ಸುಬ್ರಹ್ಮಣ್ಯ: ನಾಗಾರಾಧನೆಯ ಪುಣ್ಯ ತಾಣ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭೋಜನ ಪ್ರಸಾದವು ಪರಮ ಪಾವನವಾದುದು. ಇಲ್ಲಿಗೆ ದಿನಂಪ್ರತಿ ಸಹಸ್ರಾರು ಭಕ್ತರು ಆಗಮಿಸಿ ಶ್ರೀ ದೇವರ ದರುಶನ ಪಡೆದು ಕೃತಾರ್ಥರಾಗುತ್ತಾರೆ.
ಅನ್ನದಾತ ಸುಬ್ಬಪ್ಪ ಎಂಬ ಪ್ರತೀತಿ ಪಡೆದ ಶ್ರೀ ದೇವಳದಲ್ಲಿ ಇತರ ಸೇವೆಗಳಂತೆ ಬೋಜನ ಪ್ರಸಾದ ಸ್ವೀಕಾರವು ಪವಿತ್ರವಾಗಿದೆ. ಇಲ್ಲಿ ವಾರ್ಷಿಕವಾಗಿ ಸುಮಾರು 55ಲಕ್ಷಕ್ಕೂ ಹೆಚ್ಚಿನ ಭಕ್ತರು ಭೋಜನ ಪ್ರಸಾದ ಸ್ವೀಕರಿಸುತ್ತಾರೆ.
ಇದೀಗ ಶ್ರೀ ದೇವಳದ ಆಡಳಿತಾಧಿಕಾರಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರ ವಿಶೇಷ ಕಾಳಜಿ ಮತ್ತು ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರ ಚಿಂತನಾತ್ಮಕ ಯೋಜನೆ ಮೇರೆಗೆ ಪ್ರಸಾದ ಬೋಜನ ವ್ಯವಸ್ಥೆಯಲ್ಲಿ ವಿತರಿಸುವ ಖಾದ್ಯಗಳಲ್ಲಿ ವಿನೂತನ ಬದಲಾವಣೆಗಳನ್ನು ತರಲಾಗಿದೆ.ಇದರಿಂದಾಗಿ ಭಕ್ತರಿಗೆ ವಿಶೇಷ ಬೋಜನ ಪ್ರಸಾದ ಪ್ರತಿದಿನ ದೊರಕುವಂತಾಗಿದೆ.
ಈ ಹಿಂದೆ ವಿಶೇಷ ದಿನಗಳನ್ನು ಹೊರತು ಪಡಿಸಿ ಪ್ರತಿದಿನ ಒಂದೇ ರೀತಿಯ ಪಾಯಸವನ್ನು ಭಕ್ತರಿಗೆ ವಿತರಿಸಲಾಗುತ್ತಿತ್ತು.ಆದರೆ ಇದೀಗ ನೂತನ ಯೋಜನೆ ಮೂಲಕ ಪ್ರತಿದಿನ ಬೇರೆ ಬೇರೆ ತೆರನಾದ ಪಾಯಸಗಳನ್ನು ಭಕ್ತರಿಗೆ ಉಣಬಡಿಸುವ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿದ್ದಾರೆ.ಕಡ್ಲೆ ಬೇಳೆ, ಹೆಸರು ಬೇಳೆ, ಕಡ್ಳೆ ಬೇಳೆ ಸಾಬಕ್ಕಿ, ಗೋದಿ ಕಡಿ, ಹಾಲು ಪಾಯಸ, ಅಕ್ಕಿ ಪಾಯಸ, ಶ್ಯಾವಿಗೆ ಪಾಯಸ,ರವೆ ಪಾಯಸ ಮತ್ತು ಸಿರಿಧಾನ್ಯ ಸೇರಿದಂತೆ 10 ಬಗೆಯ ಪಾಯಸವನ್ನು ದಿನವಾಹಿ ತಯಾರಿಸಿ ಭಕ್ತರಿಗೆ ವಿತರಿಸಲಾಗುತ್ತದೆ.ಪ್ರಸಾದ ಭೋಜನ ಅತ್ಯಂತ ಸ್ವಾಧಿಷ್ಠ ಮತ್ತು ಪೌಷ್ಠಿಕಾಂಶಗಳಿAದ ಕೂಡಿರಬೇಕೆಂದು ಅತ್ಯುತ್ತಮವಾದ 15 ಬಗೆಯ ತರಕಾರಿಗಳನ್ನು ಪ್ರತಿದಿನ ಸಾಂಬಾರಿಗೆ ಉಪಯೋಗಿಸಲು ಯೋಜನೆ ಮಾಡಿದ್ದಾರೆ.
ಕುಕ್ಕೆ ದೇವಳದಲ್ಲಿ ಸಂಪ್ರದಾಯ ಪ್ರಕಾರ ಬಾಳೆ ಎಲೆಯಲ್ಲಿ ಭೋಜನ ಪ್ರಸಾದ ವಿತರಣೆಯಾಗುತ್ತದೆ.ಪ್ರತಿನಿತ್ಯ ಭಕ್ತರಿಗೆ ಅನಾದಿ ಕಾಲದಿಂದ ಪ್ರಸಾದದಲ್ಲಿ ವಿತರಿಸಲಾಗುತ್ತಿರುವ ಸಾಂಪ್ರದಾಯಿಕ ಚಟ್ನಿ, ಪಲ್ಯ, ಅನ್ನ, ಸಾರು, ಸಾಂಬಾರು, ಪಾಯಸ, ಮಜ್ಜಿಗೆ ವಿತರಣೆಯಾಗುತ್ತದೆ. ಜಾತ್ರೆ ಮತ್ತು ಹೊಸ್ತಾರೋಗಣೆಯ ದಿನಗಳಲ್ಲಿ ಭಕ್ಷö್ಯಗಳ ಸಂಖ್ಯೆ ಅಧಿಕವಿರುತ್ತದೆ. ಅಲ್ಲದೆ ಏಕಾದಶಿ ದಿನ ಅವಲಕ್ಕಿ, ಉಪ್ಪಿಟ್ಟು ಮತ್ತು ಮಜ್ಜಿಗೆ ವಿತರಿಸಲಾಗುತ್ತದೆ.
ಶ್ರೀ ದೇವಳವು ಭಕ್ತರಿಗೆ ಸೂಕ್ತವಾದ ಅನುಕೂಲತೆಯನ್ನು ಒದಗಿಸುವುದರ ಜೊತೆಗೆ ತನ್ನ ಆಡಳಿತದಲ್ಲಿ ಎರಡು ಶಿಕ್ಷಣ ಸಂಸ್ಥೆಗಳನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ.ಈ ವಿದ್ಯಾ ಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ದಿನ ನಿತ್ಯ ಶ್ರೀ ದೇವಳದಿಂದ ಪ್ರಸಾದ ಬೋಜನ ವಿತರಣೆಯಾಗುತ್ತಿದೆ.ಅದೇ ರೀತಿ ಕ್ಷೇತ್ರದಲ್ಲಿನ ಇತರ ಶಾಲೆಗಳಿಗೆ ಕೂಡಾ ಶ್ರೀ ದೇವಳದಿಂದ ಬೋಜನ ವ್ಯವಸ್ಥೆ ಮಾಡಲಾಗುತ್ತದೆ. ಕ್ಷೇತ್ರದಲ್ಲಿ ವ್ಯಾಸಂಗ ಮಾಡುವ ಸುಮಾರು 3,300 ಮಂದಿಗೆ ಬೋಜನ ಪ್ರಸಾದ ನೀಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಜ್ಞಾನ ಪ್ರಗತಿಗೆ ದೇವಳ ತನ್ನದೇ ಆದ ಕೊಡುಗೆ ನೀಡಿದೆ.