image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದಕ್ಷಿಣ ಕನ್ನಡದ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ನೀಡಿ: ಸಂಸತ್ತಿನಲ್ಲಿ ಕ್ಯಾ. ಬ್ರಿಜೇಶ್‌ ಚೌಟ ಆಗ್ರಹ

ದಕ್ಷಿಣ ಕನ್ನಡದ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ನೀಡಿ: ಸಂಸತ್ತಿನಲ್ಲಿ ಕ್ಯಾ. ಬ್ರಿಜೇಶ್‌ ಚೌಟ ಆಗ್ರಹ

ನವದೆಹಲಿ: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ-ಸೋಮೇಶ್ವರ ಸೇರಿದಂತೆ ಕರಾವಳಿ ತೀರದಲ್ಲಿ ಹೆಚ್ಚಾಗುತ್ತಿರುವ ಕಡಲ್ಕೊರೆತದ ಗಂಭೀರ ಸಮಸ್ಯೆ ಬಗ್ಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್‌ ಚೌಟ ಅವರು ಲೋಕಸಭೆಯಲ್ಲಿ ಧ್ವನಿಯೆತ್ತಿದ್ದಾರೆ. ನಿಯಮ 377ರಡಿ ಈ ವಿಷಯ ಪ್ರಸ್ತಾಪಿಸಿದ ಅವರು, ಜಿಲ್ಲೆಯ ಒಟ್ಟು 36.66 ಕಿ.ಮೀ ಕರಾವಳಿ ತೀರದ ಪೈಕಿ ಸುಮಾರು 17.74 ಕಿ.ಮೀ (ಶೇ. 48.40) ಭಾಗವು ಕೊರೆತಕ್ಕೆ ಒಳಗಾಗುತ್ತಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತಲೂ (ಶೇ. 33.6) ಗಣನೀಯವಾಗಿ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದರು. ಪ್ರಸ್ತುತ ಜಿಲ್ಲೆಯ ಕೇವಲ ಶೇ. 21.9 ರಷ್ಟು ಕರಾವಳಿ ಮಾತ್ರ ಸುರಕ್ಷಿತವಾಗಿದ್ದು, ಇದು ನೆರೆಯ ಜಿಲ್ಲೆಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಪ್ರಮಾಣವಾಗಿದೆ ಎಂದು ಅಂಕಿಅಂಶಗಳ ಸಮೇತ ವಿವರಿಸಿದರು.
ಮುಂಗಾರಿನ ಅಲೆಗಳ ಅಬ್ಬರ, ಹವಾಮಾನ ವೈಪರೀತ್ಯ ಮತ್ತು ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಕಡಲ ತೀರ ಸವಕಳಿಯಾಗುತ್ತಿದ್ದು, ಮನೆಗಳು, ರಸ್ತೆಗಳು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳು ಸಮುದ್ರಪಾಲಾಗುತ್ತಿವೆ. ಇದು ಕೇವಲ ಭೌಗೋಳಿಕ ಸಮಸ್ಯೆಯಲ್ಲ, ಬದಲಾಗಿ ಮೀನುಗಾರ ಸಮುದಾಯದ ಜೀವನೋಪಾಯಕ್ಕೆ ಉಂಟಾಗುತ್ತಿರುವ ದೊಡ್ಡ ಅಪಾಯವಾಗಿದೆ ಎಂದು ಅವರು ಸದನದ ಗಮನಕ್ಕೆ ತಂದರು. ಮುಂಗಾರು ಮಳೆ ಆರಂಭವಾಗುವ ಮೊದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದ್ದು, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹಾಗೂ ಭೂ ವಿಜ್ಞಾನ ಸಚಿವಾಲಯಗಳ ಸಮನ್ವಯದೊಂದಿಗೆ ದಕ್ಷಿಣ ಕನ್ನಡಕ್ಕೆ ವಿಶೇಷ ಕರಾವಳಿ ಸಂರಕ್ಷಣಾ ಯೋಜನೆಯನ್ನು ರೂಪಿಸಬೇಕು ಮತ್ತು ಮೀಸಲಿಟ್ಟ ಹಣಕಾಸಿನ ನೆರವನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು ಎಂದು ಕ್ಯಾ. ಚೌಟ ಒತ್ತಾಯಿಸಿದರು. ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಮೂಲಕ ಮೀನುಗಾರರ ಬದುಕನ್ನು ಸುರಕ್ಷಿತಗೊಳಿಸಲು ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕೆಂದು ಅವರು ಆಗ್ರಹಿಸಿದರು.

Category
ಕರಾವಳಿ ತರಂಗಿಣಿ