ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಹೆಣ್ಣುಮಕ್ಕಳ ಆರೋಗ್ಯ ರಕ್ಷಣೆಗಾಗಿ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೆಯ ಉಚಿತ ಹೆಚ್.ಪಿ.ವಿ. (HPV) ಲಸಿಕಾ ಅಭಿಯಾನದ ಪೂರ್ಣ ಸದುಪಯೋಗವನ್ನು ಪಡೆದುಕೊಳ್ಳುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ವಿಶೇಷ ಕರೆ ನೀಡಿದ್ದಾರೆ. ಜಿಲ್ಲೆಯ 14ರಿಂದ 15 ವರ್ಷದೊಳಗಿನ ಎಲ್ಲಾ ಕಿಶೋರಿಯರು ಸ್ವಯಂಪ್ರೇರಿತರಾಗಿ ಈ ಲಸಿಕೆ ಪಡೆಯುವ ಮೂಲಕ 'ಆರೋಗ್ಯವಂತ ದಕ್ಷಿಣ ಕನ್ನಡ' ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಅವರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 22,473 ಕಿಶೋರಿಯರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಈಗಾಗಲೇ ರಾಜ್ಯಕ್ಕೆ 2.54 ಲಕ್ಷ ಡೋಸ್ ಲಸಿಕೆ ಉಚಿತವಾಗಿ ಸರಬರಾಜಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಈ ಲಸಿಕೆಗೆ ಸುಮಾರು 8,000 ರೂಪಾಯಿಗಳವರೆಗೆ ದರವಿದ್ದು, ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಇದನ್ನು ಉಚಿತವಾಗಿ ನೀಡಲಾಗುತ್ತಿದೆ. ಜಿಲ್ಲೆಯ ಎಲ್ಲಾ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಮೇ ತಿಂಗಳಾಂತ್ಯದವರೆಗೆ ಈ ಲಸಿಕೀಕರಣ ಅಭಿಯಾನ ನಡೆಯಲಿದೆ. ಶಾಲಾ ಪರೀಕ್ಷೆಗಳು ಮುಗಿದ ತಕ್ಷಣ ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ಈ ಲಸಿಕೆಯನ್ನು ಕೊಡಿಸಬೇಕು ಎಂದು ಸಂಸದರು ವಿನಂತಿಸಿದ್ದಾರೆ.
ಈ ಅಭಿಯಾನದ ಕುರಿತು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಹಾಗೂ ಆಶಾ ಕಾರ್ಯಕರ್ತರು ಆಂದೋಲನದಂತೆ ಕೆಲಸ ಮಾಡಬೇಕು ಎಂದು ತಿಳಿಸಿರುವ ಸಂಸದರು, ಅಭಿಯಾನಕ್ಕೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಫಲಾನುಭವಿಗಳು U-WIN ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಪೂರ್ವ-ನೋಂದಣಿ ಮಾಡಿ ಅಪಾಯಿಂಟ್‌ಮೆಂಟ್ ಪಡೆಯಬಹುದು ಅಥವಾ ನೇರವಾಗಿ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಲಸಿಕೆ ಪಡೆಯಬಹುದು. ಲಸಿಕೆ ಪಡೆಯಲು ಪೋಷಕರ ಒಪ್ಪಿಗೆ ಕಡ್ಡಾಯವಾಗಿರುತ್ತದೆ.