image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನದ ಕಪಟತನವನ್ನು ಬಯಲಿಗೆಳೆದ ಭಾರತ

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನದ ಕಪಟತನವನ್ನು ಬಯಲಿಗೆಳೆದ ಭಾರತ

ನವದೆಹಲಿ : ​ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಭಾರತವು ಪಾಕಿಸ್ತಾನದ ದೀರ್ಘಕಾಲದ ನರಮೇಧದ ಕೃತ್ಯಗಳನ್ನು ತೀವ್ರವಾಗಿ ಟೀಕಿಸಿದೆ. ದಶಕಗಳಿಂದ ತನ್ನ ಗಡಿಯೊಳಗೆ ಮತ್ತು ಹೊರಗೆ ಹಿಂಸಾಚಾರ ನಡೆಸುತ್ತಿರುವ ಪಾಕಿಸ್ತಾನದ ಅಮಾನವೀಯ ನಡವಳಿಕೆಯು ಅದರ ಆಂತರಿಕ ವೈಫಲ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ಭಾರತ ನೇರ ವಾಗ್ದಾಳಿ ನಡೆಸಿದೆ. 'ಸಶಸ್ತ್ರ ಸಂಘರ್ಷದಲ್ಲಿ ನಾಗರಿಕರ ರಕ್ಷಣೆ' ಕುರಿತ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ವಾರ್ಷಿಕ ಮುಕ್ತ ಚರ್ಚೆಯಲ್ಲಿ ಮಾತನಾಡಿದ ಭಾರತದ ಖಾಯಂ ಪ್ರತಿನಿಧಿ ಹರೀಶ್ ಪರ್ವತನೇನಿ ಅವರು, ದೀರ್ಘಕಾಲದ ನರಮೇಧ ಕೃತ್ಯಗಳ ಕಪ್ಪು ದಾಖಲೆ ಹೊಂದಿರುವ ಪಾಕಿಸ್ತಾನವು, ಭಾರತದ ಸಂಪೂರ್ಣ ಆಂತರಿಕವಾಗಿರುವ ವಿಷಯಗಳನ್ನು ಉಲ್ಲೇಖಿಸುತ್ತಿರುವುದು ಅತ್ಯಂತ ದೊಡ್ಡ ವಿಪರ್ಯಾಸ ಎಂದು ತಿರುಗೇಟು ನೀಡಿದ್ದಾರೆ.

​ವಿಶ್ವಸಂಸ್ಥೆಯ ಚರ್ಚೆಯ ವೇಳೆ ಪಾಕಿಸ್ತಾನದ ಪ್ರತಿನಿಧಿಯು ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಅನಗತ್ಯವಾಗಿ ಎತ್ತಿದ ನಂತರ ಭಾರತದ ಪ್ರತಿನಿಧಿ ಹರೀಶ್ ಪರ್ವತನೇನಿ ಅವರು ಈ ಕಠಿಣ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವರ್ಷದ ಆರಂಭದಲ್ಲಿ ಅಫ್ಗಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸಿದ ವಿನಾಶಕಾರಿ ದಾಳಿಯನ್ನು ಪ್ರಸ್ತಾಪಿಸಿದ ಅವರು, ಮಾರ್ಚ್ ತಿಂಗಳ ಪವಿತ್ರ ರಂಜಾನ್ ಸಮಯದಲ್ಲಿ, ಇಡೀ ಜಗತ್ತೇ ಶಾಂತಿ ಮತ್ತು ಸಹಾನುಭೂತಿಯನ್ನು ಆಚರಿಸುವಾಗ ಕಾಬೂಲ್‌ನ ಆಸ್ಪತ್ರೆ ಮೇಲೆ ಪಾಕಿಸ್ತಾನ ಬರ್ಬರ ವೈಮಾನಿಕ ದಾಳಿ ನಡೆಸಿರುವುದನ್ನು ಜಗತ್ತು ಇನ್ನೂ ಮರೆತಿಲ್ಲ ಎಂದು ನೆನಪಿಸಿದ್ದಾರೆ.

​ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆಯ ನೆರವು ಮಿಷನ್ (ಯುಎನ್‌ಎಎಂಎ) ನೀಡಿರುವ ಅಧಿಕೃತ ವರದಿಯನ್ನು ಉಲ್ಲೇಖಿಸಿದ ಭಾರತ, ಪಾಕಿಸ್ತಾನದ ಈ ಹೇಡಿತನದ ಮತ್ತು ವಿವೇಚನಾ ರಹಿತ ಕೃತ್ಯವು ಬರೊಬ್ಬರಿ 269 ಮುಗ್ಧ ನಾಗರಿಕರ ಜೀವವನ್ನು ಬಲಿಪಡೆದಿದೆ ಹಾಗೂ 122 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದೆ. ಯಾವುದೇ ಕಾರಣಕ್ಕೂ ಇಂತಹ ವೈದ್ಯಕೀಯ ಸಂಸ್ಥೆಯ ಮೇಲಿನ ದಾಳಿಯನ್ನು ಮಿಲಿಟರಿ ಗುರಿ ಎಂದು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಭಾರತ ಪ್ರತಿಪಾದಿಸಿದೆ. ಅಂತರರಾಷ್ಟ್ರೀಯ ಕಾನೂನಿನ ಉನ್ನತ ತತ್ವಗಳನ್ನು ಪಾಲಿಸುವುದಾಗಿ ಜಗತ್ತಿಗೆ ಸುಳ್ಳು ಹೇಳುತ್ತಾ, ಕತ್ತಲೆಯಲ್ಲಿ ಮುಗ್ಧ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದು ಪಾಕಿಸ್ತಾನದ ಅಪ್ಪಟ ಕಪಟತನಕ್ಕೆ ಸಾಕ್ಷಿಯಾಗಿದೆ ಎಂದು ಪರ್ವತನೇನಿ ಕಿಡಿಕಾರಿದ್ದಾರೆ. ಯುಎನ್‌ಎಎಂಎ ವರದಿ ಪ್ರಕಾರ, ಅಫ್ಘಾನ್ ನಾಗರಿಕರ ವಿರುದ್ಧ ಪಾಕಿಸ್ತಾನ ನಡೆಸಿದ ಈ ಗಡಿಯಾಚೆಗಿನ ಸಶಸ್ತ್ರ ದಾಳಿಯಿಂದಾಗಿ ಸುಮಾರು 94,000 ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ಕಳೆದುಕೊಂಡು ಸ್ಥಳಾಂತರಗೊಳ್ಳಬೇಕಾಯಿತು.

​ಪಾಕಿಸ್ತಾನದ ಕ್ರೂರ ಇತಿಹಾಸವನ್ನು ಜಾಗತಿಕ ವೇದಿಕೆಯಲ್ಲಿ ತೆರೆದಿಟ್ಟ ಭಾರತದ ಪ್ರತಿನಿಧಿ, 1971ರಲ್ಲಿ 'ಆಪರೇಷನ್ ಸರ್ಚ್‌ಲೈಟ್' ಸಮಯದಲ್ಲಿ ಪಾಕಿಸ್ತಾನವು ತನ್ನದೇ ದೇಶದ ಸೈನ್ಯದಿಂದ 4 ಲಕ್ಷ ಮಹಿಳೆಯರ ಮೇಲೆ ವ್ಯವಸ್ಥಿತವಾಗಿ ಸಾಮೂಹಿಕ ಅತ್ಯಾಚಾರ ನಡೆಸಲು ಅಧಿಕೃತವಾಗಿ ಅನುಮೋದನೆ ನೀಡಿತ್ತು ಎಂಬ ಕಹಿ ಸತ್ಯವನ್ನು ನೆನಪಿಸಿದರು. 1971ರ ಮಾರ್ಚ್ ತಿಂಗಳಲ್ಲಿ ಅಂದಿನ ಪೂರ್ವ ಪಾಕಿಸ್ತಾನದಲ್ಲಿ (ಈಗಿನ ಬಾಂಗ್ಲಾದೇಶ) ತೀವ್ರಗೊಂಡಿದ್ದ ಬಾಂಗ್ಲಾದೇಶದ ರಾಷ್ಟ್ರೀಯತಾವಾದಿ ಚಳವಳಿಯನ್ನು ಹತ್ತಿಕ್ಕುವ ಭಾಗವಾಗಿ ಪಾಕಿಸ್ತಾನಿ ಸೇನೆಯು 'ಆಪರೇಷನ್ ಸರ್ಚ್‌ಲೈಟ್' ಎಂಬ ಇತಿಹಾಸದ ಅತ್ಯಂತ ಹೀನ ಮತ್ತು ಭೀಕರ ನರಮೇಧದ ಕೃತ್ಯವನ್ನು ನಡೆಸಿತ್ತು ಎಂದು ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನದ ಮುಖವಾಡವನ್ನು ಕಳಚಿಹಾಕಿದೆ.

Category
ಕರಾವಳಿ ತರಂಗಿಣಿ