ಮಂಗಳೂರು: ತಮಿಳುನಾಡು ವಿಧಾನಸಭೆಯಲ್ಲಿ ಸನಾತನ ಧರ್ಮದ ವಿರುದ್ಧ ಅವಹೇಳನಕಾರಿ ಮತ್ತು ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ನಡವಳಿಕೆಯನ್ನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ತೀವ್ರವಾಗಿ ಖಂಡಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್, "ರಾಜಕೀಯ ಲಾಭಕ್ಕಾಗಿ ಕೋಟ್ಯಂತರ ಜನರ ನಂಬಿಕೆಯಾಗಿರುವ ಸನಾತನ ಧರ್ಮದ ನಿರ್ಮೂಲನೆಯ ಬಗ್ಗೆ ಮಾತನಾಡುವುದು ಸಂವಿಧಾನ ವಿರೋಧಿ ನಡವಳಿಕೆಯಾಗಿದೆ. ಸದನದ ಗೌರವ ಕಾಪಾಡುವ ದೃಷ್ಟಿಯಿಂದ ಸನಾತನ ಧರ್ಮದ ವಿರುದ್ಧದ ಈ ವಿಷಪೂರಿತ ಮಾತುಗಳನ್ನು ವಿಧಾನಸಭೆಯ ಅಧಿಕೃತ ನಡಾವಳಿಗಳಿಂದ ಕೂಡಲೇ ತೆಗೆದುಹಾಕಬೇಕು," ಎಂದು ತಮಿಳುನಾಡು ಸರ್ಕಾರವನ್ನು ಆಗ್ರಹಿಸಿದ್ದಾರೆ.
"ಸನಾತನ ಧರ್ಮವು ಕೇವಲ ಒಂದು ಆಚರಣೆಯಲ್ಲ, ಅದು ಈ ದೇಶದ ಜೀವಾಳ ಮತ್ತು ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಇತಿಹಾಸದುದ್ದಕ್ಕೂ ಸನಾತನ ಧರ್ಮವನ್ನು ಅಳಿಸಲು ಹೊರಟ ಎಷ್ಟೋ ಶಕ್ತಿಗಳು ತಾವೇ ಅಳಿದು ಹೋಗಿವೆ. ಸನಾತನ ಧರ್ಮವು ಸೂರ್ಯನಂತೆ ಶಾಶ್ವತ ಮತ್ತು ಪ್ರಬಲವಾಗಿದ್ದು, ಇಂತಹ ಕ್ಷುಲ್ಲಕ ಹೇಳಿಕೆಗಳಿಂದ ಅದನ್ನು ಕುಗ್ಗಿಸಲು ಸಾಧ್ಯವಿಲ್ಲ," ಎಂದು ಅವರು ಪ್ರತಿಪಾದಿಸಿದರು.
ಕೇವಲ ಒಂದು ವರ್ಗದ ಮತಗಳ ಓಲೈಕೆಗಾಗಿ ಹಾಗೂ ತುಷ್ಟೀಕರಣ ರಾಜಕಾರಣಕ್ಕಾಗಿ ಸನಾತನ ಧರ್ಮದ ವಿರುದ್ಧ ವಿಷ ಕಾರುವುದು ಹೇಡಿತನದ ಲಕ್ಷಣವಾಗಿದೆ. ಉದಯನಿಧಿ ಅವರ ಹೇಳಿಕೆಗಳು ಕೇವಲ ರಾಜಕೀಯ ಪ್ರೇರಿತವಲ್ಲ, ಅದು ಅವರ ಹಿಂದೂ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಶರಣ್ ಪಂಪುವೆಲ್ ಕಿಡಿಕಾರಿದ್ದಾರೆ.
ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ವರ್ತಿಸುತ್ತಿರುವ ಇಂತಹ ನಾಯಕರ ವಿರುದ್ಧ ಸಾರ್ವಜನಿಕರು ಜಾಗೃತರಾಗಬೇಕು ಎಂದು ಅವರು ಕರೆ ನೀಡಿದ್ದಾರೆ.