image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಹಿಳಾ ಸಬಲೀಕರಣಕ್ಕೆ ಧರ್ಮಸ್ಥಳದ ಮಾದರಿ ದೇಶಾದ್ಯಂತ ಪಸರಿಸಬೇಕು: ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್

ಮಹಿಳಾ ಸಬಲೀಕರಣಕ್ಕೆ ಧರ್ಮಸ್ಥಳದ ಮಾದರಿ ದೇಶಾದ್ಯಂತ ಪಸರಿಸಬೇಕು: ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್

ಬೆಳ್ತಂಗಡಿ: ಮಹಿಳಾ ಸಬಲೀಕರಣ ಹಾಗೂ ಗ್ರಾಮೀಣಾಭಿವೃದ್ಧಿಯ ಬಗ್ಗೆ ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ಕೇವಲ ಭಾಷಣಗಳಿಗೆ ಸೀಮಿತವಾಗುತ್ತಿರುವ ಹೊತ್ತಿನಲ್ಲಿ, ಅದನ್ನು ನಿಜವಾಗಿಯೂ ಮಾಡಿ ತೋರಿಸುತ್ತಿರುವುದು ಶ್ರೀ ಕ್ಷೇತ್ರ ಧರ್ಮಸ್ಥಳ. ಇಂತಹ ಕಾರ್ಯಗಳು ದೇಶಾದ್ಯಂತ ನಡೆಯಬೇಕು ಎಂದು ಭಾರತದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅಭಿಪ್ರಾಯಪಟ್ಟರು.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

​ಬೆಳ್ತಂಗಡಿಯ ರೆಂಕೆದಗುತ್ತಿನಲ್ಲಿ ನಿರ್ಮಾಣಗೊಂಡಿರುವ ಸಿರಿ ಸಂಸ್ಥೆಯ ಸುಸಜ್ಜಿತ ‘ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್’ ಅನ್ನು ಭಾನುವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಿಂದ ವರ್ಚುವಲ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಧಾರ್ಮಿಕ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಧರ್ಮಸ್ಥಳದ ಸೇವೆ ಅನನ್ಯ. ಸಿರಿ ಸಂಸ್ಥೆಯ ಮೂಲಕ ಮಹಿಳೆಯರು ಮತ್ತು ಬಡವರ ಉದ್ಧಾರಕ್ಕೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವ ಶ್ರಮ ಅಭಿನಂದನೀಯ. ಯಶಸ್ವಿ ಪುರುಷನ ಹಿಂದೆ ಓರ್ವ ಮಹಿಳೆ ಇರುತ್ತಾರೆ ಎಂಬಂತೆ, ಇಲ್ಲಿ ಹೇಮಾವತಿ ಹೆಗ್ಗಡೆಯವರ ಶ್ರಮವೂ ಎದ್ದು ಕಾಣುತ್ತಿದೆ ಎಂದು ಉಪ ರಾಷ್ಟ್ರಪತಿಗಳು ಶ್ಲಾಘಿಸಿದರು. ಸಿರಿ ಸಂಸ್ಥೆಯು ‘ವೋಕಲ್ ಫಾರ್ ಲೋಕಲ್’ ಮತ್ತು ‘ಆತ್ಮನಿರ್ಭರ ಭಾರತ’ದ ಪರಿಕಲ್ಪನೆಗೆ ನೈಜ ಉದಾಹರಣೆಯಾಗಿದೆ ಎಂದರು.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶವು ವಿಕಸಿತ ಭಾರತದತ್ತ ಮುನ್ನಡೆಯುತ್ತಿದ್ದು, ಸಿರಿ ಸಂಸ್ಥೆಯು ಗ್ರಾಮೀಣ ಮಹಿಳೆಯರ ಆರ್ಥಿಕ ಸಶಕ್ತೀಕರಣದ ಮೂಲಕ ದೇಶದ ಔದ್ಯೋಗಿಕ ವಿಕಾಸಕ್ಕೆ ಹೊಸ ದಿಕ್ಕು ನೀಡಿದೆ ಎಂದು ತಿಳಿಸಿದರು.
​ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ಸಂಘಟಿತ ಪ್ರಯತ್ನ ಮತ್ತು ಕನಸುಗಳ ಪ್ರತೀಕವಾಗಿದೆ. ಇದು ಮುಂದಿನ ಪೀಳಿಗೆಯ ಗ್ರಾಮೀಣ ಮಹಿಳೆಯರ ಬದುಕಿಗೆ ಬೆಳಕಾಗಲಿದೆ. ನನಗೀಗ ಸಂಸ್ಥೆಯ ಲಾಭಕ್ಕಿಂತ ಉದ್ಯೋಗಿಗಳ ಗೌರವಯುತ ಜೀವನ ಮತ್ತು ಅವರ ಕುಟುಂಬದ ಸುಖವೇ ಮುಖ್ಯ. ಈ ಸಂಸ್ಥೆಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವ ಸಾಮರ್ಥ್ಯ ನಿಮ್ಮಲ್ಲಿದೆ ಎಂದು ಸಿರಿ ಸಿಬ್ಬಂದಿಗೆ ಕಿವಿಮಾತು ಹೇಳಿದರು.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಸಂದರ್ಭದಲ್ಲಿ ಸಿರಿ ಸಂಸ್ಥಾಪಕಿ ಹೇಮಾವತಿ ವೀ. ಹೆಗ್ಗಡೆ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಡಾ. ಕೆ.ಎಸ್. ಸೋಮಶೇಖರ್, ಡಿ. ಸುರೇಂದ್ರ ಕುಮಾರ್, ನಟ ರಮೇಶ್ ಅರವಿಂದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ ಸ್ವಾಗತಿಸಿದರು, ಡಾ. ಶ್ರೀಧರ್ ಭಟ್ ನಿರೂಪಿಸಿ, ವಂದಿಸಿದರು.

Category
ಕರಾವಳಿ ತರಂಗಿಣಿ