ಮಂಗಳೂರು:ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ತೀವ್ರವಾದ ಬಿಸಿಲು ಮತ್ತು ಆರ್ದ್ರತೆ (ಸೆಖೆ) ಇರಲಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಈ ಭಾಗದಲ್ಲಿ 'ಯೆಲ್ಲೋ ಅಲರ್ಟ್' ಘೋಷಿಸಿದೆ.
ಏಪ್ರಿಲ್ 10 ರಿಂದ ಏಪ್ರಿಲ್ 12 ರವರೆಗೆ ಕರಾವಳಿಯ ಪ್ರಮುಖ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಹಾಗೂ ಆರ್ದ್ರತೆಯ ವಾತಾವರಣ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ತಾಪಮಾನ ಏರಿಕೆಯೊಂದಿಗೆ ಹವೆಯಲ್ಲಿನ ತೇವಾಂಶವೂ ಹೆಚ್ಚಾಗುವುದರಿಂದ ಸಾರ್ವಜನಿಕರಿಗೆ ತೀವ್ರ ಸೆಖೆಯ ಅನುಭವವಾಗಲಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ವಿಶೇಷವಾಗಿ ಮಧ್ಯಾಹ್ನದ ಸಮಯದಲ್ಲಿ ಬಿಸಿಲಿಗೆ ಹೆಚ್ಚು ಒಡ್ಡಿಕೊಳ್ಳದಂತೆ ಮತ್ತು ಸಾಕಷ್ಟು ನೀರು ಕುಡಿಯುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ಕೋರಲಾಗಿದೆ.