image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕರ್ನಾಟಕದಲ್ಲಿ ಸುಡುತ್ತಿರುವ ಬಿಸಿಲು: ಉತ್ತರ ಕರ್ನಾಟಕಕ್ಕೆ ರೆಡ್ ಅಲರ್ಟ್: ಕರಾವಳಿಯಲ್ಲಿ ಹೆಚ್ಚಿದ ಉರಿಸೆಖೆ!

ಕರ್ನಾಟಕದಲ್ಲಿ ಸುಡುತ್ತಿರುವ ಬಿಸಿಲು: ಉತ್ತರ ಕರ್ನಾಟಕಕ್ಕೆ ರೆಡ್ ಅಲರ್ಟ್: ಕರಾವಳಿಯಲ್ಲಿ ಹೆಚ್ಚಿದ ಉರಿಸೆಖೆ!

ಬೆಂಗಳೂರು: ರಾಜ್ಯದಲ್ಲಿ ಬಿಸಿಲ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದು, ಕರುನಾಡು ಅಕ್ಷರಶಃ ಕೆಂಡದಂತಾಗುತ್ತಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಇಂದಿನ 'ದೈನಂದಿನ ಶಾಖದ ಅಪಾಯದ ಬುಲೆಟಿನ್' ಬಿಡುಗಡೆ ಮಾಡಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ತೀವ್ರತರವಾದ ಶಾಖದ ಅಲೆ (Heatwave) ಮುನ್ಸೂಚನೆ ನೀಡಿದೆ.
ಉತ್ತರ ಕರ್ನಾಟಕಕ್ಕೆ ಸೂರ್ಯನ ಬಿಸಿ: 44 ಡಿಗ್ರಿ ದಾಟಿದ ತಾಪಮಾನ

ರಾಜ್ಯದ ಉತ್ತರ ಭಾಗದ ಜಿಲ್ಲೆಗಳಲ್ಲಿ ಸೂರ್ಯನ ಪ್ರತಾಪ ಗರಿಷ್ಠ ಮಟ್ಟಕ್ಕೆ ತಲುಪಿದೆ. ಪ್ರಮುಖವಾಗಿ ಬೀದರ್ ಜಿಲ್ಲೆಯ ಔರಾದ್, ಕಮಲನಗರ ಮತ್ತು ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕುಗಳಲ್ಲಿ ತಾಪಮಾನವು 44°C ಗಿಂತಲೂ ಹೆಚ್ಚು ದಾಖಲಾಗಿದ್ದು, ಈ ಭಾಗಗಳಿಗೆ 'ಹೈ ಅಲರ್ಟ್' (ಕೆಂಪು ವಲಯ) ಘೋಷಿಸಲಾಗಿದೆ.
ಅಲ್ಲದೆ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಹಲವು ಭಾಗಗಳಲ್ಲಿ 42°C ಗಿಂತ ಹೆಚ್ಚಿನ ತಾಪಮಾನ ದಾಖಲಾಗುತ್ತಿದ್ದು, ಸಾರ್ವಜನಿಕರು ಮಧ್ಯಾಹ್ನದ ವೇಳೆ ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಲಾಗಿದೆ.

ದಕ್ಷಿಣ ಕನ್ನಡದ ಸ್ಥಿತಿ ಹೇಗಿದೆ?

ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ತಾಪಮಾನವು 36°C ನಿಂದ 38°C ಆಸುಪಾಸಿನಲ್ಲಿದ್ದರೂ, ತೇವಾಂಶದ (Humidity) ಪ್ರಮಾಣ 82% ರಷ್ಟು ಹೆಚ್ಚಿರುವುದರಿಂದ ಸಾರ್ವಜನಿಕರು ಅತಿಯಾದ ಉರಿಸೆಖೆಯಿಂದ ಹೈರಾಣಾಗಿದ್ದಾರೆ. ಕಡಬ ಮತ್ತು ಪುತ್ತೂರು  ತಾಲೂಕುಗಳಲ್ಲಿ ಜಿಲ್ಲೆಯಲ್ಲೇ ಹೆಚ್ಚಿನ ತಾಪಮಾನ ದಾಖಲಾಗಿದೆ.

ಮುನ್ಸೂಚನೆ:

ಮುಂದಿನ 7 ದಿನಗಳ ಕಾಲ ಮಂಗಳೂರು, ಉಳ್ಳಾಲ ಮತ್ತು ಸುಳ್ಯ ಭಾಗಗಳಲ್ಲಿ ಅಪಾಯ ಕಡಿಮೆ ಇದ್ದರೂ, ಕಡಬ, ಮೂಡುಬಿದಿರೆ ಮತ್ತು ಬಂಟ್ವಾಳ ತಾಲೂಕುಗಳಲ್ಲಿ ಮೇ 1ರವರೆಗೆ 'ಸಾಧಾರಣ ಅಪಾಯ' (Moderate Risk) ಇರಲಿದೆ ಎಂದು ವರದಿ ತಿಳಿಸಿದೆ.


ಮುನ್ನೆಚ್ಚರಿಕೆ ಕ್ರಮಗಳು:

ಮುಂದಿನ ಮೂರು ದಿನಗಳ ಕಾಲ (ಏಪ್ರಿಲ್ 28-30) ರಾಜ್ಯದ ಹಲವೆಡೆ ಶಾಖದ ಅಲೆ ಮುಂದುವರಿಯಲಿದ್ದು, ಸಾರ್ವಜನಿಕರು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ:
 1. ಅತಿಯಾದ ನೀರು ಮತ್ತು ಹಣ್ಣಿನ ರಸವನ್ನು ಸೇವಿಸಿ.
 2. ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆಯವರೆಗೆ ನೇರ ಸೂರ್ಯನ ಬೆಳಕಿಗೆ ಹೋಗುವುದನ್ನು ತಪ್ಪಿಸಿ.
 3. ತೆಳುವಾದ ಹತ್ತಿ ಬಟ್ಟೆಗಳನ್ನು ಧರಿಸಿ ಮತ್ತು ತಲೆಗೆ ಟೋಪಿ ಅಥವಾ ಛತ್ರಿ ಬಳಸಿಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ