ಮಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ನಡೆಯುತ್ತಿರುವ ಅತ್ಯಂತ ನಿರ್ಣಾಯಕ ಸಂದರ್ಭದಲ್ಲಿಯೇ ತೃತೀಯ ಭಾಷೆಗೆ ಅಂಕ ನೀಡುವ ಪದ್ಧತಿಯನ್ನು ಕೈಬಿಟ್ಟು, ಗ್ರೇಡ್ ನೀಡುವ ಪದ್ಧತಿಯನ್ನು ಜಾರಿಗೆ ತಂದಿರುವ ರಾಜ್ಯ ಸರ್ಕಾರದ ನಿರ್ಧಾರವು ಅತ್ಯಂತ ಅವೈಜ್ಞಾನಿಕ ಮತ್ತು ಆತುರದಿಂದ ಕೂಡಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ತೀವ್ರವಾಗಿ ಟೀಕಿಸಿದ್ದಾರೆ. "ಆತುರಗಾರನಿಗೆ ಬುದ್ಧಿ ಮಟ್ಟ" ಎನ್ನುವಂತೆ ಸರ್ಕಾರ ರಾಜಕೀಯ ತೆವಲಿಗಾಗಿ ವಿದ್ಯಾರ್ಥಿಗಳ ಭವಿಷ್ಯವನ್ನು ಬಲಿಪಶು ಮಾಡುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ಪರೀಕ್ಷಾ ಸಮಯದಲ್ಲಿ ಇಂತಹ ದಿಢೀರ್ ಬದಲಾವಣೆಗಳನ್ನು ಮಾಡುವುದರಿಂದ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ತೀವ್ರ ಗೊಂದಲ ಮತ್ತು ಆತಂಕಕ್ಕೆ ಒಳಗಾಗಿದ್ದಾರೆ. ಅಂಕಗಳ ಆಧಾರದಲ್ಲಿ ತಮ್ಮ ಶೈಕ್ಷಣಿಕ ಭವಿಷ್ಯವನ್ನು ರೂಪಿಸಿಕೊಳ್ಳಲು ಸಿದ್ಧರಾಗಿದ್ದ ವಿದ್ಯಾರ್ಥಿಗಳಿಗೆ ಈ ಆದೇಶದಿಂದ ದೊಡ್ಡ ಅನ್ಯಾಯವಾಗಿದೆ. ಸರ್ಕಾರದ ಈ ಬೇಜವಾಬ್ದಾರಿ ನಿರ್ಧಾರದಿಂದ ತೃತೀಯ ಭಾಷೆ ಬೋಧಿಸುವ ಸುಮಾರು 75 ಸಾವಿರಕ್ಕೂ ಹೆಚ್ಚು ಶಿಕ್ಷಕರು ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನ ಪ್ರಕ್ರಿಯೆಯನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದು, ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಲು ಸಿದ್ಧರಾಗಿದ್ದಾರೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ.
ಈ ಕ್ರಮದಿಂದ ಹಿಂದಿ, ಸಂಸ್ಕೃತ, ಕೊಂಕಣಿ ಮತ್ತು ತುಳು ಸೇರಿದಂತೆ ಹಲವು ಭಾಷೆಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಇಡೀ ವರ್ಷ ಮಕ್ಕಳು ಪಟ್ಟ ಕಷ್ಟಕ್ಕೆ ಯಾವುದೇ ಬೆಲೆ ಇಲ್ಲದಂತಾಗಿದೆ. ಇಂತಹ ಸೂಕ್ಷ್ಮ ವಿಷಯಗಳಲ್ಲಿ ಶೈಕ್ಷಣಿಕ ವರ್ಷದ ಆರಂಭದಲ್ಲೇ ನಿರ್ಧಾರ ಕೈಗೊಳ್ಳಬೇಕಿತ್ತು, ಆದರೆ ಸರ್ಕಾರವು ಸೂಕ್ಷ್ಮ ಸಂವೇದನೆ ಇಲ್ಲದೆ ವರ್ತಿಸುತ್ತಿದೆ ಎಂದು ಅವರು ದೂರಿದ್ದಾರೆ. ಮಕ್ಕಳು ಹೆಚ್ಚು ಭಾಷೆಗಳನ್ನು ಕಲಿತರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ, ಆದರೆ ಸರ್ಕಾರದ ಈ ನಡೆಯು ಭಾಷಾ ಕಲಿಕೆಗೆ ಹಿನ್ನಡೆಯಾಗಲಿದೆ. ಆದ್ದರಿಂದ ಕೂಡಲೇ ಈ ಅವೈಜ್ಞಾನಿಕ ನಿರ್ಧಾರವನ್ನು ಸರ್ಕಾರ ಹಿಂಪಡೆಯಬೇಕು ಎಂದು ವೇದವ್ಯಾಸ ಕಾಮತ್ ಒತ್ತಾಯಿಸಿದ್ದಾರೆ.