ನವದೆಹಲಿ : ಪಶ್ಚಿಮ ಏಷ್ಯಾದಲ್ಲಿ ತೀವ್ರಗೊಂಡಿರುವ ಸಂಘರ್ಷದ ಪರಿಣಾಮವಾಗಿ ದೇಶದಲ್ಲಿ LPG ಪೂರೈಕೆಯಲ್ಲಿ ಕೊರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಪೈಪ್ಡ್ ನೈಸರ್ಗಿಕ ಅನಿಲ (PNG) ಹಾಗೂ ದೇಶೀಯ LPG ಸಂಪರ್ಕ, ಎರಡನ್ನೂ ಹೊಂದಿರುವ ಗ್ರಾಹಕರು ತಮ್ಮ LPG ಸಂಪರ್ಕವನ್ನು ತಕ್ಷಣವೇ ವಾಪಸ್ ಮಾಡಬೇಕು ಎಂದು ಕೇಂದ್ರ ಸರ್ಕಾರ ಕಡ್ಡಾಯ ಆದೇಶ ಹೊರಡಿಸಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹೊರಡಿಸಿದ ಆದೇಶದಲ್ಲಿ, 'PNG ಸಂಪರ್ಕ ಹೊಂದಿರುವ ಮತ್ತು ದೇಶೀಯ LPG ಸಂಪರ್ಕವನ್ನೂ ಹೊಂದಿರುವ ಯಾವುದೇ ವ್ಯಕ್ತಿ LPG ಸಂಪರ್ಕವನ್ನು ಉಳಿಸಿಕೊಳ್ಳಬಾರದು. ಅವರು ಯಾವುದೇ ಸರ್ಕಾರಿ ತೈಲ ಕಂಪೆನಿ ಅಥವಾ ಅವರ ವಿತರಕರ ಮೂಲಕ ದೇಶೀಯ LPG ಸಿಲಿಂಡರ್ ಗಳ ಫಿಲ್ಲಿಂಗ್ ಪಡೆಯಬಾರದು. ಇಂತಹವರು ತಕ್ಷಣವೇ ತಮ್ಮ LPG ಸಂಪರ್ಕವನ್ನು ಸರೆಂಡರ್ ಮಾಡಬೇಕು' ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಸಿಲಿಂಡರ್ ಪೂರೈಕೆಯಲ್ಲಿ ಉಂಟಾಗಿರುವ ಬಿಕ್ಕಟ್ಟಿನ ನಡುವೆ ಈ ಕ್ರಮ ಕೈಗೊಳ್ಳಲಾಗಿದೆ. ಪಶ್ಚಿಮ ಏಷ್ಯಾದ ಅಸ್ಥಿರ ಪರಿಸ್ಥಿತಿ ಭಾರತಕ್ಕೆ ಬರುವ LPG ಸರಬರಾಜಿನ ಮೇಲೆ ಪರಿಣಾಮ ಬೀರಿದ್ದು, ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಸರ್ಕಾರಕ್ಕೆ ಸವಾಲಾಗಿದೆ.
ಇದರ ಮಧ್ಯೆ, ಸಚಿವಾಲಯವು ಶನಿವಾರ ಎಕ್ಸ್ನಲ್ಲಿ ಪ್ರಕಟಿಸಿದ ಸಲಹೆಯಲ್ಲಿ, ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಸಮರ್ಪಕವಾಗಿ ಲಭ್ಯವಿರುವುದಾಗಿ ತಿಳಿಸಿದೆ. ಗ್ರಾಹಕರು ಅಸಮರ್ಪಕವಾಗಿ ಇಂಧನವನ್ನು ತೆಗೆದುಕೊಳ್ಳಬಾರದು ಅಥವಾ ಸಂಗ್ರಹಿಸಬಾರದು; ಇದು ಗಂಭೀರ ಸುರಕ್ಷತಾ ಅಪಾಯಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಲಾಗಿದೆ. ಇಂಧನ ವಿತರಿಸುವಾಗ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಚಿಲ್ಲರೆ ಮಾರಾಟ ಮಳಿಗೆಗಳಿಗೆ ಸೂಚಿಸಲಾಗಿದ್ದು, ಯಾವುದೇ ಉಲ್ಲಂಘನೆ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. LPG ಕೊರತೆಯ ಪರಿಣಾಮವಾಗಿ, ಹಲವು ರೆಸ್ಟೋರೆಂಟ್ಗಳು ಮತ್ತು ತಿನಿಸು ಮಳಿಗೆಗಳು ತಾತ್ಕಾಲಿಕವಾಗಿ ಅಡುಗೆಮನೆಗಳನ್ನು ಮುಚ್ಚಿದ್ದು, ಕೆಲವು ತಮ್ಮ ಮೆನುಗಳನ್ನು ಬದಲಾಯಿಸಿವೆ. ಇನ್ನೂ ಕೆಲವು ಸಂಸ್ಥೆಗಳು ಉರುವಲು ಸೇರಿದಂತೆ ಪರ್ಯಾಯ ಇಂಧನಗಳತ್ತ ಮುಖಮಾಡಿವೆ.