ಮಂಗಳೂರು: ಇತಿಹಾಸ ಪ್ರಸಿದ್ಧ ಕದ್ರಿ ಮಂಜುನಾಥ ದೇವಸ್ಥಾನವನ್ನು ಗುರಿಯಾಗಿಸಿಕೊಂಡಿದ್ದ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ, ಉಗ್ರ ಮೊಹಮ್ಮದ್ ಶಾರೀಖ್‌ಗೆ ಎನ್‌ಐಎ (NIA) ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿರುವುದು ಸ್ವಾಗತಾರ್ಹ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಐಸಿಸ್ (ISIS) ಸಂಘಟನೆಯಿಂದ ಪ್ರೇರಣೆಗೊಂಡಿದ್ದ ಇಂತಹ ಭಯೋತ್ಪಾದಕರನ್ನು ಘಟನೆ ನಡೆದ ಸಂದರ್ಭದಲ್ಲಿ "ಅಮಾಯಕ", "ಬ್ರದರ್ಸ್" ಹಾಗೂ "ಇದು ಸಣ್ಣ ಘಟನೆ" ಎಂದೆಲ್ಲಾ ಸಮರ್ಥನೆಗೆ ಇಳಿದಿದ್ದ ಕಾಂಗ್ರೆಸ್ಸಿಗರು ಇನ್ನಾದರೂ ತಮ್ಮ ನಿಲುವಿನ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಯೋತ್ಪಾದನೆ ಹಾಗೂ ಭಯೋತ್ಪಾದಕರ ಬಗ್ಗೆ ಮೃದು ಧೋರಣೆ ತೋರುವ ಕಾಂಗ್ರೆಸ್ಸಿಗರಿಂದ ರಾಜ್ಯದ ರಕ್ಷಣೆ ಎಷ್ಟರಮಟ್ಟಿಗೆ ಸಾಧ್ಯ ಎಂಬ ಪ್ರಶ್ನೆ ಈಗ ಜನರಲ್ಲಿ ಮೂಡುವುದು ಸಹಜವಾಗಿದೆ ಎಂದು ಅವರು ಹೇಳಿದರು.
ಮಾನ್ಯ ನ್ಯಾಯಾಲಯವು ನೀಡಿರುವ ಈ ತೀರ್ಪು ಶಾರೀಖ್‌ನಂತೆ ಭಯೋತ್ಪಾದನೆಯ ಹಾದಿ ಹಿಡಿಯುವ ಎಲ್ಲಾ ದೇಶದ್ರೋಹಿಗಳಿಗೆ ಎಂದಿಗೂ ಮರೆಯಲಾಗದ ಪಾಠವಾಗಲಿ. ಅಂದು ಈ ದುರ್ಘಟನೆಯಲ್ಲಿ ಗಾಯಗೊಂಡಿದ್ದ ಅಮಾಯಕ ಆಟೋ ಚಾಲಕ ಪುರುಷೋತ್ತಮ್ ಪೂಜಾರಿಯವರಿಗೆ ಅಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 5 ಲಕ್ಷ ರೂಪಾಯಿ ಪರಿಹಾರ ಹಾಗೂ ಹೊಸ ಆಟೋ ರಿಕ್ಷಾವನ್ನು ಒದಗಿಸಿ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದು ಒಂದು ಹಂತದ ನ್ಯಾಯವಾದರೆ, ಇಂದಿನ ನ್ಯಾಯಾಲಯದ ತೀರ್ಪು ಮತ್ತೊಂದು ಹಂತದ ನ್ಯಾಯ ದೊರಕಿಸಿಕೊಟ್ಟಂತಾಗಿದೆ ಎಂದು ಶಾಸಕ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.