image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನೀಟ್ ಯುಜಿ ಮರು ಪರೀಕ್ಷೆ ಭದ್ರತೆಗೆ ವಾಯುಪಡೆ ಬಳಕೆ: ಕೇಂದ್ರ ಸರ್ಕಾರದ ಗಂಭೀರ ಚಿಂತನೆ

ನೀಟ್ ಯುಜಿ ಮರು ಪರೀಕ್ಷೆ ಭದ್ರತೆಗೆ ವಾಯುಪಡೆ ಬಳಕೆ: ಕೇಂದ್ರ ಸರ್ಕಾರದ ಗಂಭೀರ ಚಿಂತನೆ

ನವದೆಹಲಿ : ಜೂನ್ 21ರಂದು ಮರು ನಿಗದಿಯಾಗಿರುವ ನೀಟ್ ಯುಜಿ (NEET UG) ಮರು ಪರೀಕ್ಷೆಯನ್ನು ಅತ್ಯಂತ ಸುರಕ್ಷಿತವಾಗಿ ಮತ್ತು ಪಾರದರ್ಶಕವಾಗಿ ನಡೆಸಲು ಕೇಂದ್ರ ಸರ್ಕಾರ ಮಹತ್ವದ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ. ಪರೀಕ್ಷಾ ಸಾಮಗ್ರಿಗಳ ಸುರಕ್ಷಿತ ಸಾಗಣೆ ಹಾಗೂ ವ್ಯವಸ್ಥಿತ ಪೂರೈಕೆಗಾಗಿ (ಲಾಜಿಸ್ಟಿಕ್ ಬೆಂಬಲ) ಭಾರತೀಯ ವಾಯುಪಡೆಯನ್ನು (IAF) ಬಳಸಿಕೊಳ್ಳುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ಭದ್ರತಾ ಕ್ರಮಗಳ ಕುರಿತು ನವದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಭಾಗವಹಿಸಿ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಪ್ರಶ್ನೆಪತ್ರಿಕೆ ತಯಾರಿಕೆ, ಮುದ್ರಣ ಹಾಗೂ ಅವುಗಳನ್ನು ಪರೀಕ್ಷಾ ಕೇಂದ್ರಗಳಿಗೆ ಸುರಕ್ಷಿತವಾಗಿ ತಲುಪಿಸುವವರೆಗಿನ ಸಂಪೂರ್ಣ ಪ್ರಕ್ರಿಯೆಯನ್ನು ಸಭೆಯಲ್ಲಿ ಪರಾಮರ್ಶಿಸಲಾಗಿದೆ. ಸದ್ಯಕ್ಕೆ ವಾಯುಪಡೆ ಬಳಕೆಯ ಕುರಿತು ಅಂತಿಮ ತೀರ್ಮಾನ ಹೊರಬಿದ್ದಿಲ್ಲವಾದರೂ, ಅಂತಿಮ ನಿರ್ಧಾರದ ಜವಾಬ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಡಲಾಗಿದೆ. ಪ್ರಧಾನಿಯವರು ವೈಯಕ್ತಿಕವಾಗಿ ಈ ಮರು ಪರೀಕ್ಷೆಯ ಸಿದ್ಧತೆಗಳ ಮೇಲ್ವಿಚಾರಣೆ ನಡೆಸುತ್ತಿದ್ದು, ಪ್ರತಿಯೊಂದು ಹಂತದ ಮಾಹಿತಿಯನ್ನೂ ಪಡೆದುಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೇ 3ರಂದು ದೇಶದ 551 ನಗರಗಳು ಹಾಗೂ ವಿದೇಶದ 14 ಕೇಂದ್ರಗಳಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ನೀಟ್ ಯುಜಿ ಪರೀಕ್ಷೆಯನ್ನು ನಡೆಸಿತ್ತು. ಸುಮಾರು 23 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು. ಆದರೆ, ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಎನ್​ಟಿಎ ಮೇ 12ರಂದು ಪರೀಕ್ಷೆಯನ್ನು ರದ್ದುಗೊಳಿಸಿ, ಜೂನ್ 21ಕ್ಕೆ ಮರು ಪರೀಕ್ಷೆ ನಿಗದಿಪಡಿಸಿದೆ. ಪ್ರಸ್ತುತ ಈ ಹಗರಣದ ತನಿಖೆಯನ್ನು ಸಿಬಿಐ ನಡೆಸುತ್ತಿದ್ದು, ದೇಶಾದ್ಯಂತ ದಾಳಿ ನಡೆಸಿ ಇದುವರೆಗೆ 13 ಜನರನ್ನು ಬಂಧಿಸಿದೆ. ಕಡಿಮೆ ಅವಧಿಯಲ್ಲಿ ಯಾವುದೇ ಲೋಪದೋಷಗಳಿಲ್ಲದೆ ಪಾರದರ್ಶಕವಾಗಿ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳಲ್ಲಿ ಭರವಸೆ ಮೂಡಿಸಲು ಕೇಂದ್ರ ಸರ್ಕಾರ ಸನ್ನದ್ಧವಾಗಿದೆ.

ಇದೇ ವೇಳೆ, ನೀಟ್ ಪರೀಕ್ಷೆಯ ಸಿದ್ಧತೆಗೆ ಭಾರತೀಯ ವಾಯುಪಡೆಯನ್ನು ಬಳಸಿಕೊಳ್ಳಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಸಶಸ್ತ್ರ ಪಡೆಗಳ ಕೆಲಸ ದೇಶದ ಗಡಿಗಳನ್ನು ಕಾಯುವುದಾಗಿದೆ. ಪರೀಕ್ಷೆ ನಡೆಸಲು ವಾಯುಪಡೆಯನ್ನು ನೆಚ್ಚಿಕೊಳ್ಳುತ್ತಿರುವುದು ಎನ್​ಟಿಎ ಮತ್ತು ಶಿಕ್ಷಣ ಸಚಿವಾಲಯದ ಸಂಪೂರ್ಣ ಅಸಮರ್ಥತೆ ಹಾಗೂ ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.

Category
ಕರಾವಳಿ ತರಂಗಿಣಿ