image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಪರೇಷನ್ ಸಿಂಧೂರ: ಪಾಕಿಸ್ತಾನಕ್ಕೆ ತಾಂತ್ರಿಕ ನೆರವು ನೀಡಿದ್ದನ್ನು ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡ ಚೀನಾ

ಆಪರೇಷನ್ ಸಿಂಧೂರ: ಪಾಕಿಸ್ತಾನಕ್ಕೆ ತಾಂತ್ರಿಕ ನೆರವು ನೀಡಿದ್ದನ್ನು ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡ ಚೀನಾ

ನವದೆಹಲಿ : ಗುಪ್ತಚರ ಮತ್ತು ರಕ್ಷಣಾ ವಲಯದಲ್ಲಿ ಸಂಚಲನ ಮೂಡಿಸಿರುವ ಮಹತ್ವದ ಬೆಳವಣಿಗೆಯೊಂದರಲ್ಲಿ, ಕಳೆದ ವರ್ಷ ಭಾರತ ನಡೆಸಿದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ ವೇಳೆ ಪಾಕಿಸ್ತಾನಕ್ಕೆ ತಾಂತ್ರಿಕ ಬೆಂಬಲ ನೀಡಿದ್ದನ್ನು ಚೀನಾ ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿದೆ. ಚೀನಾದ ಸರ್ಕಾರಿ ಸ್ವಾಮ್ಯದ 'ಏವಿಯೇಷನ್ ಇಂಡಸ್ಟ್ರಿ ಕಾರ್ಪೊರೇಷನ್ ಆಫ್ ಚೀನಾ' (AVIC) ಸಂಸ್ಥೆಯ ಎಂಜಿನಿಯರ್‌ಗಳು ಆ ಸಮಯದಲ್ಲಿ ಪಾಕಿಸ್ತಾನದ ಸೇನಾ ನೆಲೆಗಳಲ್ಲೇ ಮೊಕ್ಕಾಂ ಹೂಡಿ ಪಾಕ್ ಸೇನೆಗೆ ನೆರವಾಗಿದ್ದರು ಎಂಬ ಸ್ಫೋಟಕ ಮಾಹಿತಿ ಈಗ ಹೊರಬಿದ್ದಿದೆ. ಕಳೆದ ವರ್ಷ ಪಹಲ್ಗಾಮ್‌ನಲ್ಲಿ ನಡೆದಿದ್ದ ಭೀಕರ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಮೇ 7ರಂದು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ತಾಣಗಳ ಮೇಲೆ 'ಆಪರೇಷನ್ ಸಿಂಧೂರ' ಹೆಸರಿನಲ್ಲಿ ಬೃಹತ್ ವೈಮಾನಿಕ ದಾಳಿ ನಡೆಸಿತ್ತು. ಈ ಸಂಘರ್ಷದ ವೇಳೆ ಭಾರತದ ವಿರುದ್ಧ ಪಾಕಿಸ್ತಾನವು ಚೀನಾ ನಿರ್ಮಿತ 'ಜೆ-10ಸಿಇ' (J-10CE) ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಬಳಸಿತ್ತು ಎಂದು ವರದಿಯಾಗಿದೆ.

​ಈ ಕುರಿತು ಮಾಹಿತಿ ಹಂಚಿಕೊಂಡಿರುವ ಚೀನಾದ ಎಂಜಿನಿಯರ್ ಜಾಂಗ್ ಹೆಂಗ್, ರಣಭೂಮಿಯಲ್ಲಿ ಯುದ್ಧ ವಿಮಾನಗಳ ಅಬ್ಬರ ಮತ್ತು ಸತತವಾಗಿ ಮೊಳಗುತ್ತಿದ್ದ ವೈಮಾನಿಕ ದಾಳಿಯ ಸೈರನ್‌ಗಳ ನಡುವೆ ತಾವು ಪಾಕ್ ಸೇನೆಗೆ ಬೆನ್ನೆಲುಬಾಗಿ ನಿಂತಿದ್ದನ್ನು ಸ್ಮರಿಸಿಕೊಂಡಿದ್ದಾರೆ. ಕಾರ್ಯಾಚರಣೆಯ ಸಂದರ್ಭದಲ್ಲಿ ಚೀನಾ ನಿರ್ಮಿತ ಯುದ್ಧ ವಿಮಾನಗಳ ನಿರ್ವಹಣೆ ಮತ್ತು ತಾಂತ್ರಿಕ ಸವಾಲುಗಳನ್ನು ಎದುರಿಸಲು ಚೀನಾ ಎಂಜಿನಿಯರ್‌ಗಳ ತಂಡ ಪಾಕಿಸ್ತಾನಕ್ಕೆ ಸಕ್ರಿಯವಾಗಿ ಸಹಾಯ ಮಾಡಿರುವುದು ಈ ಮೂಲಕ ದೃಢಪಟ್ಟಿದೆ. ಭಾರತದ ಪ್ರಬಲ ದಾಳಿಗೆ ಪಾಕಿಸ್ತಾನ ತತ್ತರಿಸಿದ್ದ ಸಂದರ್ಭದಲ್ಲಿ ಚೀನಾ ಈ ರೀತಿಯಾಗಿ ನೇರ ಹಸ್ತಕ್ಷೇಪ ಮಾಡಿರುವುದು ಉಭಯ ದೇಶಗಳ ನಡುವಿನ ಮಿಲಿಟರಿ ಬಾಂಧವ್ಯವನ್ನು ಎತ್ತಿ ತೋರಿಸುವುದಲ್ಲದೆ, ದಕ್ಷಿಣ ಏಷ್ಯಾದ ಭೌಗೋಳಿಕ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಇದುವರೆಗೆ ಈ ಬಗ್ಗೆ ಮೌನ ತಾಳಿದ್ದ ಚೀನಾ, ಈಗ ಅಧಿಕೃತವಾಗಿ ತನ್ನ ಎಂಜಿನಿಯರ್‌ಗಳ ಪಾತ್ರವನ್ನು ಒಪ್ಪಿಕೊಂಡಿರುವುದು ಭಾರತದ ರಕ್ಷಣಾ ನೀತಿ ಹಾಗೂ ಭವಿಷ್ಯದ ಕಾರ್ಯತಂತ್ರಗಳ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿದೆ.

Category
ಕರಾವಳಿ ತರಂಗಿಣಿ