image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಲೆ ಮಹದೇಶ್ವರ ಬೆಟ್ಟಕ್ಕೆ ದಾಖಲೆ ಆದಾಯ: ರಾಜ್ಯದ ಎರಡನೇ ಅತಿ ಶ್ರೀಮಂತ ದೇವಾಲಯವಾಗಿ ಹೊರಹೊಮ್ಮಿದ ಮಾದಪ್ಪನ ಸನ್ನಿಧಿ

ಮಲೆ ಮಹದೇಶ್ವರ ಬೆಟ್ಟಕ್ಕೆ ದಾಖಲೆ ಆದಾಯ: ರಾಜ್ಯದ ಎರಡನೇ ಅತಿ ಶ್ರೀಮಂತ ದೇವಾಲಯವಾಗಿ ಹೊರಹೊಮ್ಮಿದ ಮಾದಪ್ಪನ ಸನ್ನಿಧಿ

ಚಾಮರಾಜನಗರ :ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಮಲೆ ಮಹದೇಶ್ವರ ಬೆಟ್ಟದ ದೇವಾಲಯವು ವಾರ್ಷಿಕ ಆದಾಯದಲ್ಲಿ ಹೊಸ ಇತಿಹಾಸ ಬರೆದಿದೆ. ಈ ಪುಣ್ಯಕ್ಷೇತ್ರದ ವಾರ್ಷಿಕ ಆದಾಯವು ಇದೇ ಮೊದಲ ಬಾರಿಗೆ 100 ಕೋಟಿ ರೂಪಾಯಿಗಳ ಗಡಿಯನ್ನು ದಾಟುವ ಮೂಲಕ ರಾಜ್ಯದ ಎರಡನೇ ಅತಿ ಶ್ರೀಮಂತ ಮುಜರಾಯಿ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದುವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಮೊದಲ ಸ್ಥಾನದಲ್ಲಿದ್ದು, ಇದೀಗ ಮಾದಪ್ಪನ ಸನ್ನಿಧಿಯು ಉಡುಪಿಯ ಕೊಲ್ಲೂರು ಮೂಕಾಂಬಿಕಾ ದೇವಾಲಯವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ.
​ಕಳೆದ ಕೆಲವು ವರ್ಷಗಳಿಂದ ದೇವಾಲಯದ ಆದಾಯದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಪ್ರಸಕ್ತ ಸಾಲಿನಲ್ಲಿ ಈ ಮೊತ್ತವು ಸುಮಾರು 120 ಕೋಟಿ ರೂಪಾಯಿಗಳಿಗಿಂತಲೂ ಅಧಿಕವಾಗಿದೆ ಎಂದು ಅಂದಾಜಿಸಲಾಗಿದೆ. ಮುಖ್ಯವಾಗಿ ರಾಜ್ಯ ಸರ್ಕಾರದ 'ಶಕ್ತಿ' ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ದೊರೆತಿರುವುದರಿಂದ ಬೆಟ್ಟಕ್ಕೆ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಭಕ್ತರು ಅರ್ಪಿಸುವ ಹುಂಡಿ ಕಾಣಿಕೆ, ಲಡ್ಡು ಪ್ರಸಾದ ಮಾರಾಟ, ಚಿನ್ನದ ರಥೋತ್ಸವ ಸೇರಿದಂತೆ ವಿವಿಧ ಸೇವೆಗಳ ಮೂಲಕ ಈ ಬೃಹತ್ ಪ್ರಮಾಣದ ಆದಾಯ ಸಂಗ್ರಹವಾಗಿದೆ. 108 ಅಡಿ ಎತ್ತರದ ಮಹದೇಶ್ವರ ಪ್ರತಿಮೆಯ ಲೋಕಾರ್ಪಣೆಯ ನಂತರ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದ್ದು, ಇದು ದೇವಾಲಯದ ಆರ್ಥಿಕ ಪ್ರಗತಿಗೆ ದೊಡ್ಡ ಬಲ ನೀಡಿದೆ. ಈ ಹೆಚ್ಚುವರಿ ಆದಾಯವನ್ನು ಭಕ್ತರ ಅನುಕೂಲಕ್ಕಾಗಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ದಾಸೋಹ ಮತ್ತು ಶೈಕ್ಷಣಿಕ ಕಾರ್ಯಗಳಿಗೆ ಬಳಸಲು ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಯೋಜಿಸಿದೆ.

Category
ಕರಾವಳಿ ತರಂಗಿಣಿ