ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದ ನೂತನ ಸರ್ಕಾರವು ಅಧಿಕಾರಕ್ಕೆ ಬಂದ ಬೆನ್ನಲ್ಲೇ ಕಠಿಣ ಹಿಂದುತ್ವ ಮತ್ತು ರಾಷ್ಟ್ರೀಯತೆಯ ಅಜೆಂಡಾವನ್ನು ಜಾರಿಗೆ ತರಲು ಆರಂಭಿಸಿದೆ. ಕಳೆದ ವಾರ ಸರ್ಕಾರಿ ಶಾಲೆಗಳಲ್ಲಿ ವಂದೇ ಮಾತರಂ ಕಡ್ಡಾಯಗೊಳಿಸಿದ್ದ ಶಿಕ್ಷಣ ಇಲಾಖೆ, ಈಗ ರಾಜ್ಯದ ಎಲ್ಲಾ ಅನುದಾನಿತ ಮತ್ತು ಮಾನ್ಯತೆ ಪಡೆದ ಮದರಸಾಗಳಲ್ಲೂ ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಸರ್ಕಾರದ ಈ ಐತಿಹಾಸಿಕ ಆದೇಶದ ವಿರುದ್ಧ AJUP ಮುಖ್ಯಸ್ಥ ಹಾಗೂ ವಿವಾದಿತ ನಾಯಕ ಹುಮಾಯೂನ್ ಕಬೀರ್ ಬಹಿರಂಗವಾಗಿಯೇ ಬಂಡಾಯ ಸಾರಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತೀವ್ರ ಆಕ್ರೋಶ ಹೊರಹಾಕಿರುವ ಕಬೀರ್, ಯಾವ ಕಾರಣಕ್ಕೂ ಮದರಸಾಗಳಲ್ಲಿ ವಂದೇ ಮಾತರಂ ಗೀತೆಯನ್ನು ಹಾಡುವುದಿಲ್ಲ. ಮದರಸಾಗಳ ಆಂತರಿಕ ವಿಷಯಗಳಲ್ಲಿ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಇಂತಹ ನಿರ್ದೇಶನಗಳನ್ನು ನೀಡಲು ಸರ್ಕಾರಕ್ಕೆ ಯಾವುದೇ ಕಾನೂನಾತ್ಮಕ ಅಥವಾ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದ್ದಾರೆ. ಮುರ್ಶಿದಾಬಾದ್‌ನಲ್ಲಿ ಬಾಬರಿ ಮಸೀದಿಯ ಪ್ರತಿಕೃತಿ ನಿರ್ಮಾಣದ ಘೋಷಣೆ ಮಾಡಿ ಈ ಹಿಂದೆ ಟಿಎಂಸಿಯಿಂದ ಅಮಾನತುಗೊಂಡು, ನಂತರ ಸ್ವಂತ ಪಕ್ಷ ಕಟ್ಟಿರುವ ಹುಮಾಯೂನ್ ಕಬೀರ್ ಅವರ ಈ ಹೇಳಿಕೆ ಈಗ ಇಡೀ ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಅಲ್ಪಸಂಖ್ಯಾತ ಕಲ್ಯಾಣ ಮತ್ತು ಮದರಸಾ ಶಿಕ್ಷಣ ಇಲಾಖೆಯ ಸಚಿವ ಖುದಿರಾಮ್ ತುಡು ಅವರ ಅನುಮೋದನೆಯೊಂದಿಗೆ ಹೊರಬಿದ್ದಿರುವ ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದೆ. ಸರ್ಕಾರದ ಮಾದರಿ ಮದರಸಾಗಳು, ಸರ್ಕಾರಿ ಅನುದಾನಿತ ಮದರಸಾಗಳು, ಶಿಶು ಶಿಕ್ಷಣ ಕೇಂದ್ರಗಳು ಮತ್ತು ಮಾನ್ಯತೆ ಪಡೆದ ಅನುದಾನರಹಿತ ಮದರಸಾಗಳಿಗೆ ಈ ಹೊಸ ನಿಯಮ ಅನ್ವಯಿಸುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.