ಮಂಗಳೂರು: ಕರಾವಳಿ ಕರ್ನಾಟಕದ ನಿರುದ್ಯೋಗಿ ಯುವಜನತೆಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಿದ್ದು, ನಗರದಲ್ಲಿ ಶೀಘ್ರದಲ್ಲೇ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗುವುದು ಎಂದು ಕೌಶಲ್ಯಾಭಿವೃದ್ಧಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ನಗರದಲ್ಲಿ ಕರ್ನಾಟಕ ಜರ್ಮನ್ ಮಲ್ಟಿ ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್ (ಕೆಜಿಎಂಎಸ್‍ಡಿಸಿ) ಸೊಸೈಟಿ ಹಾಗೂ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯ (ಕೆಜಿಟಿಟಿಐ) ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಉದ್ಯೋಗ ಮೇಳವು ಪ್ರಮುಖವಾಗಿ ಕರಾವಳಿಯ ಮೂರು ಜಿಲ್ಲೆಗಳ ಯುವಜನರನ್ನು ಕೇಂದ್ರೀಕರಿಸಿ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಿದೆ. ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ಯಶಸ್ವಿಯಾಗಿ ನಡೆದ ಉದ್ಯೋಗ ಮೇಳಗಳ ಮೂಲಕ 30 ಸಾವಿರಕ್ಕೂ ಅಧಿಕ ಮಂದಿಗೆ ಕೆಲಸ ಸಿಕ್ಕಿದೆ ಎಂದು ಸಚಿವರು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಯುವ ಪೀಳಿಗೆಯಲ್ಲಿ ಕೌಶಲ್ಯ ವೃದ್ಧಿಸುವ ನಿಟ್ಟಿನಲ್ಲಿ ರಾಜ್ಯದ 8 ಹೊಸ ಕಡೆಗಳಲ್ಲಿ ಕೆಜಿಟಿಟಿಐ ಕೇಂದ್ರಗಳನ್ನು ಮಂಜೂರು ಮಾಡಲಾಗಿದ್ದು, ಅಲ್ಲಿ ರೆಫ್ರಿಜರೇಷನ್ ಮತ್ತು ಎಸಿ ತಾಂತ್ರಿಕತೆಯ ತರಬೇತಿ ಕೋರ್ಸ್‌ಗಳನ್ನು ಆರಂಭಿಸಲಾಗುವುದು. ಪ್ರಸ್ತುತ ಈ ಸಂಸ್ಥೆಯಲ್ಲಿ 1 ದೀರ್ಘಾವಧಿ ಹಾಗೂ 31 ಅಲ್ಪಾವಧಿ ತರಬೇತಿಗಳನ್ನು ನೀಡಲಾಗುತ್ತಿದೆ. ಇದರೊಂದಿಗೆ ನೂರಕ್ಕೆ ನೂರರಷ್ಟು ಉದ್ಯೋಗ ಖಾತರಿ ನೀಡುವ ಸರ್ಕಾರಿ ಉಪಕರಣಗಾರ ಸಂಸ್ಥೆಗಳ (ಜಿಟಿಟಿಸಿ) ಪ್ರವೇಶಾತಿ ಮಿತಿಯನ್ನು 2,500 ರಿಂದ 6,000 ಕ್ಕೆ ಏರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು 10,000 ಕ್ಕೆ ಹೆಚ್ಚಿಸುವ ಗುರಿ ಇದೆ. ಅಲ್ಲದೆ ರಾಜ್ಯದಲ್ಲಿ 20 ಹೊಸ ಜೆಟಿಟಿಸಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಮಂಜುನಾಥ್ ಭಂಡಾರಿ, ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಉದ್ಯೋಗ ತರಬೇತಿ ಇಲಾಖೆ ಆಯುಕ್ತೆ ಶಿಲ್ಪಾ ಸೇರಿದಂತೆ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.