ನವದೆಹಲಿ : ಭಾರತದ ಗಡಿ ನಿರ್ವಹಣಾ ಕಾರ್ಯತಂತ್ರದಲ್ಲಿ ಕೊಂಚ ಬದಲಾವಣೆಗೆ ಪ್ರಯತ್ನಗಳು ಆರಂಭವಾಗಿವೆ. ಸಾಮಾನ್ಯವಾಗಿ ಗಡಿಯಲ್ಲಿ ಬೇಲಿ ನಿರ್ಮಿಸಲಾಗುತ್ತದೆ. ಆದರೆ, ಬಾಂಗ್ಲಾದೇಶದ ಜತೆಗಿನ ನದಿ ಭಾಗದ ಗಡಿಯಲ್ಲಿ ಬೇಲಿ ನಿರ್ಮಾಣ ಕಷ್ಟ ಸಾಧ್ಯ. ಅಂತಹ ಕಡೆಗಳಲ್ಲಿ ಹಾವು ಮತ್ತು ಮೊಸಳೆಗಳಂತಹ ಸರೀಸೃಪಗಳನ್ನು ನಿಯೋಜಿಸುವ ಸಾಧ್ಯತೆಯನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪರಿಶೀಲಿಸುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಕುರಿತು ನಿರ್ದೇಶನ ನೀಡಿದ್ದಾರೆ ಎಂದು ಹೇಳಲಾಗಿದ್ದು, ಈ ಸಂಬಂಧಿತ ಆಂತರಿಕ ಮಾಹಿತಿಯನ್ನು 'ದ ಫೆಡರಲ್' ವರದಿ ಮಾಡಿದೆ. ಮಾರ್ಚ್ 26 ರಂದು ಹಿರಿಯ ಅಧಿಕಾರಿಗಳಿಗೆ ರವಾನಿಸಿರುವ ರಹಸ್ಯ ಸಂದೇಶದ ಪ್ರಕಾರ ಭದ್ರತೆಗೆ ಸವಾಲಾಗಿರುವ ನದಿ ತೀರದ ಪ್ರದೇಶಗಳಲ್ಲಿ ಕಾರ್ಯಾಚರಣೆ ದೃಷ್ಟಿಯಿಂದ ಈ ಸರೀಸೃಪಗಳ ನಿಯೋಜನೆಯ ಕಾರ್ಯಸಾಧ್ಯತೆ ಪರೀಕ್ಷಿಸಲು ಸೂಚಿಸಲಾಗಿದೆ ಎಂದು ರಕ್ಷಣಾ ಮೂಲಗಳಿಂದ ತಿಳಿದುಬಂದಿದೆ.
ಕೇಂದ್ರ ಸರ್ಕಾರದ ಈ ಕ್ರಮವು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ಫ್ಲೋರಿಡಾದಲ್ಲಿ ಸ್ಥಾಪಿಸಿದ್ದ "ಅಲಿಗೇಟರ್ ಅಲ್ಕಾಟ್ರಾಜ್" ಎಂಬ ಬಂಧನ ಕೇಂದ್ರಕ್ಕೆ ಹೋಲಿಕೆಯಾಗುವಂತಿದೆ. ಎವರ್‌ಗ್ಲೇಡ್ಸ್ ಜೌಗು ಪ್ರದೇಶದಿಂದ ಆವೃತವಾಗಿರುವ ಈ ಕೇಂದ್ರವು ಕೈದಿಗಳು ತಪ್ಪಿಸಿಕೊಳ್ಳದಂತೆ ತಡೆಯಲು ನೈಸರ್ಗಿಕ ತಡೆಗೋಡೆಗಳಾಗಿ ಅಲಿಗೇಟರ್‌ಗಳು, ಮೊಸಳೆಗಳು ಮತ್ತು ಹೆಬ್ಬಾವುಗಳನ್ನು ಅವಲಂಬಿಸಿದೆ. ಟ್ರಂಪ್ ಅವರು ಈ ಹಿಂದೆ ಅಮೆರಿಕ ಮತ್ತು ಮೆಕ್ಸಿಕೋ ನಡುವಿನ ರಿಯೊ ಗ್ರಾಂಡೆ ನದಿಯಲ್ಲಿ ಮೊಸಳೆಗಳನ್ನು ಬಿಡುವ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ, ನಂತರ ಅದನ್ನು ಹಾಸ್ಯಮಯ ಸಲಹೆ ಎಂದು ಸ್ಪಷ್ಟಪಡಿಸಿದ್ದರು. ಅಮೆರಿಕದ ಈ ಕ್ರಮವು ಪರಿಸರ ಮತ್ತು ಮಾನವೀಯ ಕಾಳಜಿಗಳ ಬಗ್ಗೆ ವಿವಾದಕ್ಕೆ ಕಾರಣವಾಗಿದ್ದರೂ ಭಾರತವು ಸರೀಸೃಪಗಳನ್ನು ಬಳಸಲು ಮುಂದಾಗಿರುವುದು ಅಕ್ರಮ ನುಸುಳುವಿಕೆ ತಡೆಯಲು ಪ್ರಕೃತಿಯನ್ನೇ ರಕ್ಷಣಾ ಸಾಧನವನ್ನಾಗಿ ಬಳಸುವ ಕಟ್ಟುನಿಟ್ಟಿನ ಧೋರಣೆಯನ್ನು ಪ್ರತಿಬಿಂಬಿಸುತ್ತದೆ. ಬಿಎಸ್‌ಎಫ್ ಹಳೆಯ ಮೂಲಸೌಕರ್ಯ ಮತ್ತು ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಸಮಯದಲ್ಲಿ ಈ ಹೊಸ ಯೋಜನೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಸುಮಾರು 4,000 ಕಿ.ಮೀ ಬಾಂಗ್ಲಾದೇಶ ಗಡಿ ಮತ್ತು 2,200 ಕಿ.ಮೀ ಪಾಕಿಸ್ತಾನ ಗಡಿಯನ್ನು ಕಾಯಲು ಸುಮಾರು 2.65 ಲಕ್ಷ ಸಿಬ್ಬಂದಿ ಇದ್ದು, ಪ್ರತಿ ಕಿಲೋಮೀಟರ್‌ಗೆ ಸರಾಸರಿ 41 ಸಿಬ್ಬಂದಿ ಮಾತ್ರ ಲಭ್ಯವಿದ್ದಾರೆ. ಇದರಲ್ಲಿ ಗಣನೀಯ ಪ್ರಮಾಣದ ಸಿಬ್ಬಂದಿ ಆಂತರಿಕ ಭದ್ರತೆ, ಚುನಾವಣೆ ಮತ್ತು ನಕ್ಸಲ್ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಒಟ್ಟು 4,096.7 ಕಿ.ಮೀ ಗಡಿಯಲ್ಲಿ ಸುಮಾರು 3,240 ಕಿ.ಮೀ ಪ್ರದೇಶಕ್ಕೆ ಮಾತ್ರ ಬೇಲಿ ಹಾಕಲಾಗಿದೆ. ಉಳಿದ 850 ಕಿ.ಮೀ ಪ್ರದೇಶದಲ್ಲಿ ಸುಮಾರು 175 ಕಿ.ಮೀ ನದಿಗಳು ಮತ್ತು ಜೌಗು ಪ್ರದೇಶಗಳಿಂದ ಕೂಡಿದ್ದು, ಅಲ್ಲಿ ಸಂಪ್ರದಾಯಬದ್ಧ ಬೇಲಿ ನಿರ್ಮಿಸುವುದು ಅಸಾಧ್ಯ. ಅಂತಹ ದುರ್ಗಮ ಪ್ರದೇಶಗಳಲ್ಲಿಯೇ ಮೊಸಳೆ ಮತ್ತು ಹಾವುಗಳನ್ನು ಭದ್ರತೆಗಾಗಿ ನಿಯೋಜಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ. ಇದರೊಂದಿಗೆ ಮೊಬೈಲ್ ಸಂಪರ್ಕವಿಲ್ಲದ ಪ್ರದೇಶಗಳ ನಕ್ಷೆ ಸಿದ್ಧಪಡಿಸಲು ಮತ್ತು ಗಡಿ ಗ್ರಾಮಸ್ಥರ ವಿರುದ್ಧ ದಾಖಲಾದ ಪ್ರಕರಣಗಳ ವಿವರ ಸಲ್ಲಿಸಲು ಬಿಎಸ್‌ಎಫ್ ಅಧಿಕಾರಿಗಳಿಗೆ ಸೂಚಿಸಲಾಗಿದೆ.