image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸುಲ್ತಾನ್ ಬತ್ತೇರಿ-ತಣ್ಣೀರುಬಾವಿ ಸಂಪರ್ಕದ ಬೋ ಸ್ಟ್ರಿಂಗ್ ಸೇತುವೆ ಸೆಪ್ಟೆಂಬರ್ ವೇಳೆಗೆ ಪೂರ್ಣ - ದಿನೇಶ್ ಗುಂಡೂರಾವ್

ಸುಲ್ತಾನ್ ಬತ್ತೇರಿ-ತಣ್ಣೀರುಬಾವಿ ಸಂಪರ್ಕದ ಬೋ ಸ್ಟ್ರಿಂಗ್ ಸೇತುವೆ ಸೆಪ್ಟೆಂಬರ್ ವೇಳೆಗೆ ಪೂರ್ಣ - ದಿನೇಶ್ ಗುಂಡೂರಾವ್

ಮಂಗಳೂರು: ನಗರದ ಪ್ರಮುಖ ಪ್ರವಾಸಿ ತಾಣಗಳಾದ ಸುಲ್ತಾನ್ ಬತ್ತೇರಿ ಮತ್ತು ತಣ್ಣೀರುಬಾವಿಯನ್ನು ಸಂಪರ್ಕಿಸುವ ₹64 ಕೋಟಿ ವೆಚ್ಚದ ಅತ್ಯಾಧುನಿಕ 'ಬೋ ಸ್ಟ್ರಿಂಗ್' (Bowstring) ಸೇತುವೆ ಕಾಮಗಾರಿ ಈ ವರ್ಷದ ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಈ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಯೋಜನೆಯ ಪ್ರಗತಿಯ ಕುರಿತು ಮಾಹಿತಿ ನೀಡಿದರು.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ರಾಜ್ಯದ ಮೊದಲ ಬೋ ಸ್ಟ್ರಿಂಗ್ ಮಾದರಿಯ ವಾಹನ ಸಂಚಾರ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಸೇತುವೆಯು 285 ಮೀಟರ್ ಉದ್ದವಿದೆ. ರಾಷ್ಟ್ರೀಯ ಜಲಮಾರ್ಗ 43ರ ನಿಯಮಾವಳಿಯಂತೆ ಹೈ ಟೈಡ್ ಲೈನ್‌ನಿಂದ 10 ಮೀಟರ್ ಎತ್ತರದಲ್ಲಿ ಇದನ್ನು ನಿರ್ಮಿಸಲಾಗುತ್ತಿದ್ದು, ನದಿ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ 100 ಮೀಟರ್ ನಾವಿಗೇಶನ್ ಸ್ಪಾನ್ ಒದಗಿಸಲಾಗಿದೆ. ಈ ಸೇತುವೆ ಕಾರ್ಯಾರಂಭ ಮಾಡುವುದರಿಂದ ಪ್ರಸ್ತುತ ದೋಣಿ ಮೂಲಕ ಅಥವಾ ಕೂಳೂರು ರಸ್ತೆಯಾಗಿ 35 ನಿಮಿಷ ಸುತ್ತು ಬಳಸುವ ಬೆಂಗ್ರೆ ನಿವಾಸಿಗಳ ಪ್ರಯಾಣದ ಸಮಯ ಕೇವಲ 8 ರಿಂದ 10 ನಿಮಿಷಕ್ಕೆ ಇಳಿಕೆಯಾಗಲಿದೆ.ಈ ಯೋಜನೆಯಿಂದ ಬೆಂಗ್ರೆ ಪ್ರದೇಶದ ಸುಮಾರು 4,000 ಕುಟುಂಬಗಳಿಗೆ ನೇರ ಅನುಕೂಲವಾಗುವುದಲ್ಲದೆ, ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆದ ತಣ್ಣೀರುಬಾವಿ ಬೀಚ್‌ಗೆ ಎರಡನೇ ಸಂಪರ್ಕ ರಸ್ತೆಯಾಗಿ ಪ್ರವಾಸೋದ್ಯಮಕ್ಕೆ ದೊಡ್ಡ ಮಟ್ಟದ ಉತ್ತೇಜನ ಸಿಗಲಿದೆ.

ಪರಿಶೀಲನೆಯ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ. ಸಂತೋಷ್ ಕುಮಾರ್ ಹಾಗೂ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ