ಶ್ರೀನಗರ: ವಿಶ್ವದ ಗಮನ ಸೆಳೆಯಲು ಮತ್ತು ರಾಜತಾಂತ್ರಿಕ ಲಾಭ ಪಡೆಯಲು ಪಾಕಿಸ್ತಾನ ಭಯೋತ್ಪಾದನೆಯನ್ನು ಹೇಗೆ ದಾಳವಾಗಿ ಬಳಸಿಕೊಳ್ಳುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪಹಲ್ಗಾಂನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯು ಅಂತರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನದ ಘನತೆಯನ್ನು ಹೆಚ್ಚಿಸಲು ನೆರವಾಗಿದೆ ಎಂದು ಲಷ್ಕರ್-ಎ-ತೈಬಾ (LeT) ಕಮಾಂಡರ್ ಅಬು ಮೂಸಾ ಕಾಶ್ಮೀರಿ ನೀಡಿರುವ ಸ್ಫೋಟಕ ಹೇಳಿಕೆ ಈಗ ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿದೆ.
ಒಂದೆಡೆ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಇಸ್ಲಾಮಾಬಾದ್‌ನಲ್ಲಿ ಸಂಧಾನ ಮಾತುಕತೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಉಗ್ರ ಸಂಘಟನೆಯ ಕಮಾಂಡರ್ ಇಂತಹ ಹೇಳಿಕೆ ನೀಡಿರುವುದು ಪಾಕಿಸ್ತಾನದ ಇಬ್ಬಂದಿ ನೀತಿಯನ್ನು ಅನಾವರಣಗೊಳಿಸಿದೆ. ಈ ರಕ್ತಪಾತದ ನಂತರವಷ್ಟೇ ಜಾಗತಿಕ ಶಕ್ತಿಗಳು ಪಾಕಿಸ್ತಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾರಂಭಿಸಿದವು ಮತ್ತು ಇದರಿಂದಲೇ ಅಮೆರಿಕ-ಇರಾನ್ ನಡುವೆ ಮಧ್ಯಸ್ಥಿಕೆ ವಹಿಸುವ ಅವಕಾಶ ಪಾಕ್‌ಗೆ ಲಭಿಸಿತು ಎಂದು ಅಬು ಮೂಸಾ ಬಣ್ಣಿಸಿದ್ದಾನೆ. ಈ ಮೂಲಕ ಅಮಾಯಕರ ಪ್ರಾಣ ಬಲಿಪಡೆದ ಕೃತ್ಯವನ್ನು ಪಾಕಿಸ್ತಾನ ತನ್ನ ರಾಜತಾಂತ್ರಿಕ ಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.
ಈ ಬೆಳವಣಿಗೆಯು ಭಯೋತ್ಪಾದನೆಯನ್ನು ಪೋಷಿಸುವ ಪಾಕಿಸ್ತಾನದ ಅಸಲಿ ಮುಖವನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ. ಶಾಂತಿ ಸ್ಥಾಪಕನಂತೆ ನಟಿಸುತ್ತಲೇ ನೆರೆರಾಷ್ಟ್ರಗಳಲ್ಲಿ ರಕ್ತಪಾತ ಹರಿಸುವ ಇಸ್ಲಾಮಾಬಾದ್‌ನ ನೀಚ ಬುದ್ಧಿಯನ್ನು ಇದು ಎತ್ತಿ ತೋರಿಸುತ್ತಿದ್ದು, ಭಾರತವು ದಶಕಗಳಿಂದ ಮಾಡುತ್ತಾ ಬಂದಿರುವ ಭಯೋತ್ಪಾದನಾ ವಿರೋಧಿ ವಾದಕ್ಕೆ ಈಗ ಜಾಗತಿಕ ಮಟ್ಟದಲ್ಲಿ ಹೊಸ ಪುಷ್ಟಿ ಸಿಕ್ಕಂತಾಗಿದೆ.
ಇದೇ ಸಂದರ್ಭದಲ್ಲಿ ಗಲ್ಫ್ ವಲಯದ ಉದ್ವಿಗ್ನತೆ ತಣಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಕತಾರ್ ಸೇರಿದಂತೆ ವಿವಿಧ ವಿದೇಶಿ ಬ್ಯಾಂಕ್‌ಗಳಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದ ಇರಾನ್‌ನ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಬಿಡುಗಡೆ ಮಾಡಲು ಅಮೆರಿಕ ಒಪ್ಪಿಗೆ ನೀಡಿದೆ ಎಂದು ವರದಿಯಾಗಿದೆ. ಇಸ್ಲಾಮಾಬಾದ್‌ನಲ್ಲಿ ನಡೆಯುತ್ತಿರುವ ಶಾಂತಿ ಮಾತುಕತೆಯ ನಡುವೆಯೇ ಈ ನಿರ್ಧಾರ ಹೊರಬಿದ್ದಿರುವುದು ಕುತೂಹಲ ಮೂಡಿಸಿದೆ. ಅಮೆರಿಕದ ಈ ನಡೆಯನ್ನು ಇರಾನ್ ಅಧಿಕಾರಿಗಳು ಸ್ವಾಗತಿಸಿದ್ದಾರಾದರೂ, ವಾಷಿಂಗ್ಟನ್ ಈ ಬಗ್ಗೆ ಇನ್ನೂ ಅಧಿಕೃತ ಸಾರ್ವಜನಿಕ ಹೇಳಿಕೆ ನೀಡಿಲ್ಲ. ತೆರೆಮರೆಯ ಈ ರಾಜತಾಂತ್ರಿಕ ಚಟುವಟಿಕೆಗಳು ಹಾರ್ಮುಜ್ ಜಲಸಂಧಿಯ ಸಂಚಾರಕ್ಕೆ ಎದುರಾಗಿರುವ ಅಡೆತಡೆಗಳನ್ನು ನಿವಾರಿಸುತ್ತವೆಯೇ ಎಂಬುದನ್ನು ಕಾದುನೋಡಬೇಕಿದೆ.