image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತೀರ್ಪು ವಿಳಂಬಕ್ಕೆ ಸುಪ್ರೀಂಕೋರ್ಟ್ ಬ್ರೇಕ್: 3 ತಿಂಗಳಲ್ಲಿ ಅಂತಿಮ ಆದೇಶ, ಬೇಲ್ ಸಿಕ್ಕ 24 ಗಂಟೆಯೊಳಗೆ ಬಿಡುಗಡೆ ಕಡ್ಡಾಯ

ತೀರ್ಪು ವಿಳಂಬಕ್ಕೆ ಸುಪ್ರೀಂಕೋರ್ಟ್ ಬ್ರೇಕ್: 3 ತಿಂಗಳಲ್ಲಿ ಅಂತಿಮ ಆದೇಶ, ಬೇಲ್ ಸಿಕ್ಕ 24 ಗಂಟೆಯೊಳಗೆ ಬಿಡುಗಡೆ ಕಡ್ಡಾಯ

ನವದೆಹಲಿ : ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಮೈಲಿಗಲ್ಲಾಗುವಂತಹ ಐತಿಹಾಸಿಕ ತೀರ್ಪೊಂದನ್ನು ಸುಪ್ರೀಂಕೋರ್ಟ್ ಪ್ರಕಟಿಸಿದೆ. ನ್ಯಾಯಾಲಯಗಳಲ್ಲಿ ವಾದ-ಪ್ರತಿವಾದಗಳು ಮುಕ್ತಾಯಗೊಂಡರೂ ವರ್ಷಗಟ್ಟಲೆ ತೀರ್ಪಿಗಾಗಿ ಕಾಯಬೇಕಿದ್ದ ಸಾರ್ವಜನಿಕರ ಅಲೆದಾಟಕ್ಕೆ ಸರ್ವೋಚ್ಚ ನ್ಯಾಯಾಲಯವು ಮುಕ್ತಿ ಹಾಡಿದೆ. ನ್ಯಾಯಮೂರ್ತಿಗಳಾದ ಜಸ್ಟಿಸ್ ಸೂರ್ಯಕಾಂತ್, ಜಸ್ಟಿಸ್ ದೀಪಂಕರ್ ದತ್ತಾ ಮತ್ತು ಜಸ್ಟಿಸ್ ಉಜ್ಜಲ್ ಭುಯಾನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಮಹತ್ವದ ಆದೇಶವನ್ನು ಹೊರಡಿಸಿದ್ದು, ಇನ್ಮುಂದೆ ಯಾವುದೇ ಪ್ರಕರಣದ ವಿಚಾರಣೆ ಮುಗಿದು ಆದೇಶ ಕಾಯ್ದಿರಿಸಿದ 3 ತಿಂಗಳ ಒಳಗಾಗಿ ಹೈಕೋರ್ಟ್‌ಗಳು ಅಂತಿಮ ತೀರ್ಪನ್ನು ಪ್ರಕಟಿಸುವುದನ್ನು ಕಡ್ಡಾಯಗೊಳಿಸಿದೆ. “ನ್ಯಾಯ ಪ್ರಕಟಿಸುವಲ್ಲಿ ವಿಳಂಬ ಮಾಡುವುದು ಕಕ್ಷಿದಾರರಿಗೆ ಮಾಡುವ ಅನ್ಯಾಯವಾಗಿದೆ. ಅದರಲ್ಲೂ ವಿಶೇಷವಾಗಿ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹ ಕೇಸ್‌ಗಳಲ್ಲಿ ವಿಳಂಬ ಮಾಡದೆ ತಕ್ಷಣವೇ ಸೂಕ್ತ ನಿರ್ಧಾರ ಪ್ರಕಟಿಸುವುದು ಅತಿ ಮುಖ್ಯ” ಎಂದು ಸುಪ್ರೀಂಕೋರ್ಟ್ ಗಂಭೀರವಾಗಿ ಅಭಿಪ್ರಾಯಪಟ್ಟಿದೆ.

ಹೊಸ ನಿಯಮಾವಳಿಗಳ ಪ್ರಕಾರ, ಪ್ರಕರಣದ ವಿಚಾರಣೆ ಪೂರ್ಣಗೊಂಡು 3 ತಿಂಗಳು ಕಳೆದರೂ ತೀರ್ಪು ಬಾರದಿದ್ದರೆ, ಅದನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರಬೇಕಾಗುತ್ತದೆ. ಇಷ್ಟಾದರೂ 4 ತಿಂಗಳವರೆಗೆ ಆದೇಶ ಹೊರಬೀಳದಿದ್ದರೆ, ಕಕ್ಷಿದಾರರು ನೇರವಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಅರ್ಜಿ ಸಲ್ಲಿಸಬಹುದು. ಅಂತಹ ಸಂದರ್ಭಗಳಲ್ಲಿ, ಆ ಪ್ರಕರಣವನ್ನು ಪ್ರಸ್ತುತ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರಿಂದ ಹಿಂಪಡೆದು, ಮತ್ತೊಂದು ಹೊಸ ಪೀಠಕ್ಕೆ ವರ್ಗಾಯಿಸಲಾಗುತ್ತದೆ. ಮತ್ತೊಂದೆಡೆ, ಆರೋಪಿಗಳ ಬೇಲ್ ಅರ್ಜಿಗಳಿಗೆ ಸಂಬಂಧಿಸಿದಂತೆಯೂ ಅತ್ಯಂತ ಬಿಗಿಯಾದ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಜಾಮಿನು ಅರ್ಜಿಗಳ ವಿಚಾರಣೆ ಮುಗಿದ ತಕ್ಷಣ, ಸಾಧ್ಯವಾದರೆ ಅದೇ ದಿನವೇ ಅಥವಾ ಗರಿಷ್ಠ ಮರುದಿನವೇ ಕಡ್ಡಾಯವಾಗಿ ತೀರ್ಪನ್ನು ಘೋಷಿಸಬೇಕು ಎಂದು ತಿಳಿಸಲಾಗಿದೆ.

ಇದರೊಂದಿಗೆ ಹೈಕೋರ್ಟ್‌ಗಳಿಗೆ ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಗೈಡ್‌ಲೈನ್ಸ್ ನೀಡಿದೆ. ವಾದ-ಪ್ರತಿವಾದ ಮುಗಿದ 3 ತಿಂಗಳ ಒಳಗಾಗಿ ಎಲ್ಲಾ ಹೈಕೋರ್ಟ್‌ಗಳು ಅಂತಿಮ ತೀರ್ಪು ನೀಡಲೇಬೇಕು ಹಾಗೂ ಜಾಮಿನು ಅರ್ಜಿಗಳ ವಿಚಾರಣೆ ಮುಗಿದ ತಕ್ಷಣವೇ ತೀರ್ಪು ನೀಡಲು ಮೊದಲ ಆದ್ಯತೆ ನೀಡಬೇಕು. ಇನ್ನು ಬೇಲ್ ಆರ್ಡರ್ ಪ್ರತಿ ಸಿಕ್ಕ ತಕ್ಷಣ ಅಥವಾ ಗರಿಷ್ಠ 24 ಗಂಟೆಗಳ ಒಳಗೆ ಕೈದಿಯನ್ನು ಬಂಧನದಿಂದ ಮುಕ್ತಗೊಳಿಸಬೇಕು ಹಾಗೂ ನ್ಯಾಯಾಲಯದ ಆದೇಶ ಹೊರಬಿದ್ದ 24 ಗಂಟೆಗಳ ಒಳಗಾಗಿ ಅದನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ. ವೆಬ್‌ಸೈಟ್‌ಗೆ ತೀರ್ಪಿನ ಕಾಪಿ ಅಪ್‌ಲೋಡ್ ಆಗುತ್ತಿದ್ದಂತೆ ಸಂಬಂಧಪಟ್ಟ ಕಕ್ಷಿದಾರರಿಗೆ SMS ಅಲರ್ಟ್ ಲಭ್ಯವಾಗಲಿದ್ದು, ಕೋರ್ಟ್‌ನಲ್ಲಿ ಕೇವಲ ತೀರ್ಪಿನ ಮುಖ್ಯ ಭಾಗವನ್ನು (Operating Part) ಮಾತ್ರ ಓದಿದ್ದರೆ, ಮುಂದಿನ 15 ದಿನಗಳ ಒಳಗಾಗಿ ಅದರ ಸಂಪೂರ್ಣ ಸವಿಸ್ತಾರವಾದ ತೀರ್ಪಿನ ಪ್ರತಿಯನ್ನು ಒದಗಿಸಬೇಕಾಗುತ್ತದೆ. “ನ್ಯಾಯ ವಿಳಂಬವಾದರೆ ಅದು ನ್ಯಾಯವನ್ನು ನಿರಾಕರಿಸಿದಂತೆ” ಎಂಬ ನಾಣ್ಣುಡಿಗೆ ಜೀವ ತುಂಬುವಂತೆ ಸುಪ್ರೀಂಕೋರ್ಟ್ ಈ ಐತಿಹಾಸಿಕ ಕ್ರಮ ಕೈಗೊಂಡಿದೆ.

Category
ಕರಾವಳಿ ತರಂಗಿಣಿ