image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಇ.ಎಸ್.ಐ ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸಲು ದಿನೇಶ್ ಗುಂಡೂರಾವ್ ಸೂಚನೆ

ಇ.ಎಸ್.ಐ ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸಲು ದಿನೇಶ್ ಗುಂಡೂರಾವ್ ಸೂಚನೆ

ಮಂಗಳೂರು: ಜಿಲ್ಲೆಯಲ್ಲಿರುವ ಇ.ಎಸ್.ಐ ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳಲ್ಲಿ ರೋಗಿಗಳಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿ, ಅವುಗಳನ್ನು ಸುಸಜ್ಜಿತಗೊಳಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಇ.ಎಸ್.ಐ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಮತ್ತು ಅವರ ಕುಟುಂಬದವರು ಇ.ಎಸ್.ಐ ಚಿಕಿತ್ಸೆಯನ್ನು ಅವಲಂಬಿಸಿರುತ್ತಾರೆ. ಆದ್ದರಿಂದ ಅವರ ಆರೋಗ್ಯ ಚಿಕಿತ್ಸೆಯಲ್ಲಿ ಯಾವುದೇ ಲೋಪವಾಗದಂತೆ ಉತ್ತಮ ಗುಣಮಟ್ಟದ ಸೇವೆ ನೀಡಲು ಕ್ರಮ ಕೈಗೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ, ಇ.ಎಸ್.ಐ ರೋಗಿಗಳು ತಾಲೂಕು ಮತ್ತು ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ಪಡೆಯುವಂತಾಗಲು ಆರೋಗ್ಯ ಇಲಾಖೆ ಹಾಗೂ ಇ.ಎಸ್.ಐ ಇಲಾಖೆ ನಡುವೆ ಪರಸ್ಪರ ಒಪ್ಪಂದದ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಚಿವರು ತಿಳಿಸಿದರು. ಮಂಗಳೂರಿನ ಇ.ಎಸ್.ಐ ಆಸ್ಪತ್ರೆಯನ್ನು ಎಲ್ಲಾ ರೀತಿಯ ಪರೀಕ್ಷೆ ಹಾಗೂ ಶಸ್ತ್ರಚಿಕಿತ್ಸೆಗಳು ಲಭ್ಯವಾಗುವಂತೆ ಮೇಲ್ದರ್ಜೆಗೇರಿಸಲು ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಅವರು ಸೂಚಿಸಿದರು.

ಸಭೆಯಲ್ಲಿ ಮಾಹಿತಿ ನೀಡಿದ ಇ.ಎಸ್.ಐ ಆಯುಕ್ತ ಡಾ. ದಿನೇಶ್ , ಮಂಗಳೂರು ಪ್ರಾದೇಶಿಕ ವಲಯದ ವ್ಯಾಪ್ತಿಯಲ್ಲಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 1 ಆಸ್ಪತ್ರೆ ಹಾಗೂ 11 ಚಿಕಿತ್ಸಾಲಯಗಳು ಕಾರ್ಯನಿರ್ವಹಿಸುತ್ತಿವೆ. ಸುಮಾರು 3.92 ಲಕ್ಷ ನೋಂದಣಿದಾರರು ಹಾಗೂ 15 ಲಕ್ಷದಷ್ಟು ಅವರ ಕುಟುಂಬಸ್ಥರು ಇದರ ಸೌಲಭ್ಯ ಪಡೆಯುತ್ತಿದ್ದಾರೆ. ಮಂಗಳೂರು ಇ.ಎಸ್.ಐ ಆಸ್ಪತ್ರೆಯನ್ನು 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣಗೊಳಿಸಲಾಗುತ್ತಿದ್ದು, ನೂತನ ಐ.ಸಿ.ಯು, ಡಯಾಲಿಸಿಸ್ ಕೇಂದ್ರ ಹಾಗೂ ಪ್ರಯೋಗಾಲಯಗಳನ್ನು ನಿರ್ಮಿಸಲಾಗುವುದು ಎಂದು ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ನರ್ವಾಡೆ ವಿನಾಯಕ ಕಾರ್ಬಾರಿ, ಡಿಎಚ್‌ಒ ಡಾ. ಹೆಚ್.ಆರ್ ತಿಮ್ಮಯ್ಯ, ವೆನ್‍ಲಾಕ್ ಅಧೀಕ್ಷಕ ಡಾ. ಶಿವಪ್ರಕಾಶ್ ಹಾಗೂ ಇ.ಎಸ್.ಐ ನೋಡಲ್ ಅಧಿಕಾರಿ ಹೇಮಂತ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ