ನವದೆಹಲಿ : ಮಧ್ಯಪ್ರಾಚ್ಯದಲ್ಲಿ ಸೃಷ್ಟಿಯಾಗಿರುವ ಭೌಗೋಳಿಕ ರಾಜಕೀಯ ಬಿಕ್ಕಟ್ಟಿನಿಂದಾಗಿ ಭಾರತ ಸೇರಿದಂತೆ ಪ್ರಮುಖ ತೈಲ ಆಮದುದಾರ ದೇಶಗಳು ಭಾರೀ ಪ್ರಮಾಣದ ತೈಲ ಮತ್ತು ಅನಿಲ ಪೂರೈಕೆ ಕೊರತೆಯನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಇತರ ದೇಶಗಳು ಪರ್ಯಾಯ ಜಲಮಾರ್ಗಗಳ ಮೂಲಕ ಇಂಧನವನ್ನು ತರಿಸಿಕೊಳ್ಳಲು ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಯಿದೆ. ಆದಾಗ್ಯೂ, ತೈಲ ಸಾಗಣೆ ವಿಚಾರದಲ್ಲಿ ಯುದ್ಧಪೂರ್ವದಂತೆ ಸಹಜ ಸ್ಥಿತಿ ನಿರ್ಮಾಣವಾಗುವುದು 2026ರಲ್ಲಿ ಅಸಂಭವ ಎಂದು ಜಾಗತಿಕ ರೇಟಿಂಗ್ಸ್ ಸಂಸ್ಥೆ ಮೂಡೀಸ್ ಭವಿಷ್ಯ ನುಡಿದಿದೆ. ಭೌಗೋಳಿಕ ರಾಜಕೀಯ ಅಪಾಯಗಳ ಕುರಿತಾದ ತನ್ನ ಜಾಗತಿಕ ವರದಿಯಲ್ಲಿ ಮೂಡೀಸ್ ಈ ಅಂಶವನ್ನು ಉಲ್ಲೇಖಿಸಿದ್ದು, ಭಾರತವು ತನ್ನ ಕಚ್ಚಾ ತೈಲ ಆಮದುಗಳಲ್ಲಿ ಸುಮಾರು ಶೇ. 46 ರಷ್ಟು ಭಾಗವನ್ನು ಮಧ್ಯಪ್ರಾಚ್ಯದಿಂದಲೇ ಪಡೆಯುತ್ತಿರುವುದರಿಂದ ಹೆಚ್ಚು ಅಪಾಯಕ್ಕೆ ಒಳಗಾಗುವ ದೇಶಗಳಲ್ಲಿ ಒಂದಾಗಿದೆ ಎಂದು ಎಚ್ಚರಿಸಿದೆ. ಇದರೊಂದಿಗೆ ಕರೆನ್ಸಿ ಅಪಮೌಲ್ಯವೂ ಭಾರತದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ತಿಳಿಸಿದೆ.
ಈ ತೈಲ ಆಪತ್ತಿನಿಂದಾಗಿ ಭಾರತದ ಜಿಡಿಪಿ ಬೆಳವಣಿಗೆಯ ದರವು ಈ ಹಿಂದೆ ಅಂದಾಜಿಸಲಾಗಿದ್ದ ಶೇ. 6.8 ರ ಬದಲಾಗಿ ಶೇ. 6 ಕ್ಕೆ ಇಳಿಕೆಯಾಗಬಹುದು ಎಂದು ಮೂಡೀಸ್ ಇತ್ತೀಚೆಗಷ್ಟೇ ಅಂದಾಜಿಸಿತ್ತು. ಇದರ ಬೆನ್ನಲ್ಲೇ ಬಿಡುಗಡೆಯಾಗಿರುವ ಈ ವರದಿಯು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರಮುಖ ತೈಲ ಆಮದುದಾರ ದೇಶಗಳಾದ ಚೀನಾ, ಭಾರತ, ಜಪಾನ್ ಮತ್ತು ಕೊರಿಯಾಗಳು ಈ ಬಿಕ್ಕಟ್ಟನ್ನು ನಿವಾರಿಸಲು ಇರಾನ್ ಜೊತೆ ದ್ವಿಪಕ್ಷೀಯವಾಗಿ ಮಾತುಕತೆ ನಡೆಸುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಮೂಡೀಸ್ ಹೇಳಿದೆ. ಈ ಮಾತುಕತೆಗಳ ಭಾಗವಾಗಿ ಲಾರಕ್ ದ್ವೀಪದ ಬಳಿ ಮತ್ತು ಒಮಾನಿ ಪ್ರಾದೇಶಿಕ ಜಲಮಾರ್ಗದ ಮೂಲಕ ಪ್ರತ್ಯೇಕ ತೈಲ ಸಾಗಣೆ ಕಾರಿಡಾರ್‌ಗಳು ರೂಪುಗೊಳ್ಳುವ ಸಾಧ್ಯತೆಯಿದೆ. ಆದರೆ ಇಷ್ಟೆಲ್ಲಾ ಪ್ರಯತ್ನಗಳ ಹೊರತಾಗಿಯೂ, 2026ರಲ್ಲಿ ಯುದ್ಧಕ್ಕಿಂತ ಮೊದಲು ಇದ್ದಂತೆ ಪೂರೈಕೆ ವ್ಯವಸ್ಥೆಯು ಸಹಜ ಸ್ಥಿತಿಗೆ ಮರಳುವುದು ಕಷ್ಟಸಾಧ್ಯ ಎಂದು ವರದಿ ಸ್ಪಷ್ಟಪಡಿಸಿದೆ.
ಮುಂದಿನ ಆರು ತಿಂಗಳ ಅವಧಿಯಲ್ಲಿ ಜಾಗತಿಕವಾಗಿ ಅತ್ಯಂತ ಪ್ರಮುಖವಾಗಿರುವ ಹೋರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಮಾರ್ಗಗಳು ಪುನಾರಂಭಗೊಂಡರೂ ಸಹ, ತೈಲ ಮಾರುಕಟ್ಟೆಗೆ ಆಗುವ ಪೂರೈಕೆಯು ನಿರ್ಬಂಧಿತವಾಗಿಯೇ ಇರಲಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಕಚ್ಚಾ ತೈಲಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಲಿದ್ದು, ಅಸ್ಥಿರ ಬೆಲೆಗಳು ವಿವಿಧ ದೇಶಗಳ ಆರ್ಥಿಕತೆಯ ಮೇಲೆ ವ್ಯಾಪಕವಾದ ನಕಾರಾತ್ಮಕ ಪರಿಣಾಮ ಬೀರಲಿವೆ. ಇದೇ ಪರಿಸ್ಥಿತಿ ಮುಂದುವರಿದರೆ, ಈ ವರ್ಷದ ಬಹುಪಾಲು ಅವಧಿಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್‌ಗೆ 90 ರಿಂದ 110 ಡಾಲರ್ ವ್ಯಾಪ್ತಿಯಲ್ಲಿ ಇರಬಹುದು ಎಂದು ಮೂಡೀಸ್ ರೇಟಿಂಗ್ಸ್ ಅಂದಾಜಿಸಿದೆ.