ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾದ ಕಬಕ - ಪುತ್ತೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಬೃಹತ್ ಶೆಲ್ಟರ್ ನಿರ್ಮಾಣ ಸೇರಿದಂತೆ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ₹2.91 ಕೋಟಿ ಅನುದಾನ ಮಂಜೂರಾಗಿದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಪ್ರಸ್ತುತ ಈ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 1ರಲ್ಲಿ ಕೇವಲ 531 ಚದರ ಮೀಟರ್ ವಿಸ್ತೀರ್ಣದ ಶೆಲ್ಟರ್ ಇದ್ದು, ಮಳೆ ಮತ್ತು ಬಿಸಿಲಿನ ಸಮಯದಲ್ಲಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಂಸದರು, ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್‌ಗೆ ಪತ್ರ ಬರೆದು ಅನುದಾನಕ್ಕಾಗಿ ಒತ್ತಾಯಿಸಿದ್ದರು. ಅದರ ಫಲವಾಗಿ ಈಗ ಒಟ್ಟು 3392 ಚದರ ಮೀಟರ್ ವಿಸ್ತೀರ್ಣದ ಬೃಹತ್ ಶೆಲ್ಟರ್ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ.
ಶೆಲ್ಟರ್ ನಿರ್ಮಾಣದ ಜೊತೆಗೆ, ನಿಲ್ದಾಣದ ಮೇಲ್ಸೇತುವೆಗೆ (FOB) ಪ್ಲಾಟ್‌ಫಾರ್ಮ್ 1 ಮತ್ತು 2ರಲ್ಲಿ ಎರಡು ಲಿಫ್ಟ್‌ಗಳನ್ನು ಅಳವಡಿಸುವ ₹1.33 ಕೋಟಿ ವೆಚ್ಚದ ಪ್ರಸ್ತಾವನೆಯು ಕೇಂದ್ರ ಕಚೇರಿಯಲ್ಲಿ ಪರಿಶೀಲನಾ ಹಂತದಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಅಭಿವೃದ್ಧಿ ಕಾರ್ಯಗಳಿಂದ ಪುತ್ತೂರು ಭಾಗದ ಸಾವಿರಾರು ರೈಲು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಮಹತ್ವದ ಯೋಜನೆಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವರಿಗೆ ಸಂಸದರು ಈ ಸಂದರ್ಭದಲ್ಲಿ ಧನ್ಯವಾದ ಅರ್ಪಿಸಿದ್ದಾರೆ.