image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕುಮಾರಸ್ವಾಮಿ ಮಂಡ್ಯದಲ್ಲೊಂದು ಟ್ರಾನ್ಸ್ ಫಾರ್ಮರ್ ಹಾಕಿಸಲಿ : ಡಿ.ಕೆ.ಶಿವಕುಮಾರ್ ಸವಾಲು

ಕುಮಾರಸ್ವಾಮಿ ಮಂಡ್ಯದಲ್ಲೊಂದು ಟ್ರಾನ್ಸ್ ಫಾರ್ಮರ್ ಹಾಕಿಸಲಿ : ಡಿ.ಕೆ.ಶಿವಕುಮಾರ್ ಸವಾಲು


ಬೆಂಗಳೂರು : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಾವು ಪ್ರತಿನಿಧಿಸುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲೊಂದು ವಿದ್ಯುತ್ ಟ್ರಾನ್ಸ್ ಫಾರ್ಮರ್ ಹಾಕಿಸಲಿ ನೋಡೋಣ ಎಂದು ಉಪಮುಖ್ಯಮಂತ್ರಿಯೂ ಆದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.

ಮಾಗಡಿಯ ಚಕ್ರಬಾವಿಯಲ್ಲಿ ನಡೆದ ವೈ.ಜಿ.ಗುಡ್ಡ ಏತನೀರಾವರಿ ಯೋಜನೆಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಮಂಡ್ಯ ಸಂಸದರಾಗಿದ್ದಾರೆ. ಕೇಂದ್ರ ಸರಕಾರದಿಂದ ಹಣ ತಂದು ಮಂಡ್ಯದ ರೈತರಿಗೆ ಟ್ರಾನ್ಸ್ ಫಾರ್ಮರ್ ಹಾಕಿಸಲಿ ಆಗ ಅವರ ಸಾಮರ್ಥ್ಯ ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿದರು.


ರೈತರ ಪಂಪ್ ಸೆಟ್‌ಗಳಿಗೆ 10 ಎಚ್‌ಪಿ ಉಚಿತ ವಿದ್ಯುತ್‌ ನೀಡಿದ್ದು ಕಾಂಗ್ರೆಸ್ ಸರಕಾರ. ರಾಜ್ಯದ 2.20 ಲಕ್ಷ ಜನರಿಗೆ ಆಸ್ತಿ ದಾಖಲೆ ನೀಡುವ ಮೂಲಕ ಭೂಮಿ ಗ್ಯಾರಂಟಿ ನೀಡಿದ್ದೇವೆ. ವಿಧಾನಸಭೆಯ ವಿಪಕ್ಷ ನಾಯಕ ಅಶೋಕ್ ನಿಮ್ಮ ಅವಧಿಯಲ್ಲಿ, ಜನತಾ ದಳದ ಅವಧಿಯಲ್ಲಿ ಇಂತಹ ಕೆಲಸ ಮಾಡಲು ಆಗುತ್ತಿರಲಿಲ್ಲವೇ? ಉಳುವವನಿಗೆ ಭೂಮಿ, ಬಗರ್ ಹುಕ್ಕುಂ, ಅರಣ್ಯ ಭಾಗದ ರೈತರಿಗೆ ಜಮೀನು ಸೇರಿದಂತೆ ರೈತರ ಪರವಾಗಿ ಹೊಸದಿಲ್ಲಿಯಲ್ಲಾದರೂ ಸರಿ,

ರಾಜ್ಯದಲ್ಲಾದರೂ ಸರಿ ಯೋಜನೆ ರೂಪಿಸಿದ್ದರೆ ಅದು ಕಾಂಗ್ರೆಸ್ ಮಾತ್ರ. ಇಂತಹ ಒಂದೇ ಒಂದು ಕೆಲಸ ಮಾಡಲು ಆಗದಿದ್ದರೆ ಮತ್ತೆ ಏಕೆ ಜನ ಮತ ಹಾಕಬೇಕು? ಎಂದು ಕೇಳಿದರು.
ನಾನು ಇಲ್ಲಿ ನಮ್ಮ ಕೆಲಸವನ್ನು ತೋರಿಸಲು ನಿಂತಿದ್ದೇನೆ ಹೊರತು, ಮುಂದೆ ಇಂತಹ ಕೆಲಸ ಮಾಡುತ್ತೇನೆ ಎಂದು ಹೇಳಲು ನಿಂತಿಲ್ಲ. ಶಾಸಕರಾಗಿ, ಸಂಸದರಾಗಿ ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವರು ಇಲ್ಲಿಗೆ ಬಂದು ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡುತ್ತಾರೆ.

ನಾಳೆ ಕೆಲಸ ಮಾಡುತ್ತೇವೆ ಎಂಬುದು ಶತೃತ್ವ, ಇವತ್ತೇ ಕೆಲಸ ಮಾಡುತ್ತೇವೆ ಎಂಬುದು ಮಿತ್ರತ್ವ ನಾಳೆ ಯಾರು ಇರುತ್ತಾರೋ ಇರುವುದಿಲ್ಲವೋ ಗೊತ್ತಿಲ್ಲ. ಅಧಿಕಾರ ಇದ್ದಾಗ ನಾವು ಏನು ಮಾಡಿದೆವು ಎಂಬುದು ಮುಖ್ಯ ನಮ್ಮದು ನಾಳೆ ಎನ್ನುವ ಸರಕಾರವಲ್ಲ, ಇಂದೇ ಎನ್ನುವ ಸರಕಾರ ಎಂದು ಅವರು ತಿಳಿಸಿದರು.

Category
ಕರಾವಳಿ ತರಂಗಿಣಿ