image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕರಾವಳಿ ಮಲೆನಾಡಿನ ಬೇಸಿಗೆಯ ಅತಿಥಿ: ಕಾಡು ಮಾವಿನಹಣ್ಣಿನ ಘಮದಲ್ಲಿ ಮಿಂದೆದ್ದ 'ಚಂಡ್ರುಪುಳಿ'

ಕರಾವಳಿ ಮಲೆನಾಡಿನ ಬೇಸಿಗೆಯ ಅತಿಥಿ: ಕಾಡು ಮಾವಿನಹಣ್ಣಿನ ಘಮದಲ್ಲಿ ಮಿಂದೆದ್ದ 'ಚಂಡ್ರುಪುಳಿ'

ತುಳುನಾಡಿನಲ್ಲಿ ಬೇಸಿಗೆಯ ದಿನಗಳೆಂದರೆ ಅದು ಕೇವಲ ಬಿಸಿಲಲ್ಲ, ಬದಲಾಗಿ ಮಾವಿನಹಣ್ಣುಗಳ ಸುಮಧುರ ಘಮ ಮತ್ತು ಹಳೆಯ ನೆನಪುಗಳ ಸುಗ್ಗಿ. ಇಲ್ಲಿನ ಪ್ರತಿ ಮನೆಯ ಅಂಗಳದಲ್ಲೂ ಮಾವಿನ ಘಮಲು ಪಸರಿಸುವ ಹೊತ್ತಿನಲ್ಲಿ, ಕರಾವಳಿ ಮತ್ತು ಪಶ್ಚಿಮ ಘಟ್ಟದ ತಪ್ಪಲಿನ ಸಾಂಪ್ರದಾಯಿಕ ಅಡುಗೆಗಳಲ್ಲಿ ಅತ್ಯಂತ ವಿಶಿಷ್ಟವಾದ 'ಕುಕ್ಕು ಚಂಡ್ರುಪುಳಿ' ಪ್ರತಿಯೊಬ್ಬರ ಬಾಯಲ್ಲೂ ನೀರೂರಿಸುತ್ತದೆ. ಇದನ್ನು ಕೆಲವೆಡೆ 'ಮಾವಿನಹಣ್ಣಿನ ಸಾಸಿವೆ' ಅಥವಾ 'ಗೊಜ್ಜು' ಎಂದು ಕರೆದರೂ, ತುಳುನಾಡಿನ ಜನಪದೀಯ ಶೈಲಿಯ 'ಚಂಡ್ರುಪುಳಿ' ಎನ್ನುವ ಹೆಸರಿನಲ್ಲೇ ಒಂದು ಆಪ್ತತೆಯಿದೆ.

ಈ ಖಾದ್ಯದ ನಿಜವಾದ ರುಚಿ ಅಡಗಿರುವುದು ಕಸಿ ಮಾವಿನ ಹಣ್ಣಿನಲ್ಲಲ್ಲ, ಬದಲಾಗಿ ಕಾಡಿನ ಸೊಬಗನ್ನು ಹೊತ್ತು ತರುವ ಸಣ್ಣ ಗಾತ್ರದ 'ಪುಳಿ ಕುಕ್ಕು' ಅಥವಾ ಕಾಡು ಮಾವಿನಹಣ್ಣಿನಲ್ಲಿ. ಇಂದಿನ ಮಾರುಕಟ್ಟೆಯಲ್ಲಿ ಹೈಬ್ರಿಡ್ ಅಥವಾ ಕಸಿ ಮಾವಿನ ಹಣ್ಣುಗಳು ಸುಲಭವಾಗಿ ಸಿಕ್ಕರೂ, ಈ ಚಂಡ್ರುಪುಳಿಯ ಅಸಲಿ ಸವಿಗೆ ನಾರು ಹೆಚ್ಚಿರುವ, ಗಾತ್ರದಲ್ಲಿ ಚಿಕ್ಕದಾದ ಕಾಡು ಮಾವಿನಹಣ್ಣೇ ಶ್ರೇಷ್ಠ. ಹಿಂದೆ ಹಿರಿಯರು ಮನೆಯಲ್ಲೇ ಬೆಳೆದ ಮಾವಿನಹಣ್ಣುಗಳನ್ನು ಬಳಸಿ, ಯಾವುದೇ ಕೃತಕ ಮಸಾಲೆಗಳಿಲ್ಲದೆ ನೈಸರ್ಗಿಕವಾಗಿ ಈ ಅಡುಗೆಯನ್ನು ಮಾಡುತ್ತಿದ್ದರು.

ಇದು ಕೇವಲ ಆಹಾರವಲ್ಲ, ಕರಾವಳಿಯ ಜನರ ಭಾವನೆ ಮತ್ತು ನೆನಪುಗಳೊಂದಿಗೆ ಬೆಸೆದುಕೊಂಡಿರುವ ಅನನ್ಯ ರುಚಿ. ಆರೋಗ್ಯದ ದೃಷ್ಟಿಯಿಂದಲೂ ಕಸಿ ಹಣ್ಣುಗಳಿಗಿಂತ ಕಾಡು ಮಾವಿನಹಣ್ಣು ಅತ್ಯಂತ ಉತ್ತಮ. ಇವುಗಳಲ್ಲಿ ಯಾವುದೇ ರಾಸಾಯನಿಕಗಳ ಕಲಬೆರಕೆ ಇರುವುದಿಲ್ಲ ಮತ್ತು ನೈಸರ್ಗಿಕ ಪೋಷಕಾಂಶಗಳು ಸಮೃದ್ಧವಾಗಿರುತ್ತವೆ.
ಚಂಡ್ರುಪುಳಿಯ ವಿಶೇಷತೆಯಿರುವುದು ಅದರ ಸಿಹಿ-ಹುಳಿ-ಖಾರಗಳ ಅದ್ಭುತ ಸಮತೋಲನದಲ್ಲಿ. ಇಲ್ಲಿ ಹಸಿ ಸಾಸಿವೆಯನ್ನು ರುಬ್ಬಲು ಬಳಸುವುದರಿಂದ ಬರುವ 'ಘಾಟು' (Aroma), ಬೆಲ್ಲದ ಸಿಹಿ, ಹಣ್ಣಿನ ಹುಳಿ ಮತ್ತು ಒಣಮೆಣಸಿನ ಖಾರ — ಈ ನಾಲ್ಕೂ ಮೇಳೈಸಿದಾಗ ಮಾತ್ರ ಚಂಡ್ರುಪುಳಿ ಪರಿಪೂರ್ಣವಾಗುತ್ತದೆ.

ಚಂಡ್ರುಪುಳಿ ಮಾಡುವ ವಿಧಾನವೂ ಅಷ್ಟೇ ಸರಳ ಹಾಗೂ ಸಹಜ. ಅಗತ್ಯವಿರುವ ಕಾಡು ಮಾವಿನಹಣ್ಣುಗಳನ್ನು ಮೊದಲು ತೊಳೆದು, ಸಿಪ್ಪೆ ತೆಗೆದು (ಸ್ವಲ್ಪ ಸಿಪ್ಪೆಯನ್ನು ಸೇರಿಸುವುದು ವಾಡಿಕೆ), ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ ಸೇರಿಸಿ ಚೆನ್ನಾಗಿ ಕಿವಿಚಬೇಕು. ಮತ್ತೊಂದೆಡೆ, ತೆಂಗಿನ ತುರಿ, ಹುರಿದ ಒಣಮೆಣಸು ಮತ್ತು ಹಸಿ ಸಾಸಿವೆಯನ್ನು ನುಣ್ಣಗೆ ರುಬ್ಬಿಕೊಂಡು, ಆ ಮಸಾಲೆಯನ್ನು ಮಾವಿನ ರಸದೊಂದಿಗೆ ಮಿಶ್ರಣ ಮಾಡಬೇಕು. ಕೊನೆಯಲ್ಲಿ ತೆಂಗಿನ ಎಣ್ಣೆಯೊಂದಿಗೆ ಸಾಸಿವೆ, ಕರಿಬೇವು ಮತ್ತು ಕೆಂಪು ಮೆಣಸಿನ ಒಗ್ಗರಣೆ ಕೊಟ್ಟರೆ ಚಂಡ್ರುಪುಳಿ ಸಿದ್ಧ.

ಆರೋಗ್ಯದ ಹಿತದೃಷ್ಟಿಯಿಂದ ನೋಡಿದರೆ, ಬೇಸಿಗೆಯ ಧಗೆಗೆ ಮಾವಿನಹಣ್ಣು ದೇಹಕ್ಕೆ ತಂಪು ನೀಡುತ್ತದೆ. ಹಸಿ ಸಾಸಿವೆಯ ಬಳಕೆಯು ಜೀರ್ಣಶಕ್ತಿಯನ್ನು ವೃದ್ಧಿಸುವುದಲ್ಲದೆ, ನೈಸರ್ಗಿಕವಾಗಿ ಸಿಗುವ ಕಾಡು ಮಾವಿನಹಣ್ಣುಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಇಂದಿನ ಬದಲಾದ ಜೀವನಶೈಲಿಯಲ್ಲಿ ಅನೇಕ ಸಾಂಪ್ರದಾಯಿಕ ಅಡುಗೆಗಳು ಮರೆಯಾಗುತ್ತಿದ್ದರೂ, ತುಳುನಾಡಿನ ಮನೆಗಳಲ್ಲಿ ಇಂದಿಗೂ ಮಾವಿನ ಸೀಸನ್ ಬಂತೆಂದರೆ ಚಂಡ್ರುಪುಳಿಯದ್ದೇ ದರ್ಬಾರ್. ಬಿಸಿಬಿಸಿ ಅನ್ನದ ಜೊತೆಗೆ ತಣ್ಣಗಿನ ಚಂಡ್ರುಪುಳಿಯನ್ನು ಕಲಸಿ, ಆ ಮಾವಿನ ಅಂಡಿಯನ್ನು (ಕೊರಂಟ್) ಚೀಪುತ್ತಾ ಉಣ್ಣುವ ಸುಖವೇ ಬೇರೆ. ಕರಾವಳಿಯ ಈ ವಿಶಿಷ್ಟ ರುಚಿ ಮತ್ತು ಕಾಡು ಮಾವಿನಹಣ್ಣಿನ ಮಹತ್ವ ಮುಂದಿನ ಪೀಳಿಗೆಗೂ ಹಸ್ತಾಂತರವಾಗಬೇಕಾದ ನಮ್ಮ ಅಮೂಲ್ಯ ಆಹಾರ ಪರಂಪರೆ.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ