲಾದ ಷೇರುಗಳ ಮೇಲೆ ಶೇಕಡಾ 12.5 ರಷ್ಟು ದೀರ್ಘಾವಧಿ ಬಂಡವಾಳ ಲಾಭದ ತೆರಿಗೆಯನ್ನು (LTCG) ಪಾವತಿಸುತ್ತಿದ್ದಾರೆ. ಇದರೊಂದಿಗೆ ಸರ್ಕಾರಿ ಬಾಂಡ್‌ಗಳ ಮೇಲಿನ ಬಡ್ಡಿ ಗಳಿಕೆಯ ಮೇಲೆ ಶೇಕಡಾ 20 ರಷ್ಟು ತಡೆಹಿಡಿಯುವ ತೆರಿಗೆಯನ್ನು (Withholding Tax) ಸಹ ವಿಧಿಸಲಾಗುತ್ತಿತ್ತು.
ಕೇಂದ್ರ ಸರ್ಕಾರವು 2023 ರಲ್ಲಿ ಇದರ ಮೇಲಿದ್ದ ಶೇಕಡಾ 5 ರಷ್ಟು ರಿಯಾಯಿತಿ ದರವನ್ನು ರದ್ದುಗೊಳಿಸಿತ್ತು. ಆದರೆ ಪ್ರಸ್ತುತ ವರ್ಷದಲ್ಲಿ ಇರಾನ್ ಯುದ್ಧದ ಭೀತಿಯ ನಡುವೆ ವಿದೇಶಿ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಯಿಂದ ಬರೋಬ್ಬರಿ 2.5 ಲಕ್ಷ ಕೋಟಿ ರೂಪಾಯಿಗಳನ್ನು ಹಿಂಪಡೆದಿದ್ದಾರೆ. ಈ ಭಾರಿ ಪ್ರಮಾಣದ ಬಂಡವಾಳ ಹೊರಹರಿವನ್ನು ತಡೆಯಲು ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ತೆರಿಗೆ ಕಡಿತಕ್ಕೆ ನಿರಂತರವಾಗಿ ಒತ್ತಾಯಿಸುತ್ತಿದ್ದರು. ಇದೇ ಕಾರಣಕ್ಕೆ ಮುಂದಿನ ದಿನಗಳಲ್ಲಿ ಭಾರತದ ವಿದೇಶಿ ವಿನಿಮಯವನ್ನು ಹೆಚ್ಚಿಸಲು ಮತ್ತು ಜಾಗತಿಕ ಹೂಡಿಕೆಗಳನ್ನು ಆಕರ್ಷಿಸಲು ಇನ್ನೂ ಹೆಚ್ಚಿನ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ದೀರ್ಘಾವಧಿ ಮತ್ತು ಅಲ್ಪಾವಧಿ ಬಂಡವಾಳ ಲಾಭಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಬಗ್ಗೆ ಹೂಡಿಕೆದಾರರ ಅಹವಾಲುಗಳನ್ನು ಆಲಿಸಲು ಸಿದ್ಧರಿದ್ದೇವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ ಕೆಲವೇ ದಿನಗಳಲ್ಲಿ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ. ಇದಕ್ಕೂ ಮುನ್ನ 2024 ರ ಜುಲೈ ಬಜೆಟ್‌ನಲ್ಲಿ ಎಲ್‌ಟಿಸಿಜಿ (LTCG) ತೆರಿಗೆಯನ್ನು ಶೇಕಡಾ 10 ರಿಂದ 12.5 ಕ್ಕ್ಕೆ ಹೆಚ್ಚಿಸಲಾಗಿತ್ತು ಮತ್ತು ಅಲ್ಪಾವಧಿ ಬಂಡವಾಳ ಲಾಭದ ತೆರಿಗೆಯನ್ನು ಶೇಕಡಾ 15 ರಷ್ಟಾಗಿ ಮುಂದುವರಿಸಲಾಗಿತ್ತು.
ಹೂಡಿಕೆ ತಜ್ಞರ ಪ್ರಕಾರ, ಎಲ್‌ಟಿಸಿಜಿ ತೆರಿಗೆಯ ಹೆಚ್ಚಳವು ವಿದೇಶಿ ಹೂಡಿಕೆದಾರರು ಭಾರತದಿಂದ ಹೊರಹೋಗಲು ಪ್ರಮುಖ ಕಾರಣವಾಗಿದೆ. ಆಟಮ್ ಫೈನಾನ್ಷಿಯಲ್ ಸರ್ವಿಸಸ್‌ನ ಗ್ರೂಪ್ ಸಿಇಒ ಹರ್ಷವರ್ಧನ ವಿಎಂ ಪ್ರಕಾರ, 2025 ರ 12 ತಿಂಗಳುಗಳಲ್ಲಿ 8 ತಿಂಗಳು ವಿದೇಶಿ ಹೂಡಿಕೆದಾರರು ಭಾರತದಿಂದ ಹೂಡಿಕೆಯನ್ನು ವಾಪಸ್ ಪಡೆದಿದ್ದು, ಒಟ್ಟು 1,66,286 ಕೋಟಿ ರೂಪಾಯಿ ಹೊರಹೋಗಿದೆ. ಹಾಗೆಯೇ 2026 ರ ಜನವರಿಯಲ್ಲೇ ಅತಿ ಹೆಚ್ಚು ಅಂದರೆ 33,598 ಕೋಟಿ ರೂಪಾಯಿ ವಾಪಸ್ ಹೋಗಿದೆ. ಈ ತೆರಿಗೆ ನೀತಿಯು ವಿಶೇಷವಾಗಿ ವಿದೇಶಿ ಸಾರ್ವಭೌಮ ಸಂಪತ್ತು ನಿಧಿಗಳು (Sovereign Wealth Funds) ಮತ್ತು ಪೆನ್ಷನ್ ಫಂಡ್‌ಗಳಿಗೆ ದೊಡ್ಡ ಹೊಡೆತ ನೀಡಿದೆ. ಏಕೆಂದರೆ ಅವರಿಗೆ ತಮ್ಮ ದೇಶದಲ್ಲಿ ಯಾವುದೇ ತೆರಿಗೆ ವಿನಾಯಿತಿ ಸಿಗದ ಕಾರಣ ಭಾರತೀಯ ಮಾರುಕಟ್ಟೆ ಅತ್ಯಂತ ದುಬಾರಿಯಾಗಿದೆ. ಅಲಂಕಿತ್ ಲಿಮಿಟೆಡ್‌ನ ಮುಖ್ಯ ಹಣಕಾಸು ಅಧಿಕಾರಿ ಗೌರವ್ ಮಹೇಶ್ವರಿ ಮಾತನಾಡಿ, ಸಿಂಗಾಪುರ ಮತ್ತು ಹಾಂಕಾಂಗ್‌ನಂತಹ ಪ್ರಮುಖ ಅಂತರರಾಷ್ಟ್ರಿಯ ಹಣಕಾಸು ಕೇಂದ್ರಗಳು ವಿದೇಶಿ ಹೂಡಿಕೆದಾರರ ಮೇಲೆ ಬಂಡವಾಳ ಲಾಭದ ತೆರಿಗೆಯನ್ನು ವಿಧಿಸುವುದಿಲ್ಲ. ಆದರೆ ಭಾರತವು ಇಲ್ಲಿನ ಆಸ್ತಿಗಳಿಂದ ಬರುವ ಆದಾಯಕ್ಕೆ ತೆರಿಗೆ ವಿಧಿಸುವ ತತ್ವವನ್ನು ಪಾಲಿಸುತ್ತಿರುವುದರಿಂದ ವಿದೇಶಿ ಹೂಡಿಕೆದಾರರಲ್ಲಿ ಅಸಮಾಧಾನವಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರದ ಹೊಸ ಸುಗ್ರೀವಾಜ್ಞೆಯು ಭಾರತೀಯ ಮಾರುಕಟ್ಟೆಗೆ ಆನೆಬಲ ತರಲಿದೆ ಎಂದು ನಿರೀಕ್ಷಿಸಲಾಗಿದೆ.