ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಯುದ್ಧದ ಭೀತಿ ಹಾಗೂ ಜಾಗತಿಕ ತೈಲ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೇಲೆ ಹೇರಲಾಗಿರುವ ನಿರ್ಬಂಧಗಳು ಭಾರತದ ಎಲ್‌ಪಿಜಿ ಪೂರೈಕೆಯ ಮೇಲೆ ಭೀಕರ ಪರಿಣಾಮ ಬೀರಿವೆ. ಅರಬ್ ರಾಷ್ಟ್ರಗಳಿಂದ ಆಮದಾಗುತ್ತಿದ್ದ ಅನಿಲದ ಪ್ರಮಾಣ ಕುಸಿದಿರುವುದರಿಂದ ಕರ್ನಾಟಕದಾದ್ಯಂತ ಸಿಲಿಂಡರ್ ಅಭಾವ ಸೃಷ್ಟಿಯಾಗಿದೆ.
ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯಂತಹ ಪ್ರಮುಖ ನಗರಗಳಲ್ಲಿ ಗ್ಯಾಸ್ ಏಜೆನ್ಸಿಗಳ ಮುಂದೆ ಸಾರ್ವಜನಿಕರು ಸಿಲಿಂಡರ್‌ಗಳಿಗಾಗಿ ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿರುವ ದೃಶ್ಯಗಳು ಸಾಮಾನ್ಯವಾಗಿದೆ. ರೀಫಿಲ್ ಬುಕ್ಕಿಂಗ್ ಮಾಡಿದರೂ ಹದಿನೈದು ದಿನ ಕಳೆದರೂ ಸಿಲಿಂಡರ್ ಕೈಸೇರುತ್ತಿಲ್ಲ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದೇ ಕೊರತೆಯನ್ನು ಬಂಡವಾಳ ಮಾಡಿಕೊಂಡಿರುವ ಕೆಲವು ಅಕ್ರಮ ದಂಧೆಕೋರರು ಸಿಲಿಂಡರ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲಾಗುತ್ತಿದ್ದು, ಇದು ಕೃತಕ ಅಭಾವಕ್ಕೆ ಪ್ರಮುಖ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ರಾಜ್ಯದ ವಿವಿಧೆಡೆ ಮಿಂಚಿನ ದಾಳಿ ನಡೆಸಿದ್ದಾರೆ. ಪೀಣ್ಯ, ಚಿಕ್ಕಜಾಲ ಮತ್ತು ಯಾದಗಿರಿ ಸೇರಿದಂತೆ ವಿವಿಧ ಕಡೆಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 316ಕ್ಕೂ ಹೆಚ್ಚು ಅಕ್ರಮ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು, ಸಾರ್ವಜನಿಕರು ಭಯದಿಂದ (Panic booking) ಮುಂಗಡವಾಗಿ ಬುಕ್ಕಿಂಗ್ ಮಾಡಬಾರದು ಮತ್ತು ಕಾಳಸಂತೆಯಲ್ಲಿ ಸಿಲಿಂಡರ್ ಪಡೆಯಲು ಮುಂದಾಗಬಾರದು ಎಂದು ಮನವಿ ಮಾಡಿದ್ದಾರೆ.
ಅಕ್ರಮವಾಗಿ ಸಿಲಿಂಡರ್ ಸಂಗ್ರಹಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.