ಧರ್ಮಸ್ಥಳ: ಭಾರತದ ಉಪರಾಷ್ಟ್ರಪತಿಗಳಾದ ಸಿ.ಪಿ. ರಾಧಾಕೃಷ್ಣನ್ ಅವರು ಇಂದು ಪವಿತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಸಾಂಪ್ರದಾಯಿಕ ಉಡುಪಿನಲ್ಲಿ ದೇವಾಲಯವನ್ನು ಪ್ರವೇಶಿಸಿದ ಉಪರಾಷ್ಟ್ರಪತಿಗಳು, ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್ ಅವರು ಉಪಸ್ಥಿತರಿದ್ದರು. ದೇವರ ದರ್ಶನದ ನಂತರ ಉಪರಾಷ್ಟ್ರಪತಿಗಳು ಕ್ಷೇತ್ರದ ಅನ್ನಪೂರ್ಣ ಛತ್ರಕ್ಕೆ ಭೇಟಿ ನೀಡಿ ಅಲ್ಲಿನ ಅನ್ನದಾಸೋಹ ವ್ಯವಸ್ಥೆಯನ್ನು ವೀಕ್ಷಿಸಿದರು.
ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದ ಉಪರಾಷ್ಟ್ರಪತಿಗಳು, ಕೆಲಕಾಲ ಸಮಾಲೋಚನೆ ನಡೆಸಿದರು. ಈ ವೇಳೆ ಧರ್ಮಸ್ಥಳ ಕ್ಷೇತ್ರವು ಕೈಗೊಂಡಿರುವ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ಸೇವಾ ಕಾರ್ಯಗಳನ್ನು ಉಪರಾಷ್ಟ್ರಪತಿಗಳು ವಿಶೇಷವಾಗಿ ಶ್ಲಾಘಿಸಿದರು. ಕ್ಷೇತ್ರದ ಸಮಗ್ರ ಅಭಿವೃದ್ಧಿ ಮತ್ತು ಜನಪರ ಸೇವೆಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಉಪರಾಷ್ಟ್ರಪತಿಗಳ ಈ ಭೇಟಿಯು ಕ್ಷೇತ್ರದ ಭಕ್ತರಲ್ಲಿ ಮತ್ತು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದ್ದು, ಭದ್ರತೆಯ ದೃಷ್ಟಿಯಿಂದ ದೇವಾಲಯದ ಸುತ್ತಮುತ್ತ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.