image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಕ್ಕಳ ಬೇಸಿಗೆ ಶಿಬಿರಗಳು: ಕೇವಲ ಆಟವೋ ಅಥವಾ ಜೀವನ ಪಾಠವೋ?

ಮಕ್ಕಳ ಬೇಸಿಗೆ ಶಿಬಿರಗಳು: ಕೇವಲ ಆಟವೋ ಅಥವಾ ಜೀವನ ಪಾಠವೋ?

ಶಾಲೆಯ ವಾರ್ಷಿಕ ಪರೀಕ್ಷೆಗಳು ಮುಗಿದು ಫಲಿತಾಂಶ ಹೊರಬೀಳುತ್ತಿದ್ದಂತೆ ಮಕ್ಕಳ ಮುಖದಲ್ಲಿ ರಜೆಯ ಸಂಭ್ರಮ ಮನೆಮಾಡುತ್ತದೆ. ಆಟ-ಪಾಟ, ಅಲೆದಾಟಗಳಿಗೆ ಮುಕ್ತ ಅವಕಾಶ ಸಿಗುವ ಕಾಲವಿದು. ಆದರೆ ಇಂದಿನ ಆಧುನಿಕ ಯುಗದಲ್ಲಿ ಈ 'ರಜೆ' ಎಂಬುದು ಕೇವಲ ವಿಶ್ರಾಂತಿಯಾಗಿ ಉಳಿದಿಲ್ಲ; ಅದು 'ಬೇಸಿಗೆ ಶಿಬಿರ'ಗಳ (Summer Camps) ಅಬ್ಬರದ ನಡುವೆ ಹೊಸ ರೂಪ ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಒಂದು ಪ್ರಶ್ನೆ ಕಾಡುವುದು ಸಹಜ. ಈ ಶಿಬಿರಗಳು ಕೇವಲ ಮಕ್ಕಳನ್ನು ಬ್ಯುಸಿ ಇಡುವ ತಂತ್ರವೋ ಅಥವಾ ಜೀವನದ ಪಾಠಗಳನ್ನು ಕಲಿಸುವ ವೇದಿಕೆಯೋ?
ಅಜ್ಜಿ ಮನೆಯೇ ಅಂದಿನ 'ಸಮ್ಮರ್ ಕ್ಯಾಂಪ್'

ಹಿಂದಿನ ಕಾಲದ ಬೇಸಿಗೆಯ ದಿನಗಳನ್ನು ನೆನಪಿಸಿಕೊಂಡರೆ ಮೊದಲು ನೆನಪಿಗೆ ಬರುವುದು 'ಅಜ್ಜಿ ಮನೆ'. ಅಂದು ಪೋಷಕರು ಮಕ್ಕಳಿಗಾಗಿ ಪ್ರತ್ಯೇಕ ಶಿಬಿರಗಳನ್ನು ಹುಡುಕುತ್ತಿರಲಿಲ್ಲ. ಶಾಲೆಗೆ ರಜೆ ಬಿದ್ದ ತಕ್ಷಣ ಮಕ್ಕಳು ತಮ್ಮ ಬ್ಯಾಗುಗಳನ್ನು ಕಟ್ಟಿಕೊಂಡು ಅಜ್ಜ-ಅಜ್ಜಿಯ ಮನೆಗೆ ಓಡುತ್ತಿದ್ದರು. ಅಲ್ಲಿ ಯಾವುದೇ ಶುಲ್ಕವಿಲ್ಲದೆ, ಯಾವುದೇ ವೇಳಾಪಟ್ಟಿಯಿಲ್ಲದೆ ಅದ್ಭುತ ಶಿಬಿರ ನಡೆಯುತ್ತಿತ್ತು.
ಮರದ ನೆರಳಿನಲ್ಲಿ ಕುಳಿತು ಅಜ್ಜಿ ಹೇಳುತ್ತಿದ್ದ ನೀತಿ ಕಥೆಗಳು, ಅಜ್ಜನ ಜೊತೆ ತೋಟಕ್ಕೆ ಹೋಗಿ ಗಿಡ-ಮರಗಳ ಪರಿಚಯ ಮಾಡಿಕೊಳ್ಳುವುದು, ಮಾವ-ಅತ್ತೆಯರ ಮಕ್ಕಳೊಂದಿಗೆ ಕೆಸರಲ್ಲಿ ಆಡುವುದು—ಇವೆಲ್ಲವೂ ಜೀವನದ ಪಾಠಗಳೇ ಆಗಿದ್ದವು. ಅಲ್ಲಿ ಸಂಬಂಧಗಳ ಮೌಲ್ಯ, ಪ್ರಕೃತಿಯ ಜೊತೆಗಿನ ಒಡನಾಟ ಮತ್ತು ಕಥೆಗಳ ಮೂಲಕ ಸಂಸ್ಕಾರ ಸಹಜವಾಗಿಯೇ ದೊರೆಯುತ್ತಿತ್ತು. ಅದು ಪ್ರೀತಿಯ ಶಿಬಿರವಾಗಿತ್ತು.

ಸಮಯವಿಲ್ಲದ ಪೋಷಕರು ಮತ್ತು ಬದಲಾದ ಜೀವನಶೈಲಿ

ಆದರೆ ಇಂದು ಕಾಲ ಬದಲಾಗಿದೆ. ನಗರ ಜೀವನದ ಜಂಜಾಟದಲ್ಲಿ ಅಜ್ಜಿ ಮನೆಗಳು ದೂರವಾಗಿವೆ ಅಥವಾ ಇದ್ದರೂ ಅಲ್ಲಿಗೆ ಹೋಗುವ ವ್ಯವಧಾನ ಯಾರಿಗೂ ಇಲ್ಲದಂತಾಗಿದೆ. ಇಂದಿನ ಪೋಷಕರು ಇಬ್ಬರೂ ಉದ್ಯೋಗಸ್ಥರಾಗಿರುವುದು ಒಂದು ವಾಸ್ತವ. ಮಕ್ಕಳಿಗೆ ರಜೆ ಇದ್ದರೂ ಪೋಷಕರಿಗೆ ಆಫೀಸಿನಿಂದ ರಜೆ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಮಕ್ಕಳನ್ನು ಮನೆಯಲ್ಲಿ ಒಬ್ಬರೇ ಬಿಟ್ಟು ಹೋಗುವುದು ಅಸಾಧ್ಯ.
ಇದಕ್ಕೊಂದು ಸುಲಭದ ದಾರಿಯಾಗಿ 'ಬೇಸಿಗೆ ಶಿಬಿರ'ಗಳು ಹುಟ್ಟಿಕೊಂಡಿವೆ. ಮಕ್ಕಳನ್ನು ಮನೆಯಲ್ಲಿ ಮೊಬೈಲ್ ಅಥವಾ ಟಿವಿ ಮುಂದೆ ಕುಳ್ಳಿರಿಸುವ ಬದಲು, ಎಲ್ಲೋ ಒಂದು ಕಡೆ ಕಲಿಕೆಯಲ್ಲಿ ತೊಡಗಿಸುವುದು ಉತ್ತಮ ಎಂಬ ನಿರ್ಧಾರಕ್ಕೆ ಪೋಷಕರು ಬರುತ್ತಿದ್ದಾರೆ. ಆದರೆ, ಈ ಶಿಬಿರಗಳು ಕೇವಲ ವ್ಯಾಪಾರೀಕರಣಗೊಳ್ಳುತ್ತಿವೆಯೇ ಎಂಬ ಆತಂಕವೂ ಇದೆ.

ಶಿಬಿರಗಳು ಕೇವಲ ವ್ಯಾಪಾರೀಕರಣವಲ್ಲ, ಕಲಿಕೆಯ ವೇದಿಕೆಯಾಗಬೇಕು

ಸಮರ್ಪಕವಾಗಿ ವಿನ್ಯಾಸಗೊಳಿಸಿದ ಬೇಸಿಗೆ ಶಿಬಿರಗಳು ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಪ್ರಮುಖ ಪಾತ್ರ ವಹಿಸಬೇಕು.

ಶಾಲೆಯಲ್ಲಿ ಕೇವಲ ಪಠ್ಯದ ಬಗ್ಗೆ ಗಮನ ಹರಿಸುವ ಮಕ್ಕಳು, ಶಿಬಿರಗಳಲ್ಲಿ ವಿಭಿನ್ನ ಪರಿಸರದ ಮಕ್ಕಳೊಂದಿಗೆ ಬೆರೆಯುವಂತಾಗಬೇಕು.  ಇದು ಅವರಲ್ಲಿ ಸಹಬಾಳ್ವೆ ಮತ್ತು ನಾಯಕತ್ವ ಗುಣವನ್ನು ಬೆಳೆಸುತ್ತದೆ.

ಚಿತ್ರಕಲೆ, ನೃತ್ಯ, ಯೋಗ, ಮಣ್ಣಿನ ಆಟ (Pottery), ಅಥವಾ ಯಕ್ಷಗಾನದಂತಹ ಕಲೆಗಳನ್ನು ಕಲಿಯಲು ಇದು ಪ್ರಶಸ್ತ ಸಮಯ. ಇವು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ಸಹಕಾರಿ.

ಇಂದಿನ ಮಕ್ಕಳು ಡಿಜಿಟಲ್ ಜಗತ್ತಿಗೆ ಅಂಟಿಕೊಂಡಿದ್ದಾರೆ. ಶಿಬಿರಗಳು ಅವರನ್ನು ಕನಿಷ್ಠ ಕೆಲವು ಗಂಟೆಗಳ ಕಾಲ ಮೊಬೈಲ್ ಪರದೆಯಿಂದ ದೂರವಿಟ್ಟು ದೈಹಿಕ ಶ್ರಮದ ಕಡೆಗೆ ಕರೆದೊಯ್ಯುತ್ತವೆ.

ಮನೆಯ ಸುರಕ್ಷಿತ ವಲಯದಿಂದ ಹೊರಬಂದು ಹೊಸ ಕೆಲಸಗಳನ್ನು ಮಾಡುವಾಗ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ.

ಪೋಷಕರ ಗಮನಕ್ಕೆ ಕೆಲವು ಅಂಶಗಳು

ಶಿಬಿರಗಳಿಗೆ ಸೇರಿಸುವ ಮುನ್ನ ಪೋಷಕರು ಕೆಲವು ವಿಷಯಗಳನ್ನು ಗಮನಿಸಬೇಕು. ಮಗುವಿನ ಆಸಕ್ತಿ ಏನಿದೆ ಎಂಬುದನ್ನು ಮೊದಲು ಅರಿಯಬೇಕು. ತಮಗೆ ಸಮಯವಿಲ್ಲ ಎಂಬ ಕಾರಣಕ್ಕೆ ಮಗುವಿನ ಮೇಲೆ ಕಠಿಣ ವೇಳಾಪಟ್ಟಿಯ ಶಿಬಿರಗಳನ್ನು ಹೇರಬಾರದು. ರಜೆ ಎಂದರೆ ಅದು ಮಗುವಿನ ಮನಸ್ಸಿಗೆ ಸಂತೋಷ ನೀಡುವಂತಿರಬೇಕೇ ಹೊರತು ಮತ್ತೊಂದು 'ಶಾಲೆ'ಯಾಗಬಾರದು.

ಬೇಸಿಗೆ ಶಿಬಿರಗಳು ಇಂದಿನ ಕಾಲದ ಅನಿವಾರ್ಯತೆ ಇರಬಹುದು, ಆದರೆ ಅವುಗಳಲ್ಲಿ ಅಜ್ಜಿ ಮನೆಯಲ್ಲಿದ್ದ ಆ 'ಆತ್ಮೀಯತೆ' ಮತ್ತು 'ಸಹಜತೆ' ಇರಲಿ. ಕೇವಲ ಹಣ ನೀಡಿ ಕೌಶಲ ಕಲಿಯುವ ಬದಲು, ಮಕ್ಕಳು ಸಂಬಂಧಗಳನ್ನು ಪ್ರೀತಿಸುವುದನ್ನು ಮತ್ತು ಪರಿಸರವನ್ನು ಗೌರವಿಸುವುದನ್ನು ಕಲಿಯಲಿ. ಪೋಷಕರು ಎಷ್ಟೇ ಬ್ಯುಸಿ ಇದ್ದರೂ ರಜೆಯ ಕೆಲವು ದಿನಗಳನ್ನಾದರೂ ಮಕ್ಕಳೊಂದಿಗೆ ಕಳೆದು ಅವರಿಗೆ "ನಾವಿದ್ದೇವೆ" ಎಂಬ ಭರವಸೆ ನೀಡುವುದು ಎಲ್ಲ ಶಿಬಿರಗಳಿಗಿಂತ ದೊಡ್ಡದು ಎನ್ನುವುದನ್ನು ಮರೆಯದಿರಿ. 

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ